ಕಲಬುರಗಿ: ರೈತ ವರ್ಗಕ್ಕೆ ಮಾರಕವಾಗರುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದವನ್ನು ಭಾರತ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ನ.4ರಂದು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಲಾಗಿದೆ ಎಂದು ಅಖೀಲ ಭಾರತ ಕಿಸಾನ ಸಭಾ ರಾಜ್ಯ ಮುಖಂಡ ಮೌಲಾ ಮುಲ್ಲಾ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಸಿಇಪಿ ಒಪ್ಪಂದದಿಂದ ಆಹಾರ, ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬೀಳಲಿದೆ. ಇದರಿಂದ ರೈತರನ್ನು ಮೂಲೆ ಗುಂಪು ಮಾಡುವ ಹುನ್ನಾರ ನಡೆದಿದೆ. ಆರ್‌ಸಿಇಪಿಕ್ಕೆ ಭಾರತ ಸೇರಬಾರದು ಮತ್ತು ಇತರ ಎಲ್ಲ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಕೃಷಿ ಕ್ಷೇತ್ರ ಹೊರಗಿಡಬೇಕು ಎಂದು ಆಗ್ರಹಿದರು.
ದೊಡ್ಡ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ, ಜಪಾನ್, ದಕ್ಷಿಣ ಕೊರಿಯಾ, ನ್ಯೂಜಿಲೆಂಡ್ ಸೇರಿದಂತೆ 16 ದೇಶಗಳು ಆರ್‌ಸಿಇಪಿ ಒಪ್ಪಂದದಲ್ಲಿವೆ. ಆದರೆ, ಕೃಷಿ ಆಧಾರಿತ ಮತ್ತು ಬಡತನದ ದೇಶವಾಗಿದೆ. ಆರ್‌ಸಿಇಪಿ ಒಪ್ಪಂದ ಮಾಡಿಕೊಂಡರೆ ಭಾರತಕ್ಕೆ ಆಮದಾಗುವ ಹದಿನಾರು ದೇಶಗಳ ಕೃಷಿ ಹಾಗೂ ಹಾಲು ಉತ್ಪನ್ನಗಳಿಗೆ ಕೇಂದ್ರ ಸರ್ಕಾರವು ಈಗ ವಿಧಿಸುತ್ತಿರುವ ಶೇ.25ರಿಂದ 30ರಷ್ಟು ಸುಂಕವನ್ನು ಶೂನ್ಯಕ್ಕೆ ಇಳಿಸಲು ಸಮ್ಮತಿಸಬೇಕಾದ ಆತಂಕ ಎದುರಾಗಿದೆ ಎಂದರು. ಆರ್‌ಸಿಇಪಿ ಒಪ್ಪಂದದಿಂದ ತಡೆ ರಹಿತವಾಗಿ ಅಗ್ಗದ ವಿದೇಶಿ ಹಾಲು, ಹಾಲಿನ ಪುಡಿ ಸೇರಿದಂತೆ ಹೈನು ಉತ್ಪನ್ನ ಹಾಗೂ ತೊಗರಿ, ತೆಂಗು, ಅಡಿಗೆ ಎಣ್ಣೆ, ಮಸಾಲೆ ಪದಾರ್ಥಗಳು ಬೃಹತ್ ಪ್ರಮಾಣದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸುತ್ತವೆ. ಕೃಷಿ ಮತ್ತು ಹೈನುಗಾರಿಕೆ ದೇಶದ ಜೀವಾಳವಾಗಿದ್ದು, ಅದು ಸಂಪೂರ್ಣ ನಾಶವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕರ್ನಾಟಕದಲ್ಲೇ ದಿನಕ್ಕೆ ಸುಮಾರು 80ರಿಂದ 86 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಸುಮಾರು 60 ಲಕ್ಷ ಜನರಿಗೆ ಜೀವನಾಧಾರವಾಗಿದೆ. ಆದ್ದರಿಂದ ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಸಲು ದೇಶಾದ್ಯಂತ ಅಂದು ಪ್ರತಿಭಟನೆ ನಡೆಯಲಿದೆ. ಅಂತೆಯೇ ಜಿಲ್ಲೆಯಲ್ಲಿ ರೈತ ಕೃಷಿ ಕಾರ್ಮಿಕರ ಸಂಘಟನೆ, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಅಖೀಲ ಭಾರತ ಕಿಸಾನ ಸಭಾ ವತಿಯಿಂದ ನಗರದ ಜಿಲ್ಲಾ ಧಿಕಾರಿಗಳ ಕಚೇರಿ ಮುಂದೆ 11:00ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು. ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥ ಸಿಂಗೆ ಸುದ್ದಿಗೋಷ್ಠಿಯಲ್ಲಿದ್ದರು.