Advertisement

ರಾತ್ರಿವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ

02:56 PM Aug 04, 2020 | mahesh |

ಹರಿಹರ: ಕೋವಿಡ್ ಹಿನ್ನೆಲೆಯಲ್ಲಿ ನಗರದಲ್ಲಿಜಾರಿ ಮಾಡಲಾಗಿದ್ದ ಭಾಗಶಃ ಲಾಕ್‌ಡೌನ್‌ ತೆರವುಗೊಳಿಸಲಾಗಿದ್ದು ವ್ಯಾಪಾರ ವಹಿವಾಟನ್ನು ರಾತ್ರಿವರೆಗೂ ನಡೆಸಬಹುದಾಗಿದೆ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

Advertisement

ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಅನ್‌ಲಾಕ್‌ ನಿಯಮವನ್ನು ಜಾರಿಗೆ ತಂದಿವೆ. ಅದರಂತೆ ತಾಲೂಕಿನಲ್ಲೂ ಜಾರಿ ಮಾಡಲಾಗುತ್ತಿದೆ ಎಂದರು. ಸೋಮವಾರದಿಂದ ತಾಲೂಕಿನಲ್ಲಿ ವ್ಯಾಪಾರ ವಹಿವಾಟಿಗೆ ಯಾವುದೇ ಸಮಯದ ಮಿತಿಯಿಲ್ಲ. ಆದರೆ ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್‌, ಮಾಸ್ಕ್ ಬಳಕೆ ಸೇರಿದಂತೆ ಸರಕಾರದ ನಿಯಮಾವಳಿಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದರು.

ಗುತ್ತೂರಿನ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಕುಡಿಯಲು ಬಿಸಿನೀರು, ಕಷಾಯ, ಆಹಾರ ವಿತರಣೆ ಸೇರಿದಂತೆ ಅಗತ್ಯ ಸೌಲಭ್ಯಗಳಲ್ಲಿ ನ್ಯೂನತೆ ಇದೆ. ಅಲ್ಲಿರುವವರಿಗೆ ಉತ್ತಮವಾಗಿ ಆರೈಕೆ ಮಾಡಿದರೆ ಬೇಗನೆ ಗುಣಮುಖರಾಗುತ್ತಾರೆ. ಹಣದ ಕೊರತೆ ಇದ್ದರೆ ಡಿಸಿಯವರ ಗಮನ ಸೆಳೆಯಲಾಗುವುದೆಂದರು. ಸೋಂಕಿತರ ಅಕ್ಕಪಕ್ಕದ 1 ಅಥವಾ 2 ಮನೆಗಳ ಪ್ರದೇಶ ಮಾತ್ರ ಸೀಲ್‌ಡೌನ್‌ ಮಾಡಿ. ದೂರುಗಳು ಬಾರದಂತೆ ಎಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂತೆಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅಸಾಧ್ಯ. ಹೀಗಾಗಿ ಸರ್ಕಾರದಿಂದ ಮುಂದಿನ ಅದೇಶ ಬರುವವರೆಗೂ ವಾರದ ಸಂತೆಯನ್ನು ರದ್ದು ಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಎಸ್‌. ಲಕ್ಷ್ಮೀ ಹೇಳಿದರು.

ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಅಧಿಕಾರಿಗಳು ಗಂಟಲು ದ್ರವ ಪರೀಕ್ಷೆಗೆಂದು ತೆರಳಿದಾಗ ಸಾರ್ವಜನಿಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ಆ ಭಾಗದ ಜನಪ್ರತಿನಿಧಿಗಳು, ಮುಖಂಡರು ನಿವಾಸಿಗಳಿಗೆ ತಿಳಿ ಹೇಳಿ ಕೊರೊನಾ ತಪಾಸಣೆಗೆ ಸ್ಪಂದಿಸುವಂತೆ ಮನವೊಲಿಸಬೇಕು ಎಂದರು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಮೋಹನ್‌, ಸಿಪಿಐ ಶಿವಪ್ರಸಾದ್‌, ಆಸ್ಪತ್ರೆಯ ಮುಖ್ಯಸ್ಥ ಡಾ| ಹನುಮ ನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಪರಮೇಶ್ವರಪ್ಪ, ಬಿಸಿಎಂ ಅಧಿಕಾರಿ ಜಗದೀಶ್‌, ನಗರಸಭಾ ಸದಸ್ಯ ಶಂಕರ್‌ ಖಟಾವ್‌ ಕರ್‌, ಎಂ.ಬಿ. ಆಬಿದ್‌ ಅಲಿ ಮತ್ತಿತರರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next