ಮಂಡ್ಯ: ರೈತರೇ ಎಲ್ಲಾ ಹಂಗಾಮುಗಳ ಬೆಳೆ ಸಮೀಕ್ಷೆಗೆ ಸರ್ಕಾರ ಈ ಬಾರಿ ರೈತರಿಗೆ ಅವಕಾಶ ನೀಡಲಾಗಿದೆ. ರೈತರು ತಮ್ಮ ಮೊಬೈಲ್‌ನಿಂದ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಸ್ವತಃ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ, ವಿಸ್ತೀರ್ಣ, ನೀರಾವರಿ ಮಾಹಿತಿಯನ್ನು ನಿಖರವಾಗಿ ಆ.24ರೊಳಗೆ ದಾಖಲಿಸಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಡೀಸಿ ಡಾ. ಎಂ.ವಿ.ವೆಂಕಟೇಶ್ ಹೇಳಿದರು.
ಜಿಲ್ಲಾಧಿಕಾರಿಗಳ ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ರೈತರು ಸ್ವತಃ ಬೆಳೆ ಮಾಹಿತಿ ದಾಖಲಿಸದಿದ್ದಲ್ಲಿ ಆ.24ರಿಂದ ಖಾಸಗಿ ನಿವಾಸಿಗಳು ಸಮೀಕ್ಷೆ ಕೈಗೊಳ್ಳಲಿದ್ದಾರೆ. ಸದರಿ ಸಮೀಕ್ಷೆಯನ್ನು ಜಿಲ್ಲಾಡಳಿತ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಹಾಗೂ ನೀರಾವರಿ ಇಲಾಖೆಗಳ ಸಹಯೋಗದಿಂದ ಕಾರ್ಯಗತಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಬೆಳೆ ಸಮೀಕ್ಷೆ ಕೈಗೊಳ್ಳಲು ಅವಶ್ಯಕತೆ ಇರುವ ಎಲ್ಲಾ ಖಾಸಗಿ ನಿವಾಸಿಗಳು, ಮಾಸ್ಟರ್ ತರಬೇತುದಾರರು, ಮೇಲ್ವಿಚಾರಣಾ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಬೆಳೆ ಸಮೀಕ್ಷೆ ಮಾಹಿತಿಯು ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನ ಅವಶ್ಯವಿದೆ. ಸಮೀಕ್ಷೆಯ ಮಾಹಿತಿಯನ್ನು ಬೆಂಬಲ ಬೆಲೆ, ಪ್ರಕೃತಿ ವಿಕೋಪ ಪರಿಹಾರ, ಬೆಳೆ ವಿಮೆ, ಬೆಳೆ ಸಾಲ, ಬೆಳೆ ಕಟಾವು ಪ್ರಯೋಗ ಹಾಗೂ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಟಾನಕ್ಕಾಗಿ ಬಳಸಿಕೊಳ್ಳಲಾಗುವುದು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಬಿ.ಎಸ್. ಚಂದ್ರಶೇರ್ಖ, ಕಬ್ಬು ತಳಿ ವಿಜ್ಞಾನಿಗಳಾದ ಡಾ.ಕೇಶವಯ್ಯ, ಜಿಲ್ಲಾ ಸಂಖ್ಯೆ ಸಂಗ್ರಹ ಅಧಿಕಾರಿಗಳಾದ ಶಿವಮ್ಮ ಮತ್ತು ವಿಕಸನ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾದ ಮಹೇಶ್ಚಂದ್ರ ಗುರು, ಲೀಡ್ ಬ್ಯಾಂಕ್ ನ ವ್ಯವಸ್ಥಾಪಕರಾದ ಎನ್.ಕದರಪ್ಪ ಉಪಸ್ಥಿತರಿದ್ದರು.