Advertisement

ಹಸಿರು ವಲಯಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ : ಉದ್ಧವ್

07:15 AM May 22, 2020 | Suhan S |

ಮುಂಬಯಿ, ಮೇ 21: ಬಾಲಿವುಡ್‌ನ‌ ತವರು ಮನೆಯಾದ ಮಹರಾಷ್ಟ್ರದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸರಿಯಾಗಿ ಪಾಲಿಸಿಕೊಂಡು ಚಿತ್ರೀಕರಣ ಮತ್ತು ಪೋಸ್ಟ್‌ ಪ್ರೋಡಕ್ಸನ್‌ ಕೆಲಸಗಳನ್ನು ನಡೆಸುವುದಾದರೆ ಚಿತ್ರರಂಗ ತನ್ನ ಕೆಲಸಗಳನ್ನು ಮುಂದುವರಿಸಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಹೇಳಿದ್ದಾರೆ.

Advertisement

ಈ ಕುರಿತು ಸಭೆ ನಡೆಸಿದ ಉದ್ಧವ್‌ ಅವರು, ಮರಾಠಿ ಚಲನಚಿತ್ರ, ನಾಟಕ ಕ್ಷೇತ್ರ ಮತ್ತು ಸಿನೇಮಾದ ಪ್ರಮುಖ ನಿರ್ಮಾಪಕರು ಮತ್ತು ನಟರ ಜತೆ ಮಾತುಕತೆ ನಡೆಸಿದರು. ಕೋವಿಡ್ ಸೋಂಕು ಹಿನ್ನೆಲೆ ಚಿತ್ರೀಕರಣ ಮತ್ತು ಪೋಸ್ಟ್‌ ಪ್ರೊಡಕ್ಸನ್‌ ಸಂದರ್ಭ ಸಾಮಾಜಿಕ ಅಂತರ ಸೇರಿದಂತೆ ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದ್ದಾರೆ.

ಅತಂತ್ರ ಸ್ಥಿತಿಯಲ್ಲಿ ಸುಮಾರು 3 ಲಕ್ಷ ಕಾರ್ಮಿಕರು : ಈ ಸಂದರ್ಭ ಮಾತನಾಡಿದ ನಿರ್ಮಾಪಕ ನಿತೀನ್‌ ವೈದ್ಯ ಅವರು, ಕೊರೊನಾ ಹಿನ್ನೆಲೆ 70 ಹಿಂದಿ, 40 ಮರಾಠಿ ಬಾಷೆಯ ಸೇರಿದಂತೆ 110 ದಾರವಾಹಿಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಸುಮಾರು 3 ಲಕ್ಷ ಕಾರ್ಮಿಕರು ಮತ್ತು ತಂತ್ರಜ್ಞರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಲಾಕ್‌ಡೌನ್‌ನಿಂದ ಕಾರ್ಮಿಕರು, ಕಲಾವಿದರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದರು.

ಈ ಸಂದರ್ಭ ಸಿಎಂ ಅವರಿಗೆ ತಮ್ಮ ಬೇಡಿಕೆಗಳನ್ನಿರಿಸಿದ ಅವರು, ಕಡಿಮೆ ಬಡ್ಡಿ ದರದಲ್ಲಿ ಸಾಲ, ಬಡ ಸಂಗೀತಗಾರರಿಗೆ ಸಹಾಯ, ಮರಾಠಿ ಚಿತ್ರಗಳಿಗೆ ಸಹಾಯಧನ, ಚಲನಚಿತ್ರ ನಿರ್ಮಾಣದಲ್ಲಿ ಜಿಎಸ್‌ಟಿ ಮನ್ನಾ ಮತ್ತು ಸಾಂಗ್ಲಿ-ಕೊಲ್ಹಾಪುರದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಹಸಿರು, ಕೇಸರಿ ವಲಯಗಳಲ್ಲಿ ಚಿತ್ರೀಕರಣಕ್ಕೆ ಅವಕಾಶ : ಈ ಸಂದರ್ಭ ಮಾತನಾಡಿದ ಉದ್ಧವ್‌ ಠಾಕ್ರೆ ಅವರು, ಹಸಿರು ಅಥವಾ ಕೇಸರಿ ವಲ ಯಗಳಲ್ಲಿ ಸಾಮಾಜಿಕ ಅಂತರ ನಿಯಮ ಪಾಲಿಸುವ ಮೂಲಕ ಮತ್ತು ಲಾಕ್‌ಡೌನ್‌ ನಿರ್ಬಂಧಗಳನ್ನು ಅನುಸರಿಸುವುದರ ಜತೆಗೆ ಚಿತ್ರೀಕರಣವನ್ನು ಪ್ರಾರಂಭಿಸಬಹುದು ಎಂದರು. ಸ್ಟುಡಿಯೋಗಳಲ್ಲಿ ನಡೆಯುವ ಪೊಸ್ಟ್‌ ಪ್ರೋಸೆಸ್ಸಿಂಗ್‌ ಕೆಲಸಗಳಿಗೆ ಅನುಮತಿ ನೀಡಬೇಕಾದರೆ ಸ್ಟುಡಿಯೋಗಳ ಸ್ಥಳಾವಕಾಶ ಮತ್ತು ಹವಾನಿಯಂತ್ರಣ ವ್ಯವಸ್ಥೆಯ ಬಳಕೆಯ ಕುರಿತು ಸಾಂಕೃತಿಕ ವ್ಯವಹಾರಗಳ ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಠಾಕ್ರೆ ಅವರು ಹೇಳಿದರು.

Advertisement

ಬಾಲಿವುಡ್‌ ಚಿತ್ರೊದ್ಯಮದ ಬಗ್ಗೆ ಚಿಂತನೆ : ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ತಕ್ಷಣ ಪ್ರತಿಕ್ರಿಯಿಸುವುದು ಕಷ್ಟವಾಗಿದೆ. ಪ್ರಸ್ತುತ ನನ್ನ ಮೇಲೆ ಸಂಪೂರ್ಣ ರಾಜ್ಯದ ಜವಾಬ್ದಾರಿಯಿದೆ. ಸೂಕ್ತ ಸಮಯಕ್ಕೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಕೋವಿಡ್ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಶಿಶ್‌ ಕುಮಾರ್‌ ಸಿಂಗ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ವಿಕಾಸ್‌ ಖರ್ಗೆ, ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿ ಡಾ| ಸಂಜಯ್‌ ಮುಖರ್ಜಿ ಮತ್ತು ಹಲವಾರು ಪ್ರಖ್ಯಾತ ನಿರ್ಮಾಪಕರು ಮತ್ತು ಕಲಾವಿದರು ಭಾಗವಹಿಸಿದ್ದಾರೆ ಎಂದು ಠಾಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next