Advertisement

ಸತ್ಯದರ್ಶನ ಸಭೆಗೆ ದೊರೆಯದ ಅವಕಾಶ

10:05 AM Feb 25, 2020 | Lakshmi GovindaRaj |

ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ, ಭಾನುವಾರ ಇಲ್ಲಿನ ಮೂರುಸಾವಿರ ಮಠದ ಅಂಗಳದಲ್ಲಿ ಕರೆದಿದ್ದ ಸತ್ಯದರ್ಶನ ಸಭೆಗೆ ಪೊಲೀಸರು ಅವಕಾಶ ನೀಡಲಿಲ್ಲ.

Advertisement

ನಗರದ ವಿವಿಧ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ, ನಂತರ ತಮ್ಮ ನೂರಾರು ಭಕ್ತರೊಂದಿಗೆ ಮಧ್ಯಾಹ್ನ 12:45 ಗಂಟೆ ಸುಮಾರಿಗೆ ಮೂರುಸಾವಿರ ಮಠಕ್ಕೆ ಆಗಮಿಸಿದ ದಿಂಗಾಲೇಶ್ವರ ಸ್ವಾಮೀಜಿಯವರಿಗೆ ಪೊಲೀಸರು ಮಠ ಪ್ರವೇಶಿಸಲು ಅವಕಾಶ ನೀಡದೆ ಮಠದ ಮುಖ್ಯದ್ವಾರದಲ್ಲೇ ತಡೆದರು.

ಸ್ವಾಮೀಜಿಯವರು ಶ್ರೀಮಠದ ಮುಖ್ಯ ದ್ವಾರದ ಹೊರಗಡೆ ರಸ್ತೆಯಲ್ಲಿಯೇ ಭಕ್ತರನ್ನು ದ್ದೇಶಿಸಿ ಮಾತನಾಡಿ ಸಭೆ ಮುಗಿಸಿದರು. ಸಭೆ ನಂತರ ಮೂರುಸಾವಿರ ಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಗದ್ದುಗೆ ದರ್ಶನಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ಎಲ್ಲರನ್ನೂ ಒಳ ಬಿಡಲಾಯಿತು. ಸ್ವಾಮೀಜಿ ಗದ್ದುಗೆ ದರ್ಶನ ಪಡೆದು ಹೊರ ನಡೆದರು. ಮಠದೊಳಗೆ ಯಾವುದೇ ಸಭೆಗೆ ಅವಕಾಶ ನೀಡಲಿಲ್ಲ.

ಸಭೆಗೆ ಅವಕಾಶ ದೊರೆಯಲಿಲ್ಲ: ಶ್ರೀಮಠದ ಉತ್ತರಾಧಿಕಾರಿಯನ್ನಾಗಿ ತಮ್ಮನ್ನು ನೇಮಕ ಮಾಡಿ ನೇಮೂಣಕಿ ಪತ್ರ ಮಾಡಿದ್ದು, ಅದರ ಬಗ್ಗೆ ಮೂರುಸಾವಿರ ಮಠದ ಜಗದ್ಗುರುಗಳು, ಉನ್ನತ ಸಮಿತಿಯವರು ಸ್ಪಷ್ಟನೆ ನೀಡಬೇಕು, ಕೆಲವರು ತಮ್ಮ ವಿರುದ್ಧ ಆರೋಪಗಳನ್ನು ಮಾಡಿ ದ್ದು, ಅವುಗಳ ಬಗ್ಗೆ ದಾಖಲೆಗಳನ್ನು ನೀಡ ಬೇಕೆಂದು ದಿಂಗಾಲೇಶ್ವರ ಸ್ವಾಮೀಜಿ ಮೂರು ಸಾವಿರ ಮಠದ ಅಂಗಳದಲ್ಲಿಯೇ ಸತ್ಯದರ್ಶನ ಸಭೆ ಕರೆಯುವುದಾಗಿ ಘೋಷಿಸಿದ್ದರು.

ಭಾನುವಾರ ತಮ್ಮ ಭಕ್ತರೊಂದಿಗೆ ಶ್ರೀಮಠಕ್ಕೆ ಆಗಮಿಸಿ ಸಭೆ ನಡೆಸುವುದಾಗಿ ಹೇಳಿದ್ದರು. ಮಠದ ಒಳಗಡೆ ಸಭೆ ನಡೆಸಲು ಶನಿವಾರ ರಾತ್ರಿವರೆಗೂ ಪರವಾನಗಿಗೆ ತೀವ್ರ ಯತ್ನ ಮಾಡಲಾಗಿತ್ತಾದರೂ, ಪೊಲೀಸರು ಸಭೆಗೆ ಪರವಾನಗಿ ನೀಡಲಿಲ್ಲ. ದಿಂಗಾಲೇಶ್ವರ ಸ್ವಾಮೀಜಿ ಪರವಾಗಿದ್ದ ಭಕ್ತರು, ಸಭೆ ನಡೆಸಲು ಅಗತ್ಯ ಪೆಂಡಾಲ್‌ ವ್ಯವಸ್ಥೆ ಮಾಡುವುದಾಗಿ ರಾತ್ರಿವರೆಗೂ ಹೇಳಿದ್ದರಾದರೂ ಅದಕ್ಕೂ ಅವಕಾಶ ನೀಡಲಾಗಲಿಲ್ಲ.

Advertisement

ಮಲ್ಲಿಕಾರ್ಜುನ ಶ್ರೀಗೂ ಅವಕಾಶ ನೀಡಲಿಲ್ಲ: ಇನ್ನೊಂದು ಕಡೆ ಶ್ರೀಮಠಕ್ಕೆ ತಮ್ಮನ್ನು ಉತ್ತರಾಧಿ ಕಾರಿ ಎಂದು 1998ರಲ್ಲಿಯೇ ನೇಮಕ ಕೈಗೊಂಡು ನೋಂದಣಿ ಮಾಡಲಾಗಿದೆ ಎಂದು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಮಲ್ಲಿಕಾರ್ಜುನ ಸ್ವಾಮೀ ಜಿ ಯವರು ತಮ್ಮ ಭಕ್ತರೊಂದಿಗೆ ಶ್ರೀಮಠಕ್ಕೆ ಆಗಮಿಸಲು ಮುಂದಾಗಿದ್ದರಿಂದ ಶ್ರೀಮಠದ ಆವರಣದಲ್ಲಿ ಗೊಂದಲಮಯ ಸ್ಥಿತಿಗೆ ಕಾರಣವಾಗಿತ್ತಾದರೂ, ಪೊಲೀಸರು ಯಾವುದೇ ಗೊಂದಲಕ್ಕೂ ಅವಕಾಶ ನೀಡದೆ ಪರಿಸ್ಥಿತಿಯನ್ನು ಸೂಕ್ಷ್ಮ ರೀತಿಯಲ್ಲಿ ನಿಭಾಯಿಸಿದರು.

ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀ ಗುರುಸಿದ್ದೇಶ್ವರ ಗದ್ದುಗೆ ದರ್ಶನ ಪಡೆದು ಶ್ರೀಮಠದ ಒಳಗೆ ಹೋಗಲು, ಮಠದ ಆವರಣದಲ್ಲೇ ಭಕ್ತರನ್ನುದ್ದೇ ಶಿಸಿ ಮಾತನಾಡಲು ಮಲ್ಲಿಕಾರ್ಜುನ ದೇವರು ಮುಂದಾದರಾದರೂ ಪೊಲೀಸರು ಅವಕಾಶ ನೀಡಲಿಲ್ಲ. ದಿಂಗಾಲೇಶ್ವರ ಸ್ವಾಮೀಜಿಯವರಿಗೂ ಅವಕಾಶ ನೀಡಿಲ್ಲ. ನಿಮಗೂ ಅವಕಾಶ ನೀಡ ಲಾಗದು ಎಂದು ಹೇಳಿ ಹೊರ ಕಳುಹಿಸಿದರು.

ರಾತ್ರಿ ನಡೆದಿತ್ತೇ ಸಂಧಾನ?: ಭಾನುವಾರದ ಸತ್ಯದರ್ಶನ ಸಭೆ ತಡೆಯುವ ನಿಟ್ಟಿನಲ್ಲಿ ಶನಿವಾರ ತಡರಾತ್ರಿವರೆಗೂ ಸಂಧಾನ ಯತ್ನ ನಡೆಯಿತೆಂದು ಹೇಳಲಾಗುತ್ತಿದೆ. ಮೂರುಸಾವಿರ ಮಠ ದೊಡ್ಡ ಪರಂಪರೆ ಹೊಂದಿದ ಪ್ರತಿಷ್ಠಿತ ಮಠವಾಗಿದ್ದು, ಇಂತಹ ಮಠದ ವಿಚಾರ ಬೀದಿರಂಪ ಆಗುವುದು ಬೇಡ. ಎರಡೂ ಕಡೆಯವರು ಮಾತುಕತೆ ನಡೆಸಿ, ಭಾನುವಾರದ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಿ ಎಂದು ಸಂಘ ಪರಿವಾರ ಸಲಹೆ ನೀಡಿತ್ತು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿಯೇ ಉನ್ನತ ಸಮಿತಿ ಸದಸ್ಯರೊಬ್ಬರು ರಾತ್ರಿ ದಿಂಗಾಲೇಶ್ವರ ಸ್ವಾಮೀಜಿಯವರನ್ನು ಭೇಟಿ ಮಾಡಿ, ಸಮಾಜದ ಹಿತದೃಷ್ಟಿಯಿಂದ ಸತ್ಯದರ್ಶನ ಸಭೆಯಿಂದ ಹಿಂದೆ ಸರಿಯಿರಿ, ನಂತರ ಉನ್ನತ ಸಮಿತಿ ಹಾಗೂ ಇತರೆ ಮುಖಂಡರು ಸೇರಿ ಏನೆಂದು ನಿರ್ಣಯಿಸಿದರಾಯಿತೆಂದು ಹೇಳಿದರು ಎನ್ನಲಾಗಿದ್ದು, ಸಂಧಾನ ಸಫ‌ಲವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿಚಾರವನ್ನು ಶ್ರೀಮಠದ ಉನ್ನತ ಸಮಿತಿಯವರು 45 ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ.
-ದಿಂಗಾಲೇಶ್ವರ ಶ್ರೀ, ಬಾಲೇಹೊಸೂರು

Advertisement

Udayavani is now on Telegram. Click here to join our channel and stay updated with the latest news.

Next