ವೇಣೂರು : ಆರಂಬೋಡಿ ಗ್ರಾಮ ಪಂಚಾಯತ್‌ನ 2018- 19ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಎಚ್. ಅಧ್ಯಕ್ಷತೆಯಲ್ಲಿ ಹೊಕ್ಕಾಡಿಗೋಳಿ ಸ.ಹಿ.ಪ್ರಾ. ಶಾಲೆಯಲ್ಲಿ ಜರಗಿತು. ವೇಣೂರು ಪಶು ಆಸ್ಪತ್ರೆಯ ವೈದ್ಯಾಧಿಕಾರಿ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ನಡೆಸಿಕೊಟ್ಟರು. ಕಂದಾಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, 94ಸಿ ಯೋಜನೆಯಡಿ ಸೆ.16ರವರೆಗೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು. ಅಡಿಕೆ ಕೊಳೆ ರೋಗ ಸಂತ್ರಸ್ತರು ಅರ್ಜಿ ಸಲ್ಲಿಸಬಹು ಎಂದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ತಂಬಾಕು ನಿಷೇಧ ಸಮಿತಿ
ಶಿಕ್ಷಣ ಇಲಾಖೆಯ ಅಧಿಕಾರಿ ಮಾಹಿತಿ ನೀಡಿ, ಒಂದು ಜತೆ ಸಮವಸ್ತ್ರವನ್ನು ಈಗಾಗಲೇ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ತಲುಪಿದೆ. ಇನ್ನೊಂದು ಜತೆ ಶೀಘ್ರ ಶಾಲೆಗಳಿಗೆ ಸಿಗಲಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಲ್ಲಿ ಎಲ್ಲ ಶಾಲೆಗಳಲ್ಲಿ ತಂಬಾಕು ನಿಷೇಧ ಸಮಿತಿ ರಚಿಸುವ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದರು.
ಹನ್ನೆರಡು ಕವಲು ಪರಿಸರದಲ್ಲಿ ಅನಿಯಮಿತ ಪವರ್ ಕಟ್ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಯ ಗಮನಕ್ಕೆ ತಂದರು. ದೀನದಯಾಳ್ ಯೋಜನೆಯಡಿ ಹಾಕಲಾಗಿರುವ ಕೆಲವು ವಿದ್ಯುತ್ ಕಂಬಗಳು ವಾಲಿಕೊಂಡಿದ್ದು, ಸರಿಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಆರಂಬೋಡಿ ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಓಬಯ್ಯ ಆರಂಬೋಡಿ, ಗ್ರಾ.ಪಂ. ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು. ಪಂಚಾಯತ್ ಕಾರ್ಯದರ್ಶಿ ಸೋಮಶೇಖರ ವರದಿ ವಾಚಿಸಿ, ವಂದಿಸಿದರು. ಪಂಚಾಯತ್ ಸಿಬಂದಿ ಸಹಕರಿಸಿದರು.
ವಿದ್ಯಾರ್ಥಿವೇತನ
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಜನೆಗೈದು ಶೇ. 80ಕ್ಕಿಂತ ಹೆಚ್ಚಿನ ಅಂಕ ಪಡೆದ ಎಸೆಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪಡುಪಾಲ್ಜಾಲು ದಿ| ಪದ್ಮ ಪೂಜಾರಿ ಸ್ಮರಣಾರ್ಥ ಅವರ ಪುತ್ರ ಗ್ರಾ.ಪಂ. ಸದಸ್ಯ ಹರೀಶ್ ಕುಮಾರ್ ಅವರು ಒದಗಿಸಿದ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ವಿತರಿಸಲಾಯಿತು. ಪಂ.ನ ಪ.ಜಾತಿ ಮತ್ತು ಪ. ಪಂಗಡ ಅನುದಾನದಲ್ಲಿ 113 ಫಲಾನುಭವಿ ಕುಟುಂಬಗಳಿಗೆ ನೀರಿನ ಬ್ಯಾರೆಲ್‌ಗಳನ್ನು ವಿತರಿಸಲಾಯಿತು.