Advertisement
ದ.ಕ., ಉಡುಪಿ ಸಹಿತ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರಕಾರವು “ಸಖಿ’ ಸೆಂಟರ್‌ಗಳನ್ನು ಆರಂಭಿಸಿದ್ದ ಹಿನ್ನೆಲೆಯಲ್ಲಿ ಈ ಹಿಂದಿನಿಂದ ಇದ್ದ “ಸಾಂತ್ವನ ಕೇಂದ್ರ’ಗಳ ಆವಶ್ಯಕತೆ ಇಲ್ಲ ಎಂದು ಸರಕಾರ ಅವುಗಳನ್ನು ಮುಚ್ಚಲು ಆದೇಶಿಸಿತ್ತು. ಅದರಂತೆ 2021ರ ಎಪ್ರಿಲ್‌ನಲ್ಲಿ ಜಿಲ್ಲಾ ಸಾಂತ್ವನ ಕೇಂದ್ರಗಳು ಮುಚ್ಚಲ್ಪ ಟ್ಟಿದ್ದವು. ಆದರೆ ಮಹಿಳಾ ದೌರ್ಜನ್ಯ ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಜಿಲ್ಲಾ ಕೇಂದ್ರಗಳಲ್ಲಿ ಸಾಂತ್ವನ ಕೇಂದ್ರಗಳನ್ನು ಪುನರಾರಂಭಿಸಲಾಗುತ್ತಿದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವಿವಿಧ ನೆರವು ಒದಗಿಸುವ ಕೇಂದ್ರದ “ಸಖಿ’ ಸೆಂಟರ್ 2019ರ ಜ.26ರಿಂದ ಸರಕಾರಿ ಲೇಡಿಗೋಷನ್ ಸರಕಾರಿ ಆಸ್ಪತ್ರೆಯ ಕಟ್ಟಡ ದಲ್ಲಿ ಸೇವೆ ಒದಗಿಸುತ್ತಿದೆ. ಈಗ ಲೇಡಿಗೋಷನ್ ಆಸ್ಪತ್ರೆಯ ಆವರಣ ದಲ್ಲೇ ಇರುವ ನೂತನ ಎಂಸಿಎಚ್ ಕಟ್ಟಡದ ಎರಡನೇ ಅಂತಸ್ತಿನಲ್ಲಿ ಪ್ರತ್ಯೇಕವಾಗಿ ಸೇವೆ ಒದಗಿಸಲು ಸಿದ್ಧಗೊಳ್ಳುತ್ತಿದೆ. ಅಂದಾಜು 48 ಲ.ರೂ. ವೆಚ್ಚದಲ್ಲಿ ಇದನ್ನು ಸಿದ್ಧಗೊಳಿಸಲಾಗುತ್ತಿದೆ. “ಸಖಿ’ಯಲ್ಲಿ ತಿಂಗಳಿಗೆ ಸರಾಸರಿ 20ರಿಂದ 25 ಮಂದಿಗೆ ನೆರವು ಒದಗಿಸಲಾಗುತ್ತಿದೆ. ಉಡುಪಿ ಜಿಲ್ಲಾ ಕೇಂದ್ರದಲ್ಲಿ “ಸಖಿ’ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ 2015-16ರಿಂದ 2022ರ ಮಾರ್ಚ್ ಅಂತ್ಯದವರೆಗೆ ಒಟ್ಟು 669 ಪ್ರಕರಣಗಳಲ್ಲಿ ನೆರವು ಒದಗಿಸಲಾಗಿದೆ.
Related Articles
ಮಹಿಳಾ ಸಹಾಯವಾಣಿ 181ಗೆ ಕರೆ ಮಾಡಿದರೆ “ಸಖಿ ಅಥವಾ ಸಾಂತ್ವನ ಕೇಂದ್ರದ ನೆರವು ಪಡೆಯಬಹುದು. 112ಗೆ ಕರೆ ಮಾಡಿದರೂ ಸಲಹೆ ದೊರೆಯುತ್ತದೆ. “ಸಖಿ’ ಕೇಂದ್ರದಲ್ಲಿ ವಿವಿಧ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿ ಒಂದೇ ಸೂರಿನಡಿ ವಿವಿಧ ನೆರವನ್ನು ಉಚಿತವಾಗಿ ನೀಡಲಾಗುತ್ತಿದೆ. ಸಾಂತ್ವನ ಕೇಂದ್ರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುದಾನ ಒದಗಿಸುತ್ತಿದ್ದು, ವಿವಿಧ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಉಚಿತ ನೆರವು ಒದಗಿಸಲಾಗುತ್ತದೆ.
Advertisement
ಜಿಲ್ಲಾ ಕೇಂದ್ರಗಳ ಸಾಂತ್ವನ ಕೇಂದ್ರಗಳನ್ನು ಮತ್ತೆ ತೆರೆಯಲು ಸರಕಾರ ಆದೇಶ ನೀಡಿದ್ದು, ಅದರಂತೆ ತೆರೆಯಲಾಗಿದೆ. ಜತೆಗೆ ತಾಲೂಕುಗಳಲ್ಲಿಯೂ ಇವು ಕಾರ್ಯನಿರ್ವಹಿಸುತ್ತಿವೆ. ದೌರ್ಜನ್ಯಕ್ಕೊಳಗಾದ ಮಹಿಳೆಯರು ಸಖಿ ಅಥವಾ ಸಾಂತ್ವನ ಕೇಂದ್ರಗಳಲ್ಲಿ ನೆರವು ಪಡೆಯಬಹುದಾಗಿದೆ.-ಪಾಪಾ ಬೋವಿ, ಉಪನಿರ್ದೇಶಕರು,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಮಂಗಳೂರಿನಲ್ಲಿ 2001ರಲ್ಲಿ ಪ್ರಜ್ಞಾ ಸಲಹಾ ಕೇಂದ್ರದಿಂದ “ಸಾಂತ್ವನ ಕೇಂದ್ರ’ ಆರಂಭವಾಗಿತ್ತು. ಆ ಬಳಿಕ ರಾಜ್ಯದ ವಿವಿಧೆಡೆ ಆರಂಭಿಸಲಾಗಿತ್ತು. ತಾಲೂಕು ಮಟ್ಟದಲ್ಲಿಯೂ ತೆರೆದಿದ್ದವು. ಮಂಗಳೂರಿನ ಕೇಂದ್ರದಲ್ಲಿ ಇದುವರೆಗೆ 4,864 ವಿವಿಧ ಮಹಿಳಾ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಸಾಂತ್ವನ ಜಿಲ್ಲಾ ಮಟ್ಟದ ಸಮಿತಿಯ ಅಧ್ಯಕ್ಷರಾದ ಜಿ.ಪಂ. ಸಿಇಒ ಡಾ| ಕುಮಾರ್ ಅವರ ಶಿಫಾರಸಿನಂತೆ ಸಾಂತ್ವನ ಕೇಂದ್ರ ಪುನರಾರಂಭಕ್ಕೆ ಸರಕಾರ ಸೂಚಿಸಿದೆ. ಶೋಷಣೆಗೊಳಗಾದ ಮಹಿಳೆಯರಿಗೆ ನೆರವು ಒದಗಿಸುವ ಅವಕಾಶವನ್ನು ಮತ್ತೆ ಮಾಡಿಕೊಟ್ಟಿರುವುದರಿಂದ ನೆಮ್ಮದಿಯಾಗಿದೆ.
-ಪ್ರೊ| ಹಿಲ್ಡಾ ರಾಯಪ್ಪನ್,
ನಿರ್ದೇಶಕರು, ಪ್ರಜ್ಞಾ ಸಲಹಾ ಕೇಂದ್ರ, ಮಂಗಳೂರು -ಸಂತೋಷ್ ಬೊಳ್ಳೆಟ್ಟು