Advertisement

ನೆಲ, ಚಾವಣಿ ಮೇಲೆ ಹೋರ್ಡಿಂಗ್‌ಗೆ ಅವಕಾಶ?

07:48 AM Jul 29, 2019 | Suhan S |

ಬೆಂಗಳೂರು: ನಗರದ ಸಾರ್ವಜನಿಕ ಪ್ರದೇಶಗಳನ್ನು ಜಾಹೀರಾತು ಮುಕ್ತಗೊಳಿಸುವ ಪ್ರಯತ್ನಕ್ಕೆ ಕಳೆದ ವರ್ಷ ಆಗಸ್ಟ್‌ನಲ್ಲಿ ಬಿಬಿಎಂಪಿ ಚಾಲನೆ ನೀಡಿತ್ತು. ಇದಾಗಿ ಒಂದು ವರ್ಷ ಪೂರ್ಣಗೊಳ್ಳುವ ಮುನ್ನವೇ ನಗರದಲ್ಲಿ ಮತ್ತೆ ಜಾಹೀರಾತುಗಳು ಕಾಣಿಸಿಕೊಳ್ಳುವ ಮುನ್ಸೂಚನೆ ಸಿಕ್ಕಿದೆ.

Advertisement

ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿ ಜಾಹೀರಾತು ನೀತಿ-2019ರ ಕರಡನ್ನು ಸಿದ್ಧಪಡಿಸಿದ್ದು, ಈ ನಿಟ್ಟಿನಲ್ಲಿ ಇಲಾಖೆಯು ಜಾಹೀರಾತು ಮಾಫಿಯಾಗೆ ಮಣಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

2018ರಲ್ಲಿ ಸಾಯಿ ದತ್ತ ಮತ್ತು ಇತರರು ಅನಧಿಕೃತ ಜಾಹೀರಾತು ಮತ್ತು ಫ್ಲೆಕ್ಸ್‌ ಬ್ಯಾನರ್‌ಗಳ ಹಾವಳಿ ನಿಯಂತ್ರಣಕ್ಕೆ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಅವರು ನಗರದ ಎಲ್ಲ ಅನಧಿಕೃತ ಜಾಹೀರಾತು ಮತ್ತು ಫ್ಲೆಕ್ಸ್‌ ಬ್ಯಾನರ್‌ ತೆರವುಗೊಳಿಸುವಂತೆ ಬಿಬಿಎಂಪಿಗೆ ನಿರ್ದೇ ಶನ ನೀಡಿದ್ದರು. ಇದರ ಅನ್ವಯ ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಜಾಹೀರಾತು ನಿಷೇಧ ಜಾರಿಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಹೈಕೋರ್ಟ್‌ ಸೂಚನೆ ಮೇರೆಗೆ ಪಾಲಿಕೆ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018 ರೂಪಿಸಿತ್ತು. ಇದಕ್ಕೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ಸೆ.11ರಂದು ಅನುಮೋದನೆ ನೀಡಿದ್ದರು. ಸೆ.25ರಂದು ಬೈಲಾ ಕರಡನ್ನು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ನಂತರ, ಬಿಬಿಎಂಪಿ ಆಯುಕ್ತರು ಅಂತಿಮ ಅನುಮೋದನೆಗಾಗಿ ಬೈಲಾ ಕರಡನ್ನು ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿದ್ದರು.

ನಗರಾಭಿವೃದ್ಧಿ ಇಲಾಖೆಯು ಈ ಬಗ್ಗೆ ಸಂಸದೀಯ ವ್ಯವಹಾರಗಳ ಇಲಾಖೆಯ ಸಲಹೆ ಕೇಳಿತ್ತು. ಬೈಲಾ ಕರಡು ದೋಷಪೂರಿತವಾಗಿದೆ, ಅದನ್ನು ಪರಿಷ್ಕರಿಸಿ ಮತ್ತೆ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆ ಆಹ್ವಾನಿಸಬೇಕು ಎಂದು ಸಂಸದೀಯ ವ್ಯವಹಾರಗಳ ಇಲಾಖೆ ಸಲಹೆ ನೀಡಿತ್ತು. ಆದರೆ, ಈ ನಡುವೆ ಪಾಲಿಕೆ ಸಲ್ಲಿಸಿದ್ದ ಕರಡು ಪ್ರತಿಯ ಪ್ರಮುಖ ಅಂಶಗಳನ್ನು ತಿರಸ್ಕರಿಸಿರುವ ನಗರಾಭಿವೃದ್ಧಿ ಇಲಾಖೆ ಹೊಸದಾಗಿ ಬಿಬಿಎಂಪಿ ಜಾಹೀರಾತು ನೀತಿ-2019ರ ಕರಡನ್ನು ರೂಪಿಸಿದೆ.

Advertisement

ಇದರ ಪ್ರಕಾರ, ನಗರದ ನೆಲದಲ್ಲಿ, ಚಾವಣಿಗಳ ಮೇಲೆ ಖಾಸಗಿ ಹೋರ್ಡಿಂಗ್‌ಗಳಿಗೆ ಹಾಗೂ ಬಿಲ್ಬೋರ್ಡ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಸಾರ್ವಜನಿಕರಿಗೆ ಸಮಸ್ಯೆಯಾಗುವ ಹಲವು ರೀತಿಯ ಜಾಹೀರಾತುಗಳನ್ನು ನಿಷೇಧಿಸಲು ಪಾಲಿಕೆ ನಿರ್ಣಯ ಕೈಗೊಂಡಿತ್ತು. ಆದರೆ, ಈ ನಿಷೇಧಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಕರಡಿನಲ್ಲಿ ಯಾವುದೇ ಉಲ್ಲೇಖವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next