Advertisement

ಸರ್ಕಾರಿ ಶಾಲೆಗೆ 3 ವರ್ಷದ ಮಗು ಸೇರಲು ಅವಕಾಶ

01:01 PM Feb 13, 2022 | Team Udayavani |

ಕಲಬುರಗಿ: ಮಕ್ಕಳ ಶೈಕ್ಷಣಿಕ ಮಟ್ಟ ಬೆಳವಣಿಗೆಗೆ ಉತ್ತಮ ಅಡಿಪಾಯ ಹಾಕಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ (ಎನ್‌ಇಪಿ) ಸಾಧ್ಯವಿದೆ. ಖಾಸಗಿ ಶಾಲೆಗಳಲ್ಲಿ ಮೂರು ವರ್ಷದ ಮಗು ಸೇರಿಸುವಂತೆ ಸರ್ಕಾರಿ ಶಾಲೆಗೂ ಮಗು ಸೇರಲು ಎನ್‌ಇಪಿಯಲ್ಲಿ ಅವಕಾಶವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು.
ನಗರದ ಎಚ್‌ಕೆಸಿಸಿಐ ಸಭಾಂಗಣದಲ್ಲಿ ಶನಿವಾರ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ, ಸಿದ್ಧಲಿಂಗೇಶ್ವರ ಪ್ರಕಾಶನ, ಬಸವ ಪ್ರಕಾಶನದ 45ನೇ ವಾರ್ಷಿಕೋತ್ಸವ ಹಾಗೂ 115 ಪುಸ್ತಕಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಎಂದರೆ ಹೊಸ ಬಟ್ಟೆ ಧರಿಸಿದಂತೆ ಅಲ್ಲ. ಕಲಿಕೆಯಲ್ಲಿ ಗುಣಮಟ್ಟ ಹೆಚ್ಚಿಸುವುದೇ ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಪ್ರಸ್ತುತ ಶಾಲೆಗೆ ಸೇರುವ 100 ವಿದ್ಯಾರ್ಥಿಗಳ ಪೈಕಿ 35ರಷ್ಟು ಮಾತ್ರ ಗುಣಮಟ್ಟದ ಶಿಕ್ಷಣ ಪಡೆದ ವಿದ್ಯಾರ್ಥಿಗಳಾಗಿ ಹೊರಹೊಮ್ಮುತ್ತಿದ್ದಾರೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿಯಲ್ಲಿ ಅಂತಹ ದೊಡ್ಡ ಮಟ್ಟದ ವ್ಯಾತ್ಯಾಸವೇನಿಲ್ಲ. ಕೇವಲ 5ರಷ್ಟು ಮಾತ್ರ ಗುಣಮಟ್ಟದ ಶಿಕ್ಷಣದ ವ್ಯತ್ಯಾಸವಿದೆ ಎಂದರು.

ಬಾಲ್ಯದಲ್ಲೇ ಶೇ.85ರಷ್ಟು ಬುದ್ಧಿಮಟ್ಟ ಬೆಳವಣಿಗೆ ಆಗುತ್ತದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಗುಣಮಟ್ಟದ ಶಿಕ್ಷಣಕ್ಕೆ ಹೊಸ ಶಿಕ್ಷಣ ನೀತಿ ಅಡಿಪಾಯ ಹಾಕಲಾಗಿದೆ. ಈ ಹಿಂದೆ ಸರ್ಕಾರಿ ಶಾಲೆಗೆ ಆರು ವರ್ಷಕ್ಕೆ ಮಗು ಬರುತ್ತಿತ್ತು. ಆದರೆ, ಈ ಹೊಸ ನೀತಿಯಲ್ಲಿ ಮೂರು ವರ್ಷದಿಂದಲೇ ಮಗು ಆಟದ ಮೂಲಕ ಪಾಠ ಕಲಿಯಲಿದೆ ಎಂದರು.

34 ವರ್ಷಗಳ ನಂತರ ದೇಶದಲ್ಲಿ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಲಾಗಿದೆ. ಇದು ಸುಧಾರಣೆ, ಪರಿರ್ವತನೆಗೆ ಸಹಕಾರಿಯಾಗದೆ. ಕಳೆದ ಆರು ವರ್ಷಗಳಿಂದ ಎಲ್ಲ ಆಯಾಮಗಳಲ್ಲೂ, ಎಲ್ಲರೊಂದಿಗೂ ಚರ್ಚೆ-ಪರಾಮರ್ಶೆ ನಡೆಸಿದ ಬಳಿಕ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ. ಇದರಿಂದ ರಾಜ್ಯ ಮತ್ತು ದೇಶದ ಪರಿಪೂರ್ಣ ಸಬಲೀಕರಣದ ಕನಸು ನನಸಾಗಿಸಲಿದೆ. ದೇಶವನ್ನು ಸದೃಢವಾಗಿ ಕಟ್ಟುವುದೇನಿದ್ದರೂ ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.

ವ್ಯಕ್ತಿ ಸ್ವಂತ ಜ್ಞಾನದಿಂದ ಬೆಳೆಯಬೇಕು, ಸ್ವಂತ ಕೌಶಲದಿಂದ ದುಡಿಯಬೇಕು, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು, ಸಮಾಜದ ಅಭಿವೃದ್ಧಿಗೂ ಪೂರಕವಾಗಬೇಕು ಎನ್ನುವ ಆಶಯ ಈ ಹೊಸ ನೀತಿಯಲ್ಲಿದೆ. ಬಸವಣ್ಣನವರ ಕಾಯಕವೇ ಕೈಲಾಸ ಎಂಬಂತೆ ಮೌಲ್ಯವರ್ಧಿತ ಶಿಕ್ಷಣ ನೀಡುವ ಮೂಲಕ ಕಾಯಕ ಹಾಗೂ ಕೈಲಾಸದ ಸಾಕಾರ ಮಾಡಲೂ ಸಾಧ್ಯವಿದೆ ಎಂದು ಹೇಳಿದರು.

Advertisement

ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಇಂದಿನ ಡಿಜಿಟಲ್‌ ಯುಗದಲ್ಲೂ ಓದುವಿಕೆ ವ್ಯಾಪಿಸಿದೆ. ಗುಣಮಟ್ಟದ ಬರಹಕ್ಕೆ ಪ್ರಜ್ಞಾವಂತರು ಮನ್ನಣೆ ನೀಡಿಯೇ ನೀಡುತ್ತಾರೆ. ಓದುವ ಸಂಸ್ಕೃತಿಯ ಎಂದೂ ಕಳೆದುಕೊಳ್ಳಬಾರದು ಎಂದರು.

ಗುಲಬರ್ಗಾ ವಿವಿ ಕುಲಪತಿ ಪ್ರೊ| ದಯಾನಂದ ಅಗಸರ ಮಾತನಾಡಿ, ಸಿದ್ಧಲಿಂಗೇಶ್ವರ ಪ್ರಕಾಶನ ಹೊರದಂತ 115 ಪುಸ್ತಕಗಳ ಪೈಕಿ 34 ಪುಸ್ತಕಗಳು ಹೊಸ ಶಿಕ್ಷಣ ನೀತಿಯ ಪಠ್ಯಕ್ರಮಕ್ಕೆ ಸಂಬಂಧಿಸಿವೆ. ಈ ಮೂಲಕ ವಿವಿಯ ಪಠ್ಯ ಪುಸ್ತಕದ ಕೊರತೆ ನೀಗದಂತೆ ಆಗಿದೆ. ಗುವಿವಿ ವ್ಯಾಪ್ತಿಯ ಎಲ್ಲ 352 ಕಾಲೇಜಿಗಳಲ್ಲೂ ಹೊಸ ಶಿಕ್ಷಣ ನೀತಿ ಜಾರಿಗೆ ಮಾಡಲಾಗುತ್ತಿದೆ ಎಂದರು.

ಗದಗ-ಡಂಬಳ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಗುವಿವಿ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ| ಎಚ್‌.ಟಿ.ಪೋತೆ ಮಾತನಾಡಿದರು. ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನದ ಸಂಸ್ಥಾಪಕ ಬಸವರಾಜ ಜಿ. ಕೊನೇಕ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ವಿಧಾನ ಪರಿಷತ್‌ ಸದಸ್ಯರಾದ ಶಶೀಲ್‌ ನಮೋಶಿ, ಬಿ.ಜಿ. ಪಾಟೀಲ, ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ ಮತ್ತಿತರರು ಇದ್ದರು.

ಪುಸ್ತಕ ಪ್ರಕಾಶನ ಮತ್ತು ನಾಟಕ ಕಂಪನಿಯಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟಸಾಧ್ಯ. ಆದರೆ, ಸಿದ್ಧಲಿಂಗೇಶ್ವರ ಪ್ರಕಾಶನ ನಿರಂತರವಾಗಿ 45 ವರ್ಷದಿಂದ ಪುಸ್ತಕಗಳ ಪ್ರಕಟಣೆಯೊಂದಿಗೆ ಇತರರ ಬದುಕು ಕಟ್ಟುತ್ತಿದೆ. ಮನೆಯಲ್ಲಿ ಪುಸ್ತಕ ಇದ್ದರೆ ಆ ಮನೆಗೆ ಜೀವ ಕಳೆ ತುಂಬಿದಂತೆ. -ಸಿದ್ಧರಾಮ ಸ್ವಾಮೀಜಿ, ಗದಗ-ಡಂಬಳ ತೋಂಟದಾರ್ಯ ಮಠ

Advertisement

Udayavani is now on Telegram. Click here to join our channel and stay updated with the latest news.

Next