Advertisement

ಅವಕಾಶ ತಾನಾಗೇ ಬರುವುದಿಲ್ಲ ; ನಾವೇ ಸೃಷ್ಟಿಸಿಕೊಳ್ಳಬೇಕು

01:28 AM Jul 02, 2020 | Team Udayavani |

ರಾಷ್ಟ್ರ ಎದುರಿಸುತ್ತಿರುವ “ಆರೋಗ್ಯ ತುರ್ತು ಪರಿಸ್ಥಿತಿ’ ಸಂದರ್ಭದಲ್ಲಿ ಮತ್ತು ರಾಜ್ಯ ರಾಜಕಾರಣದ ಅದರಲ್ಲೂ ಕಾಂಗ್ರೆಸ್‌ ಪಕ್ಷದ ರಾಜಕೀಯ ಸಂಕ್ರಮಣ ಕಾಲದಲ್ಲಿ ಹಿರಿಯ ನಾಯಕ ಡಿ.ಕೆ. ಶಿವಕುಮಾರ್‌ ಪಕ್ಷದ ಅಧ್ಯಕ್ಷರಾಗಿ ಗುರುವಾರ ಡಿಜಿಟಲ್‌ ಸಮಾವೇಶದ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ ನಡೆಸಿದ ಸಂದರ್ಶನದ ಪೂರ್ಣ ಪಾಠ ಇಂತಿದೆ.

Advertisement

ಇಷ್ಟು ದೊಡ್ಡ ಪ್ರಮಾಣದಲ್ಲಿ ವರ್ಚುವಲ್‌ ಕಾರ್ಯಕ್ರಮ ಮಾಡುವ ಐಡಿಯಾ ಹೇಗೆ ಬಂತು?
ನಾನು ಇಂದಿರಾ ಗಾಂಧಿಯವರ ದೊಡ್ಡ ಅಭಿಮಾನಿ. ಕಾಂಗ್ರೆಸ್‌ಗೆ ಬಂದದ್ದೇ ಅವರ ಮೇಲಿನ ಅಭಿಮಾನದಿಂದ. ಅವರು ಒಂದು ಮಾತು ಹೇಳ್ತಿದ್ರು, ಯಾರೂ ನಿನಗೆ ಅವಕಾಶ ಕೊಡುವುದಿಲ್ಲ. ನೀನೇ ಅವಕಾಶ ಸೃಷ್ಟಿಸಿಕೊಳ್ಳಬೇಕು ಎಂದು. ನಾನು ಸುಮ್ಮನೆ ಕುಳಿತಿದ್ದರೆ ಇದೆಲ್ಲಾ ಗೊತ್ತಾಗುತ್ತಿರಲಿಲ್ಲ. ಕೋವಿಡ್-19 ಸಂದರ್ಭ ದೊಡ್ಡ ಕಾರ್ಯಕ್ರಮ ಮಾಡಲು ಆಗುವುದಿಲ್ಲ. ಅದಕ್ಕೆ ಏನ್‌ ಮಾಡಬೇಕು ಅಂತ ಯೋಚನೆ ಮಾಡಿದೆ. ರಾಜೀವ್‌ ಗಾಂಧಿಯವರು ಕಂಪ್ಯೂಟರ್‌ ತಂದರು. ನನಗೆ ಸರಿಯಾಗಿ ಕಂಪ್ಯೂಟರ್‌ ಬಳಕೆ ಗೊತ್ತಿಲ್ಲ. ಈಗ ದೊಡ್ಡ ಜನರೇಷನ್‌ ಗ್ಯಾಪ್‌ ಇದೆ. ಆದರೂ ಕಾರ್ಯಕರ್ತರನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಹೇಗೆ ಬಳಸಿಕೊಳ್ಳಬೇಕು ಅಂತ ಆಲೋಚನೆ ಮಾಡಿ ಈ ಕಾರ್ಯಕ್ರಮ ಮಾಡ್ತಿದೀನಿ. ಇದೊಂದು ಹೊಸ ಅನುಭವ; ಹೊಸ ಆರಂಭ.

ಪಕ್ಷದ ಇತರ ನಾಯಕರ ಸಹಕಾರ ಇದೆಯಾ?
ಇದು ಪಕ್ಷದ ಕೆಲಸ. ಎಲ್ಲ ನಾಯಕರು, ಕಾರ್ಯಕರ್ತರು ಸಹಕಾರ ನೀಡುತ್ತಿದ್ದಾರೆ. ಪಕ್ಷದ ಕೆಲಸ ಅಂದ ಮೇಲೆ ಎಲ್ಲರೂ ಬಂದೆ ಬರುತ್ತಾರೆ. ಪಕ್ಷದ ಧ್ವಜ ಹಿಡಿದ ಮೇಲೆ ಎಲ್ಲರೂ ಪಕ್ಷದ ಕೆಲಸ ಮಾಡಬೇಕು. ಇಲ್ಲಿ ಯಾರೂ ದೊಡ್ಡವರಲ್ಲ. ಯಾರೂ ಚಿಕ್ಕವರಲ್ಲ.

ನಿಮ್ಮ ಪ್ರಯತ್ನಕ್ಕೆ ಸರಕಾರ ಅಡ್ಡಿಪಡಿಸ್ತಾನೇ ಇದೆಯಲ್ಲಾ ?
ಈಗಲೂ ಪೊಲೀಸರು ತಾಲೂಕು ಮಟ್ಟದಲ್ಲಿ ನಮ್ಮ ಕಾರ್ಯಕರ್ತರಿಗೆ ಅಡ್ಡಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ವತಃ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಗೃಹ ಸಚಿವರು, ಡಿಜಿಪಿ ಜತೆಗೆ ಮಾತನಾಡಿದ್ದೇನೆ. ಯಾರೂ ಅಡ್ಡಿಪಡಿಸಬಾರದು. ಅಷ್ಟಾದರೂ ಅಡ್ಡಿಪಡಿಸಿದರೆ, ನಮ್ಮ ಮಾರ್ಗ ಬೇರೆ ಇದೆ. ಈಗಾಗಲೇ ಸಚಿವರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಹಾಗಿರುವಾಗ ನಮ್ಮ ಕಾರ್ಯಕ್ರಮಕ್ಕೆ ಯಾಕೆ ಅಡ್ಡಿಪಡಿಸುತ್ತಾರೆ?

ಕೋವಿಡ್-19 ಸಂದರ್ಭ ಸರಕಾರದ ವೈಫಲ್ಯ ವನ್ನು ಎತ್ತಿ ತೋರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆಯಲ್ಲಾ?
ವಿಪಕ್ಷವಾಗಿ ಏನು ಮಾಡ ಬೇಕೊ ಅದನ್ನು ಮಾಡಿದ್ದೇವೆ. ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ಕೊಡುವಂತೆ ಸರಕಾರದ ಮೇಲೆ ಒತ್ತಡ ಹೇರಿದ್ದೇವೆ. ಕಾರ್ಮಿಕರನ್ನು ಅವರ ಊರುಗಳಿಗೆ ತೆರಳಲು ಕ್ರಮ ಕೈಗೊಳ್ಳಲು ಒತ್ತಡ ಹೇರಿದ್ದೇವೆ. ಯಶಸ್ವಿಯೂ ಆಗಿದ್ದೇವೆ.

Advertisement

ಸರಕಾರ ಕೋವಿಡ್-19 ನಿಯಂತ್ರಣಕ್ಕೆ ನಿಮ್ಮ ಸಹಕಾರ ಪಡೆಯುತ್ತಿದೆಯಾ?
ನಾವು ಎಲ್ಲವನ್ನೂ ಸರಕಾರಕ್ಕೆ ಬಿಟ್ಟಿದ್ದೇವೆ. ನಾವು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದೇವೆ. ಅವರು ಏನು ಬೇಕಾದರೂ ಮಾಡಲಿ. ಮಾನ ವೀಯ ದೃಷ್ಟಿಯಿಂದ ನಾವು ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಸರಕಾರದ ಕಾರ್ಯ ವೈಖರಿ ಮಾಧ್ಯಮಗಳಲ್ಲಿ ಬಯಲಾಗುತ್ತಿದೆ.

 ಪಕ್ಷವನ್ನು ಮಾಸ್‌ ಬೇಸ್‌ನಿಂದ ಕೇಡರ್‌ ಬೇಸ್‌ ಮಾಡಲು ಹೊರಟಿದ್ದೀರಾ? ಕಾಂಗ್ರೆಸ್‌ ನಲ್ಲಿ ಇದು ಸಾಧ್ಯಾನಾ?
ನೋಡಿ ಪ್ರತಿಯೊಂದಕ್ಕೂ ಪ್ರಯತ್ನ ಇರುತ್ತದೆ. ನಾನೊಬ್ಬನೇ ಅಲ್ಲ ನಾವೆಲ್ಲರೂ ಸೇರಿ ಸಾಧನೆ ಮಾಡುತ್ತೇವೆ ಎನ್ನುವ ವಿಶ್ವಾಸ ವನ್ನು ನಾನು ಹೊಂದಿರುವೆ.

ಪದಗ್ರಹಣ ಮುಗಿದ ಮೇಲೆ ಕೋವಿಡ್-19 ಸಾಂತ್ವನ ಯಾತ್ರೆ ಮಾಡ್ತೀರಾ?
ಖಂಡಿತವಾಗಿಯೂ ನಾನು ಜನರ ಸಮಸ್ಯೆ ಆಲಿಸಲೇಬೇಕಾಗುತ್ತದೆ. ಈ ಕಾರ್ಯಕ್ರಮ ಮುಗಿದ ಮೇಲೆ ಯಾತ್ರೆಯ ರೂಪು ರೇಷೆ ತಿಳಿಸುತ್ತೇನೆ.

ಬೇರೆ ಪಕ್ಷದವರು ಬಂದರೆ ನಿಮ್ಮ ಕಾರ್ಯಕರ್ತರಿಗೆ ಅನ್ಯಾಯ ಆಗದೇ?
ಅದಕ್ಕಾಗಿಯೇ ನಾನು ಒಂದು ಸಮಿತಿ ಮಾಡಿದ್ದೇನೆ. ಬಹಳ ಜನರು ಪಕ್ಷಕ್ಕೆ ಬರುತ್ತೇವೆ ಎಂದಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಸಮಿತಿ ರಚಿಸಿದ್ದೇನೆ. ಯಾವುದನ್ನೂ ನಾನೊಬ್ಬನೇ ತೀರ್ಮಾನಿಸುವುದಿಲ್ಲ.

ಈ ಸರಕಾರ ಅವಧಿ ಪೂರ್ಣ ಮಾಡುತ್ತೆ ಅನಿಸುತ್ತಾ?
ಸದ್ಯಕ್ಕೆ ನಾನೀಗ ಸರಕಾರದ ಬಗ್ಗೆ ಮಾತನಾಡುವುದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸುವುದಷ್ಟೇ ಈಗ ನಮ್ಮ ಕೆಲಸ.

ಪಕ್ಷದಲ್ಲಿ ಯಾರೂ ಅಡ್ಡಿ ಮಾಡಬಾರದು ಎಂದಿದ್ರಿ, ಅದಕ್ಕೆ ಪ್ಲ್ಯಾನ್ ಮಾಡಿದ್ದೀರಾ?
ನಾನು ಆ ರೀತಿ ಎಲ್ಲಿಯೂ ಹೇಳಿಲ್ಲ. ಅದರ ಬಗ್ಗೆ ನಾನು ಮಾತನಾಡಿಯೂ ಇಲ್ಲ. ನನಗೇನು ಸಮಯ ಬೇಕಿಲ್ಲ. ಪಕ್ಷಕ್ಕೆ ಸಮಯ ಬಂದರೆ ಸಾಕು. 2023ರ ವಿಷಯದ ಬಗ್ಗೆ ಈಗ ಮಾತನಾಡಲ್ಲ.

Advertisement

Udayavani is now on Telegram. Click here to join our channel and stay updated with the latest news.

Next