ಕೊಪ್ಪಳ: ವಿಪಕ್ಷದಲ್ಲಿದ್ದವರು ಆಡಳಿತ ಪಕ್ಷದ ತಪ್ಪುಗಳನ್ನು ತಿದ್ದಬೇಕು. ಆದರೆ ಅದನ್ನು ಬಿಟ್ಟು ಎಲ್ಲದಕ್ಕೂ ವಿರೋಧ ಮಾಡುವುದು ಸರಿಯಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಿಎಸ್ ವೈಗೆ ಕೇಂದ್ರದಿಂದ ಅನುದಾನ ತರುವ ಧಮ್ ಇಲ್ಲ ಎಂದು ಹೇಳಿದ್ದು ಸರಿಯಲ್ಲ. ಧಮ್ಮು-ಕೆಮ್ಮು… ಏನ್ರೀ ಇವೆಲ್ಲಾ.. ಏನ್ ಭಾಷೆ ಬಳಸುತ್ತಾರೆ. ಇದೊಂದು ಒಳ್ಳೆ ಭಾಷೆನಾ? ವಿಪಕ್ಷದಲ್ಲಿರುವ ಅವರು ಆಡಳಿತ ಪಕ್ಷದಲ್ಲಿನ ತಪ್ಪು ಹೇಳಲಿ. ಅದನ್ನು ಬಿಟ್ಟು ಎಲ್ಲದಕ್ಕೂ ವಿರೋಧ ಮಾಡುವುದು ತರವಲ್ಲ. ಸಿಎಂ ಬಿಎಸ್‌ವೈ ಅವರಷ್ಟು ಮಾಡಿದ ಸಭೆಗಳನ್ನು ಬೇರೆ ಯಾವ ಸಿಎಂ ಮಾಡಿಲ್ಲ. ಸಿಎಂ ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಕೋವಿಡ್-19 ತಡೆಗಟ್ಟುವ ವಿಚಾರದಲ್ಲಿ ಸಿಎಂ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ನನ್ನದು ಕೃಷಿ ಇಲಾಖೆ ಆಗಿರುವುದರಿಂದ ಕೃಷಿ ಕಾಯಕ ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸುವೆ. ಇನ್ನುಳಿದವರಿಗೆ ಅವರವರ ಖಾತೆಯೇ ಮನೆ ದೇವರು. ಆ ದೇವರ ಕೆಲಸವನ್ನು ನಿರ್ವಹಿಸುವ ಮೂಲಕ ವಾರ್ಷಿಕೋತ್ಸವ ಆಚರಿಸುತ್ತಾರೆ ಎಂದರು.
ಕೊಪ್ಪಳ ತಾಲೂಕಿನ ಕಾಸನಕಂಡಿ, ಬಗನಾಳದಲ್ಲಿ ರಸ್ತೆ ಸಮಸ್ಯೆಯಾಗಿದೆ. ಕಾರ್ಖಾನೆಯವರಿಗೆ ರಸ್ತೆ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಕೆಲವರು ಟೋಲ್ ಹಣ ಉಳಿಸಲು ಗ್ರಾಮದ ರಸ್ತೆ ಬಳಸುತ್ತಿರುವುದು ಗಮನಕ್ಕಿದೆ. ಅದನ್ನು ಸರಿಪಡಿಸಲಾಗುವುದು. ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್-19ಗೆ ಚಿಕಿತ್ಸೆಯ ದರಪಟ್ಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬದುಕು ಎಲ್ಲಕ್ಕಿಂತಲೂ ದೊಡ್ಡದು. ದರದ ಬಗ್ಗೆ ಮರು ಪರಿಶೀಲನೆ ಮಾಡಲಾಗುವುದು ಎಂದರು.
ಆರ್‌ಎಸ್‌ಕೆಗಳನ್ನು ಪ್ರಬಲ ಮಾಡಬೇಕು ಎಂಬ ಯೋಚನೆ ಇದೆ. ಕೃಷಿ ಮೊಬೈಲ್ ಹೆಲ್ತ್ ಕ್ಲಿನಿಕ್ ಕೊಪ್ಪಳದಿಂದ ಪೈಲಟ್ ಪ್ರೋಗ್ರಾಂ ಆಗಿ ಮಾಡ್ತಿವಿ. ಪ್ರತಿ ಆರ್‌ಎಸ್‌ಕೆಗೆ ಒಂದರಂತೆ ವಾಹನ ನೀಡಲಾಗುವುದು. ಒಂದು ವಾಹನಕ್ಕೆ ಸುಮಾರು 20 ಲಕ್ಷ ರೂಪಾಯಿ ಖರ್ಚಾಗಬಹುದು ಎಂದು ವಿವರಿಸಿದರು. ಈ ವೇಳೆ ಸಂಸದ ಸಂಗಣ್ಣ ಕರಡಿ ಇದ್ದರು.