ಮುಂಬಯಿ: ಕ್ರಿಸ್ಟೊಫರ್ ನೋಲನ್ ಅವರ “ಓಪೆನ್ ಹೈಮರ್” ವರ್ಲ್ಡ್ ವೈಡ್ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಭಾರತದಲ್ಲೂ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಪೀಸ್ ನಲ್ಲಿ ಮೊದಲ ದಿನವೇ “ಓಪೆನ್ ಹೈಮರ್” 14 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.
ಅಣುಬಾಂಬ್ ಸಂಶೋಧಿಸಿರುವ ಪರಮಾಣು ವಿಜ್ಞಾನಿ “ಓಪೆನ್ ಹೈಮರ್”ಅವರ ಕಥೆಯನ್ನು ಒಳಗೊಂಡಿರುವ ಸಿನಿಮಾಕ್ಕೆ ವಿಮರ್ಶಕರಿಂದಲೂ ಪಾಸಿಟಿವ್ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ. ಈ ನಡುವೆ ಭಾರತದಲ್ಲಿ ಸಿನಿಮಾದಲ್ಲಿರುವ ಒಂದು ದೃಶ್ಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.
‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಸ್ಥಾಪಕ, ಭಾರತ ಸರ್ಕಾರದ ಮಾಹಿತಿ ಅಧಿಕಾರಿ ಉದಯ್ ಮಹೂರ್ಕರ್ ಅವರು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿ ಚಿತ್ರತಂಡ ಹಾಗೂ ಸೆಂಟ್ರಲ್ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜುಲೈ 21 ರಂದು ತೆರೆಕಂಡ “ಓಪೆನ್ ಹೈಮರ್” ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಹಾನಿಯಾಗುವ ದೃಶ್ಯಗಳಿವೆ ಎಂಬುದು ʼಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್ʼ ಗಮನಕ್ಕೆ ಬಂದಿದೆ. ಸಿನಿಮಾದಲ್ಲಿ ಮಹಿಳೆಯೊಬ್ಬಳು ದೈಹಿಕ ಸಂಪರ್ಕ ನಡೆಸುವ ವೇಳೆ ( ಸಿನಿಮಾದ ನಾಯಕ ನಟನೊಂದಿಗೆ) ವ್ಯಕ್ತಿಯ ಬಳಿ ಭಗವದ್ಗೀತೆಯನ್ನು ಗಟ್ಟಿಯಾಗಿ ಓದುವಂತೆ ಹೇಳುವ ಒಂದು ದೃಶ್ಯವಿದೆ. ಈ ದೃಶ್ಯವನ್ನು ಸಿನಿಮಾದಲ್ಲಿ ಕಟ್ ಮಾಡದೆ ಹಾಕಲು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಹೇಗೆ ಅನುಮೋದನೆ ಕೊಟ್ಟಿತು ಎಂದು ಪ್ರತಿಕಾ ಪ್ರಕಟಣೆಯಲ್ಲಿ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತುರ್ತು ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ‘ಸೇವ್ ಕಲ್ಚರ್ ಸೇವ್ ಇಂಡಿಯಾ ಫೌಂಡೇಶನ್’ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಕ್ರಿಸ್ಟೊಫರ್ ನೋಲನ್ “ಓಪೆನ್ ಹೈಮರ್” ಸಿನಿಮಾಕ್ಕೆ “ಆರ್ ರೇಟಿಂಗ್” ( ಕೆಲವು ವಯಸ್ಕ ವಿಚಾರ,ವಯಸ್ಕರ ಥೀಮ್‌ಗಳು, ವಯಸ್ಕರ ಚಟುವಟಿಕೆ, ಕಠಿಣ ಭಾಷೆ, ತೀವ್ರವಾದ ಅಥವಾ ನಿರಂತರ ಹಿಂಸಾಚಾರ, ನಗ್ನತೆ, ಮಾದಕ ದ್ರವ್ಯ ಸೇವನೆ ಅಥವಾ ಇತರ ಅಂಶಗಳನ್ನು ಒಳಗೊಂಡಿರಬಹುದು) ನ್ನು ನೀಡಿದೆ. ಆದರೆ ಭಾರತದಲ್ಲಿ ಸಿನಿಮಾಕ್ಕೆ “ಯುಎ” ರೇಟಿಂಗ್ ನೀಡಲಾಗಿದೆ. ಸಿನಿಮಾ ಸೆನ್ಸಾರ್ ಗೆ ಬರುವ ಮುನ್ನ ಸ್ಟುಡಿಯೋದವರು ಸಿನಿಮಾದಲ್ಲಿನ ಕೆಲ ದೃಶ್ಯಗಳನ್ನು ತೆಗೆದುಹಾಕಿ, ಅದರ ಅವಧಿಯನ್ನು ಕಡಿತಗೊಳಿಸಿಯೇ ಭಾರತದ ಸೆನ್ಸಾರ್ ಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.