ಹುಬ್ಬಳ್ಳಿ: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎದುರಿಸಲಾಗುವುದು. ವಿಧಾನಸಭಾ ಚುನಾವಣೆ ನೇತೃತ್ವವನ್ನು ಸಿದ್ದರಾಮಯ್ಯ ವಹಿಸಲಿದ್ದಾರೆ. ಆದರೆ, ಮುಂದಿನ ಮುಖ್ಯಮಂತ್ರಿ ಯಾರೆಂಬುದನ್ನು ಈಗಲೇ ಘೋಷಿಸುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತಿಳಿಸಿದರು. ನ
ಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ಜಾತಿಯವರು ಕಾಂಗ್ರೆಸ್ ಜೊತೆಗಿಲ್ಲ ಎಂಬುದನ್ನು ಉಪಚುನಾವಣೆ ಫಲಿತಾಂಶ ಹುಸಿಯಾಗಿಸಿದೆ. ಲಿಂಗಾಯತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿರುವ ಗುಂಡ್ಲುಪೇಟೆ ಹಾಗೂ ನಂಜನಗೂಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಮುಖಂಡರು ಒಗ್ಗಟ್ಟಾದರೆ ನಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಸಿದ್ದರಾಮಯ್ಯ ಸೇರಿದಂತೆ ಯಾವುದೇ ಸಚಿವರ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ ಎಂದು ಹೇಳಿದರು. ಕೆಪಿಸಿಸಿಗೆ ಸದ್ಯ ಡಾ| ಜಿ. ಪರಮೇಶ್ವರ ಅಧ್ಯಕ್ಷರಾಗಿದ್ದಾರೆ. ಮುಂದಿನ ಅಧ್ಯಕ್ಷರನ್ನಾಗಿ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಪಕ್ಷದ ಮುಖಂಡರು ನಿರ್ಧರಿಸಲಿದ್ದಾರೆ.
ಉತ್ತರ ಕರ್ನಾಟಕದವರನ್ನು ಆಯ್ಕೆ ಮಾಡಬೇಕೋ ಅಥವಾ ದಕ್ಷಿಣ ಕರ್ನಾಟಕದವರನ್ನೋ ಎಂಬುದು ಮುಖ್ಯವಲ್ಲ, ಪಕ್ಷದ ಮುಖಂಡರ ಅಭಿಪ್ರಾಯ ಪಡೆದು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು ಎಂದರು. ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡಿದ ಸ್ವಪಕ್ಷೀಯರ ಮೇಲೆ ಕ್ರಮ ಕೈಗೊಳ್ಳಲು ಎ.ಕೆ. ಆ್ಯಂಟನಿ ನೇತೃತ್ವದಲ್ಲಿ ಶಿಸ್ತುಪಾಲನಾ ಸಮಿತಿ ರಚನೆ ಮಾಡಲಾಗಿದ್ದು, ಸಮಿತಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಕಳಸಾ-ಬಂಡೂರಿ ನಾಲಾ ಜೋಡಣೆ ಸಮಸ್ಯೆಯನ್ನು ಬಗೆಹರಿಸಲು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ನಡೆಸಬೇಕು. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಮೋದಿ ವಿಫಲ: ಪ್ರಧಾನಿ ಮೋದಿ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಕಪ್ಪು ಹಣ ಬಯಲಿಗೆಳೆದು ದೇಶವಾಸಿಗಳೆಲ್ಲರ ಖಾತೆಗೆ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ಅದರ ಬಗ್ಗೆ ಕೇಳಿದರೆ ಲವ್ ಜಿಹಾದ್ ಬಗ್ಗೆ ಚರ್ಚಿಸುವುದು ಮುಖ್ಯ ಎನ್ನುತ್ತಾರೆ. 2 ಕೋಟಿ ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರು.
ಈ ಬಗ್ಗೆ ಕೇಳಿದರೆ ತಲಾಖ್ ಬಗ್ಗೆ ಚರ್ಚಿಸುವುದು ಅಗತ್ಯಎಂದು ಹೇಳುತ್ತಾರೆ. ದೇಶದ ಆರ್ಥಿಕ ಸ್ಥಿತಿ ಬಗ್ಗೆ ಕೇಳಿದರೆ, ಘರ್ ವಾಪಸಿ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು ಎನ್ನುತ್ತಾರೆ. ಮೋದಿ ತಮ್ಮ ಆಡಳಿತ ವೈಫಲ್ಯ ಮುಚ್ಚಿಡಲು ಹಿಂದೂ-ಮುಸಲ್ಮಾನರ ಮಧ್ಯೆ ದಂಗೆ ಹುಟ್ಟುಹಾಕುತ್ತಿದ್ದಾರೆ ಎಂದು ಆರೋಪಿಸಿದರು.