Advertisement

ಉಳಿದವರು ಕಂಡಂತೆ ನಾಗರಹಾವು

04:04 PM Jul 21, 2018 | |

 ಚಿತ್ರದುರ್ಗದ ಸೊಬಗು ಮತ್ತು ವೈಭವವನ್ನು ನಾಡಿನ ಮೂಲೆ ಮೂಲೆಗೂ ತಲುಪಿಸಿದ ಚಿತ್ರ ನಾಗರಹಾವು. 70ರದಶಕದ ಸೂಪರ್‌ ಹಿಟ್‌ ಸಿನಿಮಾ ಅನ್ನಿಸಿಕೊಂಡಿದ್ದ “ನಾಗರಹಾವು’ ಇದೀಗ ಮತ್ತೆ ತೆರೆಗೆ ಬಂದಿದೆ. ಚಾಮಯ್ಯ ಮೇಷ್ಟ್ರು, ರಾಮಾಚಾರಿ, ಅಲಮೇಲು, ಮಾರ್ಗರೇಟ್‌, ಜಲೀಲ, ಪುಟ್ಟಣ್ಣ ಕಣಗಾಲ್‌… ಈ ಹೆಸರುಗಳು ಮತ್ತೆ ಮತ್ತೆ ಕೈ ಜಗ್ಗುತ್ತಿವೆ. ಇಂಥ ಸಂದರ್ಭದಲ್ಲಿಯೇ, ನಾಗರಹಾವು ಸಿನಿಮಾದ ಶೂಟಿಂಗನ್ನು ಪ್ರತ್ಯಕ್ಷವಾಗಿ ಕಂಡ ಚಿತ್ರದುರ್ಗದ  ರಂಗ ಕಲಾವಿದ ಕೆ.ನಾಗರಾಜ್‌, ವೈದ್ಯ ಡಾ|ರಾಮಚಂದ್ರ ನಾಯಕ, ಆಗ ಉಪನ್ಯಾಸಕರಾಗಿದ್ದ ಬಿ. ರಾಜಶೇಖರಪ್ಪ  
ಆ ಜಮಾನದ ಮಧುರ ನೆನಪುಗಳನ್ನು ಇಲ್ಲಿ ಹರವಿಟಿದ್ದಾರೆ. ನಾಗರಹಾವು ಚಿತ್ರದಲ್ಲಿ ಮದಕರಿನಾಯಕನ ಪಾತ್ರ ಮಾಡಿದ್ಯಾರು? ಹೈದರಾಲಿಯ ಪಾತ್ರದಾರಿ ಪುಟ್ಟಣ್ಣನವರಿಗೆ ಎಲ್ಲಿ ಸಿಕ್ಕಿದ್ದು ಎಂಬಂಥ ಕುತೂಹಲದ ಪ್ರಶ್ನೆಗಳಿಗೂ ಇಲ್ಲಿ ಉತ್ತರವಿದೆ. ವಿವರಣೆಯಿದೆ…

Advertisement

 ಪುಟ್ಟಣ್ಣ ಕಣಗಾಲ್‌ ನಮ್ಮೂರನ್ನು ಹೇಗೆ ತೋರಿಸ್ತಾರೆ ಅನ್ನೋ ಕುತೂಹಲ ಜನಕ್ಕೆ ಮಾತ್ರವಲ್ಲ, ನಮ್ಮ ಚಿತ್ರದುರ್ಗದ ಕೋಟೆಗೂ ಇತ್ತು ಅನಿಸುತ್ತದೆ !  ಹಾಗಾಗಿ, ದಿನಂಪ್ರತಿ ಶೂಟಿಂಗ್‌ ನೋಡೋದಂದ್ರೆ ಎಲ್ಲರಿಗೂ ಏನೋ ಸಂಭ್ರಮ. ಅದೊಂಥರ ಹಬ್ಬದ ಸಡಗರ ಅನ್ನಿ.  ಆಗ ನಿಜವಾದ ಹೀರೋಗಳು ಪುಟ್ಟಣ್ಣ ಮತ್ತು ಅಶ್ವತ್ಥ್. ವಿಷ್ಣುವರ್ಧನ್‌ ಯಾರಿಗೂ ಅಷ್ಟಾಗಿ ಪರಿಚಿತವಾಗಿರಲಿಲ್ಲ.  ಚಿತ್ರದುರ್ಗದ ಕೋಟೆ, ಕಾಲೇಜ್‌, ಬೀದಿಗಳಲ್ಲಿ ಶೂಟಿಂಗ್‌ ನಡೆಯುತ್ತಿದ್ದರೆ ಸಾವಿರಾರು ಮಂದಿ ಶೂಟಿಂಗ್‌ ನೋಡಲು ನಗರ ಸೇರಿದಂತೆ, ಗ್ರಾಮೀಣ ಪ್ರದೇಶಗಳಿಂದ ತಂಡ ತಂಡವಾಗಿ ಬರುತ್ತಿದ್ದರು. ಶೂಟಿಂಗ್‌ ನೋಡಲು ಬರುತ್ತಿದ್ದ ಜನರು ಚಿತ್ರ ತಂಡದವರೊಂದಿಗೆ ಎಂದೂ ಅಸಭ್ಯವಾಗಿ ವರ್ತಿಸುವುದಾಗಲಿ, ಗಲಾಟೆ ಮಾಡುವುದಾಗಲಿ ಮಾಡುತ್ತಿರಲಿಲ್ಲ. ಚಿತ್ರ ತಂಡದ ನಟ, ನಟಿ, ನಿರ್ದೇಶಕರು ತುಂಬ ಸಡಗರದಿಂದ ಜನರತ್ತ ಕೈ ಬೀಸಿ ಟಾಟಾ ಮಾಡುತ್ತಿದ್ದರು. ಮುಂಗಾರು ಹಂಗಾಮಿನ ದಿನಗಳಾದ ಜೂನ್‌, ಜುಲೈ, ಆಗಸ್ಟ್‌ ಈ ಮೂರು ತಿಂಗಳಲ್ಲಿ ನಡೆದ ಶೂಟಿಂಗ್‌ ಸಂದರ್ಭದಲ್ಲಿ ಇಡೀ ಕೋಟೆಯನ್ನು ಮುತ್ತಿಗೆ ಹಾಕಿದಂತೆ ಮೋಡಗಳು ಆವರಿಸಿಕೊಂಡಾಗ ಇಡೀ ಪ್ರದೇಶ ಕತ್ತಲು ಕವಿದಂತೆ ಆಗುತ್ತಿತ್ತು.  ಆಗೆಲ್ಲಾ ಚಿತ್ರ ತಂಡ ಸಾಕಷ್ಟು ಸಮಸ್ಯೆ ಎದುರಿಸುತ್ತಿತ್ತು. ಆವರಿಸಿದ ಮೋಡಗಳು ಮರೆಯಾಗಿ ಬೆಳಕು ಮೂಡುವ ತನಕ ಇಡೀ ತಂಡ ಗಲಿಬಿಲಿಯಲ್ಲಿರುತ್ತಿತ್ತು. 

ಇನ್ನೂ ನೆನಪಿದೆ. 
 ವಿಷ್ಣುವರ್ಧನ್‌ ಶಾಲೆಗೆ ಸರಿಯಾಗಿ ಹಾಜರಾಗದೇ ಇದ್ದದ್ದಕ್ಕೆ ಮೇಷ್ಟ್ರು ಬೈಯ್ಯುತ್ತಾರೆ. ಆನಂತರ ಅವರಿಗೆ ಹೊಡೆಯುವ ದೃಶ್ಯವನ್ನು ಪಟ್ಟಣದ ಮೆಜೆಸ್ಟಿಕ್‌ ಸರ್ಕಲ್‌ ಮತ್ತು ಸರ್ಕಾರಿ ವಿಜಾnನ ಕಾಲೇಜಿನಲ್ಲಿ ಶೂಟಿಂಗ್‌ ಮಾಡುತ್ತಿದ್ದರು. ಈ ಹೊಡೆಯುವ ದೃಶ್ಯದಲ್ಲಿ ಯಾಕೋ ವಿಷ್ಣುವರ್ಧನ್‌ ಸ್ವಲ್ಪ ಪುಟ್ಟಣ್ಣನವರ ನಿರೀಕ್ಷೆಗೆ ತಕ್ಕಂತೆ ಮಾಡಲಿಲ್ಲ. ಆಗ ಏನಾಯ್ತು ಗೊತ್ತೆ? ಅದುವರೆಗೂ ಕ್ಯಾಮರ ಹಿಂದೆ ನಿಂತಿದ್ದ ಪುಟ್ಟಣ್ಣ, ಏಕಾ ಏಕಿ ಬಂದು ವಿಷ್ಣುವರ್ಧನರ ಕೆನ್ನೆಗೆ ಭಾರಿಸಿದರು. ಸುತ್ತಲೂ ಜನ ನೋಡುತ್ತಲೇ ಇದ್ದರು. ತಕ್ಷಣ ಸಾವರಿಸಿಕೊಂಡ ವಿಷ್ಣುವರ್ಧನ್‌ ಮತ್ತೆ ನಟನೆಗೆ ಇಳಿದರು. ಪುಟ್ಟಣ್ಣನವರು ಎಲ್ಲವೂ ಆದ ಮೇಲೆ ಹೆಗಲ ಮೇಲೆ ಕೈ ಹಾಕಿದರು. ಸಿನಿಮಾದಲ್ಲಿ ಈ ಸೀನ್‌ ಇರಲಿಲ್ಲ. ಬದಲಾಗಿ ಚಾಮಯ್ಯ ಮೇಷ್ಟ್ರನನ್ನು ಲೈಟುಗಂಬಕ್ಕೆ ಕಟ್ಟಿಹಾಕುವ ಸೀನ್‌ ಮಾತ್ರ ಇತ್ತು. 

Advertisement

 ಕಾಲೇಜಿನಲ್ಲಿ ಸಿನಿಮಾಗಾಗಿಯೇ ಪ್ರಿನ್ಸ್‌ಪಾಲ್‌ ಕಚೇರಿ ಮತ್ತು ಒಂದು ಸೆಕ್ಷನ್‌ ಬಿಟ್ಟುಕೊಟ್ಟಿದ್ದರು ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರತಿ ದಿನ ಶೂಟಿಂಗ್‌ ನೋಡೋ ಮಜಾ. ಆದರೆ ಶಾಲೆಗೆ ಯಾವ ಕಾರಣಕ್ಕೂ ರಜೆ ಕೊಟ್ಟಿರಲಿಲ್ಲ.   ಪರೀಕ್ಷೆಯಲ್ಲಿ ನಕಲು ಮಾಡಲು ಚೀಟಿಗಳನ್ನು ಪ್ಯಾಂಟಿನ ಅಂಚಲ್ಲಿ ಇಟ್ಟುಕೊಂಡಾಗ, ಪ್ರಾಂಶುಪಾಲರು ಹಿಡಿಯುವುದು, ಅದಕ್ಕೆ ಪ್ರತೀಕಾರವಾಗಿ ವಿಷ್ಣುವರ್ಧನ್‌ ಗಲಾಟೆ ಮಾಡುವ ದೃಶ್ಯ ಎಲ್ಲವೂ ಪ್ರಿನ್ಸ್‌ಪಾಲ್‌ ಚೇಂಬರ್‌ನಲ್ಲೇ ಚಿತ್ರೀಕರಣ ನಡೆದದ್ದು. 

ಸಿನಿಮಾದ ಹೆಸರೇ ನಾಗರಹಾವು. ಅಷ್ಟಲ್ಲದೆ ಹಾವಿನ ದ್ವೇಷ… ಹಾಡು ಬೇರೆ ಇದೆ. ಹಾಗಾಗಿ, ಸಿನಿಮಾದಲ್ಲಿ ಅಂದರೆ ಜೀವಂತ ಹಾವು ತೋರಿಸಬೇಕು ಅನ್ನೋ ಐಡಿಯಾ ಪುಟ್ಟಣ್ಣನವರಿಗೆ ಇತ್ತು ಅನಿಸುತ್ತೆ. ಹಾಗಾಗಿ, ದುರ್ಗದಲ್ಲಿ ಯಾರಾದರೂ ಹಾವಾಡಿಗರು ಇದ್ದಾರಾ ನೋಡಿ ಅಂತ ಸಹಾಯಕರಿಗೆ ಹೇಳಿದ್ದರು. ಎರಡು, ಮೂರು ದಿನ ಹುಡುಕಿದರೂ ಸಿಗಲಿಲ್ಲ. ಕೊನೆಗೆ ಒಬ್ಬ ಸಿಕ್ಕ. ಅವನು ಹಾವನ್ನು ಚೆನ್ನಾಗಿ ಪಳಗಿಸಿದ್ದ.  ಆತನನ್ನು ಕರೆತಂದು, ವಿಷ್ಣುವರ್ಧನ್‌ ಕೈಗೆ ಹಾವು ಕೊಟ್ಟು, ಎರಡು ಸಲ ಪ್ರಾಕ್ಟೀಸು ಮಾಡಿಸಿದರು. ಆಮೇಲೆ ನಾಗರ ಹಾವು ಹಿಡಿದು ಕೋಟೆಯತ್ತ ಓಡುವ ಸೀನ್‌ ತೆಗೆದದ್ದು. 

 ಕೋಟೆಯ ಮೇಲ್ಭಾಗದಲ್ಲಿ ತುಪ್ಪದ ಕೊಳವಿದೆ. ಅದರ ಸಮೀಪದಲ್ಲಿರುವ ಬತೇರಿಗೆ  ವಿಷ್ಣು ಮತ್ತು ಮಾರ್ಗರೇಟ್‌ ಇಬ್ಬರ ಕ್ಲೈಮ್ಯಾಕ್ಸ್‌ ದೃಶ್ಯ ಚಿತ್ರೀಕರಣ ಮಾಡಿದ್ದು ಮಾತ್ರ ದೊಡ್ಡ ಮಟ್ಟದ ಸಾಹಸವೇ ಆಗಿತ್ತು. ಬತೇರಿ ಸ್ಥಳ, ಕ್ಯಾಮರಾಗಳನ್ನು ಇಟ್ಟು ಶೂಟ್‌ ಮಾಡುವಷ್ಟು ದೊಡ್ಡದಾಗಿರಲಿಲ್ಲ. ಕೊನೆಗೆ ಪುಟ್ಟಣ್ಣನವರು150 ಮೀಟರ್‌ ದೂರದಲ್ಲಿದ್ದ ಏಕನಾಥೇಶ್ವರಿ ದೇವಸ್ಥಾನದ ಬಳಿ ಕ್ಯಾಮರಾಗಳನ್ನು ಇಟ್ಟು ಶೂಟ್‌ ಮಾಡಿದರು.  ಆ ಸ್ಥಳಕ್ಕೆ ವಿಷ್ಣುವರ್ಧನ್‌, ಮಾರ್ಗರೇಟ್‌ರನ್ನು ಕರೆದುಕೊಂಡು ಹೋಗುವುದು ಕೂಡ ಸಿನಿಮಾ ಮಾಡುವಷ್ಟೇ ದೊಡ್ಡ ಸಾಹಸವಾಗಿತ್ತು. 

 ಸಿನಿಮಾದಲ್ಲಿ, ಕನ್ನಡ ನಾಡಿನ ವೀರರಮಣಿಯ ಈ ಹಾಡಿದೆ.  ಈ ಹಾಡಿಗೆ ಬಳಕೆಯಾದ ಮಕ್ಕಳ್ಳೆಲ್ಲ ತಿಪ್ಪಜ್ಜಿ ಸರ್ಕಲ್‌ ನಲ್ಲಿರುವ ಸೆಂಟ್‌ ಜೋಸೆಫ್ ಕಾನ್ವೆಂಟ್‌ನ ನೂರಾರು ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳನ್ನು ಪ್ರವಾಸಿಗರು ಎಂಬಂತೆ ತೋರಿಸಲಾಯಿತು. ಈ ಹಾಡಿನಲ್ಲಿ  ಹೈದರಾಲಿ ಪಾತ್ರವನ್ನು ಪ್ರಮುಖವಾಗಿ ತೋರಿಸಲಾಗಿತ್ತು. ಆದರೆ ಮದಕರಿ ನಾಯಕರ ಸನ್ನಿವೇಶ, ಪಾತ್ರ ಮೊದಲಿಗೆ ಈ ಸಿನಿಮಾದಲ್ಲಿ ಇರಲಿಲ್ಲ ! ಮದಕರಿ ನಾಯಕ ಎಂದರೆ ದುರ್ಗ, ದುರ್ಗ ಎಂದರೆ ಮದಕರಿ ನಾಯಕ’, ಇಂಥ  ಸನ್ನಿವೇಶನದಲ್ಲಿ ಮದಕರಿ ನಾಯಕನ ಪಾತ್ರವೇ ಇಲ್ಲ ಎಂದಾದರೆ ಚಿತ್ರ ಬಿಡುಗಡೆ ಮಾಡಲು ಬಿಡುವುದಿಲ್ಲ ಅಂತ 

“ನವ ಭಾರತ ತರುಣ ಕಲಾವಿದರ ಸಂಘ’ ಸದಸ್ಯರು ಎಚ್ಚರಿಕೆ ನೀಡಿದರು. ಈ ಆಗ್ರಹದ ಮಾತುಗಳಿಗೆ ಮಣಿದ ಪುಟ್ಟಣ್ಣ ಕಣಗಾಲ್‌, ಮದಕರಿ ನಾಯಕನ ಪಾತ್ರವನ್ನು ಕನ್ನಡ ನಾಡಿನ ವೀರರ ಮಣಿಯ ಹಾಡಿನಲ್ಲಿ ತೋರಿಸುವ ದೃಶ್ಯವನ್ನು ಸೇರಿಸಿಕೊಂಡರು. ಅಷ್ಟೇ ಅಲ್ಲ ಸ್ಥಳೀಯ ಕಲಾವಿದ ಜೆ.ಎನ್‌.ಕೋಟೆಯ ನಿಜಲಿಂಗಪ್ಪ ಅವರಿಂದಲೇ ಮದಕರಿ ನಾಯಕನ ಪಾತ್ರ ಮಾಡಿಸಿದ್ದು ವಿಶೇಷ.

ಶೂಟಿಂಗ್‌ ನಡೆಯುವಾಗ, ನವ ಭಾರತ ತರುಣ ಕಲಾವಿದರ ಸಂಘದ ವತಿಯಿಂದ ಸಂತೇಹೊಂಡದ ಸಮೀಪದ ಎಸ್‌.ಎನ್‌.ಎಲ್‌ ಡ್ರಾಮಾ ಕಂಪನಿಯಲ್ಲಿ ಮರಡಿಹಳ್ಳಿಯ ಪಿ.ಸೀತಾರಾಮರೆಡ್ಡಿ ವಿರಚಿತ “ರಾಜವೀರ ಮದಕರಿ ನಾಯಕ’ ಎನ್ನುವ ನಾಟಕ ಪ್ರದರ್ಶನಗೊಳ್ಳುತ್ತಿತ್ತು. ಒಂದು ದಿನ ಪುಟ್ಟಣ್ಣ ಕಣಗಾಲ್‌, ವಿಷ್ಣುವರ್ಧನ್‌, ಅಂಬರೀಶ್‌ ಸೇರಿದಂತೆ ಇಡೀ ನಾಗರ ಹಾವು ಸಿನೆಮಾ ತಂಡ ಈ ನಾಟಕವನ್ನು ವೀಕ್ಷಿಸಿದರು. ಇದರ ಕೆಲವು ಪಾತ್ರಧಾರಿಗಳನ್ನು ನಾಗರಹಾವು ಸಿನೆಮಾದಲ್ಲಿ ಪಾತ್ರ ಮಾಡಲು ಆಯ್ಕೆ ಮಾಡಿಕೊಂಡರು.  ಅದರಲ್ಲಿ ಪ್ರಮುಖವಾಗಿ ಅಜ್ಜಪ್ಪ ಅಲಿಯಾಸ್‌ ಮಹಲಿಂಗಪ್ಪ ಮದಕರಿ ನಾಯಕನ ನಾಟಕದಲ್ಲಿ ಹೈದರಾಲಿ ಪಾತ್ರ ಮಾಡಿದ್ದರು. ಇಡೀ ನಾಟಕ ನೋಡಿದ್ದ ಪುಟ್ಟಣ್ಣ ಕಣಗಾಲ್‌,  ಅಜ್ಜಪ್ಪನನ್ನು ಮೈಸೂರಿಗೆ ಕರೆಸಿ ಟ್ರಯಲ್‌ ಶೂಟ್‌ ಮಾಡಿಸಿ ನಂತರ ಅವರಿಂದಲೇ ಹೈದರಾಲಿಯ ಪಾತ್ರವನ್ನು ಸಿನೆಮಾದಲ್ಲೂ ಮಾಡಿಸಿದ್ದರು.

ಸಿನೆಮಾ ತುಂಬಾ ನೈಜವಾಗಿ ಬರಲೆಂದು ಕೋಟೆ ಆವರಣದ ಒಳ ಭಾಗದಲ್ಲೇ ಮೂರು ಮನೆಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಪ್ರಮುಖವಾಗಿ ಕ್ರಿಶ್ಚಿಯನ್‌ ಕುಟುಂಬದ ಮಾರ್ಗರೇಟ್‌ ಆಳ್ವರ ಒಂದು ಮನೆಯಾದರೆ, ಸಹ ಕಲಾವಿದರಿಗಾಗಿ ಎರಡು ಮನೆಗಳನ್ನು ಸಮೀಪದಲ್ಲೇ ನಿರ್ಮಿಸಲಾಗಿತ್ತು. 
ಮಾರ್ಗರೇಟ್‌ ಮನೆಗೆ ಬಂದು ವಿಷ್ಣುವರ್ಧನ್‌ ಗಲಾಟೆ ಮಾಡುವ ಸನ್ನಿವೇಶವನ್ನು ಪಕ್ಕದ ಮನೆಯ ಕಲಾವಿದರ ಪಾತ್ರ ಮಾಡಿದ್ದ ಶಿವಣ್ಣಾಚಾರ್‌, ಕೆ.ರಾಜಪ್ಪ, ಈಶ್ವರಪ್ಪ. ಬಿ.ಟಿ.ರೆಡ್ಡಿ, ಸಿ.ಕೆ.ದೇವೇಂದ್ರಪ್ಪ ಇವರು ಮೇಷ್ಟ್ರು ಪಾತ್ರಧಾರಿ ಕೆ.ಎಸ್‌.ಅಶ್ವತ್ಥ್ ಅವರಿಗೆ ಮುಟ್ಟಿಸುವ ಕೆಲಸ ಮತ್ತು ಜಗಳ ಬಿಡಿಸುವ ಕೆಲಸ ಮಾಡುತ್ತಿದ್ದರು. ಈ ಎಲ್ಲ ಕಲಾವಿದರೂ ಒಂದು ರೂ. ಸಂಭಾವನೆ ಪಡೆಯದೆ ನಾಗರಹಾವು ಚಿತ್ರಕ್ಕಾಗಿ ಪಾತ್ರ ಮಾಡಿದವರಾಗಿದ್ದಾರೆ. ಇಂದು ಈ ಕಲಾವಿದರು ಜೀವಂತವಾಗಿಲ್ಲ.

 ಜಲೀಲನ ನೆನಪು
 ಚಿತ್ರದುರ್ಗದ ಸರ್ಕಾರಿ ವಿಜಾnನ ಕಾಲೇಜಿಗೆ ಪ್ರತಿದಿನ ರಂಗಯ್ಯನ ಬಾಗಿಲ ಮೂಲಕ ಅಂಬರೀಶ್‌ ಹೋಗಬೇಕಿತ್ತು. ಒಂದು ಸೈಕಲ್‌ ತಳ್ಳಿಕೊಂಡು, ಬಾಯಲ್ಲೊಂದು ಸಿಗರೇಟ್‌ ಹಚ್ಚಿ ಪ್ರತಿ ದಿನ ಕಾಲೇಜಿಗೆ ಹೋಗುವಾಗ ಚಿತ್ರ ನಟಿ ಆರತಿ ಕಂಡ ತಕ್ಷಣ ಈ ಡೈಲಾಗ್‌ ಹೇಳುತ್ತಿದ್ದರು, “ಮೇರೆ ಸಪನೋಂಕಿ ರಾಣಿ ಕಬ್‌ ಆಯೋಗಿತೂ,   ಹೇ ಬುಲ್‌ ಬುಲ್‌ ಮಾತಾಡಾಕಿಲ್ವ’? ಎನ್ನುತ್ತಲೇ ಆರತಿ ಬಳಿಗೆ ಹೋಗಿ ಚೂಡಾಯಿಸುತ್ತಿದ್ದ ಸನ್ನಿವೇಶ ಕಣ್ಣಿಗೆ ಕಟ್ಟಿದಂತಿದೆ.  ಈಗಿನ ವಿದ್ಯಾರ್ಥಿಗಳು ಸಿನಿಮಾ ನೋಡಿದ್ದಾರೋ ಇಲ್ಲವೋ, ಆದರೆ ರಂಗಯ್ಯನ ಬಾಗಿಲು ಹೊಕ್ಕು ಕಾಲೇಜ್‌ ಕಡೆ ಪುಸ್ತಕ ಹಿಡಿದು ಹೊರಟರೆ ಪ್ರತಿಯೊಬ್ಬರಿಗೂ ಈ ಡೈಲಾಗ್‌ ನೆನಪಿಗೆ ಬರುವುದು ಖರೆ. 

ಶೂಟಿಂಗ್‌ ಸ್ಥಳಗಳು
 ಚಿತ್ರದುರ್ಗ ನಗರಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಸಿಗುವ ಸರ್ಕಾರಿ ವಿಜಾnನ ಕಾಲೇಜ್‌, ಕೋಟೆ ಆರಂಭಕ್ಕೂ ಮೊದಲು ಸಿಗುವ ರಂಗಯ್ಯನ ಬಾಗಿಲು, ಉಯ್ನಾಲೆ ಕಂಬ, ಕೋಟೆ ಸುತ್ತ ಮುತ್ತಲಿನ ಗುಡ್ಡ, ಬೆಟ್ಟಗಳು, ಬತೇರಿ, ಗರಡಿ ಮನೆ, ಚಂದ್ರವಳ್ಳಿ, ಶಂಕರ್‌ ಚಿತ್ರಮಂದಿರ ಸಮೀಪದ ಕೆಲ ಬೀದಿಗಳು, ವಾಸವಿ ಶಾಲೆ, ಧರ್ಮಶಾಲೆ ಬಳಿಯ ಕೆಲ ಬೀದಿಗಳು, ಹಿರಿಯೂರು ಸಮೀಪದ ಮಾರಿ ಕಣಿವೆ ಇಲ್ಲೆಲ್ಲ ನಾಗರಹಾವು ಚಿತ್ರದ ಶೂಟಿಂಗ್‌ ನಡೆದಿವೆ. ಈ ಸ್ಥಳಗಳೆಲ್ಲ ಈಗಲೂ ಹೆಚ್ಚಾಕಡಿಮೆ ಅದೇ ಸ್ಥಿತಿಯಲ್ಲೇ ಇವೆ. 

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next