Advertisement
ಮಲ್ಪೆಯ ಅಂಜನ ವರ್ಷಿಣಿ ಹೆಸರಿನ ಟ್ರಾಲೋ ಬೋಟ್ ಕಳೆದ ಎರಡು ದಿನದ ಹಿಂದೆ ಮೀನುಗಾರಿಕೆಗೆ ತೆರಳಿತ್ತು ಮುಂಜಾನೆ 3ರ ಹೊತ್ತಿಗೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬೋಟ್ ಸಮುದ್ರದ ಅಲೆಗಳಲ್ಲಿ ಹಾಕಿದ್ದ ಬಲೆಯೊಂದಿಗೆ ಅಡ್ಡಾಡುತ್ತಿತ್ತು. ಸಸಿಹಿತ್ಲುವಿನ ಮೀನುಗಾರರು ಮೀನು ಹಿಡಿಯಲೆಂದು ಸಮುದ್ರ ತಟದಲ್ಲಿ ಸೇರಿದಾಗ ಟ್ರಾಲ್ ಬೋಟ್ ನಿಯಂತ್ರಣ ತಪ್ಪಿದ್ದನ್ನು ಗಮನಿಸಿ ತಕ್ಷಣ ಕಾರ್ಯಪ್ರವೃತ್ತರಾಗಿ ದಡಕ್ಕೆ ಎಳೆಯಲು ಯಶಸ್ವಿಯಾದರು. ಈ ಬಗ್ಗೆ “ಉದಯವಾಣಿ”ಗೆ ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮೀನುಗಾರ ಚಂದ್ರಕುಮಾರ್ ಪ್ರತಿಕ್ರಿಯಿಸಿ “ಸಸಿಹಿತ್ಲುವಿನಿಂದ ಮೀನು ಹಿಡಿಯಲೆಂದು ತೆರಳಲು ಸಮುದ್ರದ ತಟಕ್ಕೆ ಬಂದಾಗ ಟ್ರಾಲೋ ಬೋಟ್ ಸಮುದ್ರದ ಅಲೆಗಳ ವಿರುದ್ಧವಾಗಿ ತೇಲುತ್ತಿದ್ದದನ್ನು ಗಮನಿಸಿ ತಕ್ಷಣ ನಾವು ಎಲ್ಲರೂ ರಕ್ಷಣಾ ಕಾರ್ಯ ನಡೆಸಿ ಕೊನೆಗೂ ಸುರಕ್ಷಿತವಾಗಿ ಬೋಟ್ ಸಹಿತ ಅದರಲ್ಲಿದ್ದ 5 ಮಂದಿ ಮೀನುಗಾರರನ್ನು ರಕ್ಷಿಸಿ ಶ್ರೀ ಭಗವತೀ ಕ್ಷೇತ್ರದ ಬಳಿಯ ಸಮುದ್ರದ ದಡಕ್ಕೆ ಬೋಟನ್ನು ಲಂಗರು ಹಾಕಲಾಯಿತು. ರವಿವಾರ ಪ್ರಕೃತಿಯ ಯಾವುದೇ ಅಡೆತಡೆ ಇಲ್ಲದಿದ್ದರೂ ಸಹ ಕೆಲವೊಮ್ಮೆ ಚಾಲಕನ ನಿಯಂತ್ರಣದಲ್ಲಿ ವ್ಯತ್ಯಾಸವಾದಲ್ಲಿ ಈ ಘಟನೆ ನಡೆಯಲು ಸಾಧ್ಯವಿದೆ ಎಂದರು.
ರಕ್ಷಣಾ ಕಾರ್ಯದಲ್ಲಿ ಕರಾವಳಿ ನಿಯಂತ್ರಣ ಪಡೆಯ ಜಗದೀಶ್, ಹರೀಶ್ ಮತ್ತು ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಯವರು ನಿಯೋಜಿಸಿದ ಜೀವರಕ್ಷಕ ದಳದ ಅನಿಲ್, ಮನೋಜ್, ದಿಲೀಪ್ ಹಾಗೂ ಸ್ಥಳೀಯ ಮೀನುಗಾರರು ನೆರವಾಗಿದ್ದಾರೆ. ಸ್ಥಳಕ್ಕೆ ಸುರತ್ಕಲ್ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.