Advertisement

ಸಮಾಜಕ್ಕೇ ಆಪರೇಷನ್‌

10:16 AM Sep 18, 2019 | mahesh |

ವೈದ್ಯರಾದವರು ರೋಗ, ರುಜಿನ ಹೆಚ್ಚೆಂದರೆ ಸ್ವಚ್ಛತೆ, ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಗಳ ಬಗ್ಗೆ ಎ.ಸಿ. ರೂಮಿನಲ್ಲಿ ಕುಳಿತು ಚರ್ಚೆ ಮಾಡುತ್ತಿರುತ್ತಾರೆ. ಪ್ಲೈಟ್‌ ಚಾರ್ಜ್‌ಕೊಟ್ಟು ಕೈ ತುಂಬ ಹಣಕೊಟ್ಟರೆ ಮುಂಬಯಿ,ದೆಹಲಿ ಅಷ್ಟೇ ಏಕೆ? ದುಬೈಗೂ ಹೋಗಿ ಶಸ್ತ್ರ ಚಿಕಿತ್ಸೆ ಮಾಡಿ ಜೇಬು ತುಂಬ ಹಣ ಸಂಪಾದನೆ ಮಾಡಿಕೊಂಡು ಬರುತ್ತಾರೆ. ಆದರೆ ಡಾ|ಚಿದಾನಂದ ರಾಮನಗೌಡರ ಮಾತ್ರ ತಮ್ಮನ್ನ ಭೇಟಿಯಾಗುವ ರೋಗಿಗಳಲ್ಲಿ ಪರಿಸರ ಕಾಳಜಿ ಮೂಡಿಸುವ ವಿನೂತನ ಪ್ರಯತ್ನ ಮಾಡುತ್ತಿದ್ದಾರೆ.

Advertisement

ಕಲಘಟಗಿ ಪಟ್ಟಣದ ಪಕ್ಕದಲ್ಲಿಯೇ ಹೊಲ ಮಾಡಿಕೊಂಡಿದ್ದ ಚಂಗುಗೌಳಿ, ಜೀವನ ಪರ್ಯಂತ ಏನಿಲ್ಲಾ ಅಂದರೂ ಸಾವಿರ ಗಿಡಗಳನ್ನ ಕಡಿದು ಒಗೆದಿರಬಹುದು. ಆತನ ವೃತ್ತಿ ಕೃಷಿಯಾದರೂ ಗಿಡ ಕಡಿದು ಹೊಟ್ಟೆ ಹೊರೆಯುವಷ್ಟು ಬಡತನ. ಆದರೆ, ಹೊಟ್ಟೆಗೆ ಅಲ್ಸರ್‌ ಆಗಿ ಆಪರೇಶನ್‌ ಮಾಡಿಸಿಕೊಂಡರೂ ವೈದ್ಯರಿಗೆ ಕೊಡುವಷ್ಟು ಹಣ ಆತನಲ್ಲಿ ಇರಲಿಲ್ಲ.ಆಸ್ಪತ್ರೆ ಬಿಲ್‌ ಕಟ್ಟಲಾಗದೇ ಸಂಕಷ್ಟಕ್ಕೆ ಸಿಲುಕಿ ಧಾರವಾಡದ ವೈದ್ಯರ ಕಾಲಿಗೆ ಬಿದ್ದು ಗೋಳಾಡುತ್ತಿದ್ದ. ಆಸ್ಪತ್ರೆಯ ಸಿಬ್ಬಂದಿ ಇವನ ವರ್ತನೆಗೆ ಬೇಸತ್ತು ಹೋಗಿದ್ದರು.

ಈ ಸುದ್ದಿ, ಆತನ ಶಸ್ತ್ರ ಚಿಕಿತ್ಸೆ ಮಾಡಿದ ಹಿರಿಯ ವೈದ್ಯರ ಕಿವಿಗೂ ಬಿತ್ತು. ಅವರು ಮಾತ್ರ ಮುಗುಳ್ನಕ್ಕು, ಚಂಗುಗೌಳಿಯನ್ನ ತಮ್ಮ ಕೊಠಡಿಗೆ ಕರೆಸಿಕೊಂಡರು. ಚಂಗುಗೌಳಿ ಅವರ ಕಾಲಿಗೆ ಎರಗಿ, “ಬಿಲ್‌ ಕಡಿಮೆ ಮಾಡಿಸಿ ಸಾರ್‌’ ಅಂತ ಗೋಳಿಟ್ಟ. ಮುಗುಳ್ನಕ್ಕ ವೈದ್ಯರು, ನೀನು ನನಗೆ ಹಣ ಕೊಡಬೇಡ, ನಾ ಹೇಳಿದ ಕೆಲಸ ಮಾಡ್ತಿಯಾ ? ಅಂದರು. “ಹೇಳಿ ಸಾರ್‌, ಏನಾದ್ರು ಮಾಡಿಕೊಡ್ತೇನೆ’ ಅಂದ.
ವೈದ್ಯರ ಮುಖ ನೋಡಿ ಕಣ್ಣೀರು ತೆಗೆದಿದ್ದ ಚಂಗುಗೌಳಿಗೆ ಆಚ್ಚರಿ ಕಾದಿತ್ತು. ವೈದ್ಯರು ಹೇಳಿದ್ರು: ” ಏನೂ ಬೇಡಾ, ನಿಮ್ಮೂರಿಗೆ ಹೋದ ಮೇಲೆ ಅಲ್ಲಿ 100 ಗಿಡ ನೆಡಬೇಕು. ಸಸಿ ಬೇಕಾದ್ರೆ ನಾನೆ ಕೊಡ್ತೇನೆ. ನಮ್ಮ ಸಿಬ್ಬಂದಿ ನಿಮ್ಮೂರಿಗೆ ಬಂದು ಗಿಡ ನೆಟ್ಟು ಹೋಗ್ತಾರೆ. ಅವಕ್ಕೆ ತಪ್ಪದೇ ನೀರು ಹಾಕಿ ಬೆಳೆಸೋ ಕೆಲಸಾ ನಿಂದು. ಏನಂತೀಯಾ ?’ ಅಂದರು. ಚಂಗುಗೌಳಿ ಒಪ್ಪಿದ. ವೈದ್ಯರ ಕಾಲು ಮುಟ್ಟಿ ನಮಸ್ಕರಿಸಿದ.

ಗಿಡಬೆಳೆಸಿ
ಹೀಗೆ ತಿಂಗಳಲ್ಲಿ ಏನಿಲ್ಲ ಅಂದರೂ ತಮ್ಮ ಆಸ್ಪತ್ರೆಗೆ ಬಂದು ಮುಖಾಮುಖಿಯಾಗುವ ಎರಡು ಸಾವಿರ ರೋಗಿಗಳನ್ನ, ಅವರ ರೋಗ ಗುಣಪಡಿಸುವುದರ ಜೊತೆಗೆ, ಅವರಲ್ಲಿ ಪರಿಸರ ಕಾಳಜಿ ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಧಾರವಾಡದ ಎಸ್‌.ಆರ್‌.ರಾಮನಗೌಡರ ಆಸ್ಪತ್ರೆಯಲ್ಲಿ ಹಿರಿಯ ಶಸ್ತ್ರ ಚಿಕಿತ್ಸಾ ವೈದ್ಯರಾಗಿರುವ ಡಾ|ಚಿದಾನಂದ ರಾಮನಗೌಡರ ಅವರು.

ಡಾಕ್ಟರೇ, ನಿಮ್ಮ ಉಪಕಾರ ನಾನು ಯಾವತ್ತೂ ಮರೆಯಲ್ಲ ಎಂದು ಅವರಿಂದ ಗುಣಮುಖರಾಗಿ ನಿರ್ಗಮಿಸುವ ಪ್ರತಿರೋಗಿಗೂ ಅವರು ವೃಕ್ಷ ನೆಟ್ಟು ಬೆಳೆಸುವ ಪ್ರತಿಜ್ಞೆ ಮಾಡಿಸುತ್ತಿದ್ದಾರೆ. ರೈತ ರೋಗಿಗಳಿದ್ದರೆ, ಅವರು ಹೊಲದಲ್ಲಿ ಮಳೆನೀರು ಕೂಯ್ಲು ಮಾಡಲು ಸಲಹೆ ನೀಡುತ್ತಾರೆ. ನಗರವಾಸಿಗಳಾದರೂ ಮಳೆನೀರು ಸಂರಕ್ಷಿಸಿಕೊಳ್ಳುವ ಕರಪತ್ರವನ್ನು ಅವರ ಕೈಯಲ್ಲಿಟ್ಟು ಕಳುಹಿಸುತ್ತಾರೆ.

Advertisement

ಆಸ್ಪತ್ರೆಯ ಗೋಡೆಗಳು ಸಾಮಾನ್ಯವಾಗಿ ರೋಗ,ಚಿಕಿತ್ಸೆಯ ಹೊಸ ವಿಧಾನಗಳ ಕರಪತ್ರ, ಪೋಸ್ಟರ್‌ಗಳಿಂದ ಅಲಂಕೃತವಾಗಿರುತ್ತವೆ. ಆದರೆ, ಡಾ|ರಾಮನಗೌಡರ ಆಸ್ಪತ್ರೆಯ ಗೋಡೆಗಳು, ಶೌಚಾಲಯದ ಕದಗಳು, ಹೊರ ರೋಗಿಗಳ ವಿಭಾಗದ ನೋಟಿಸ್‌ ಫಲಕಗಳಾಗಿವೆ. ಎಲ್ಲಿ ನೋಡಿದರೂ, ರೋಗ ರುಜಿನದ ಮಾಹಿತಿಗಿಂತಲೂ ಪರಿಸರ ಸಂರಕ್ಷಣೆ, ಜಲ ಜಾಗೃತಿ ಸಂದೇಶಗಳನ್ನು ಹೊತ್ತ ಕರಪತ್ರಗಳೇ ರಾರಾಜಿಸುತ್ತಿವೆ.

ಕತ್ತರಿ, ಶಸ್ತ್ರ ಚಿಕಿತ್ಸೆ ಹಿಡಿಯವ ಕೈಯಲ್ಲಿ ಅದೇಕೇ ಡಾ|ರಾಮನಗೌಡರು ಸಸಿ ಹಿಡಿದರು ಎಂಬುದರ ಹಿಂದೆ ಅಂತಹಾ ದೊಡ್ಡ ರಹಸ್ಯವೇನೂ ಅಡಗಿಲ್ಲ. ತಮ್ಮ ಬಳಿ ಬರುವ ರೋಗಿಗಳು ಹೇಳಿಕೊಳ್ಳುವ ವಿನೂತನ ಸಮಸ್ಯೆಗಳಿಗೆ ಪರಿಸರಹಾನಿಯೇ ಕಾರಣ ಎಂಬುದು ದೃಢಪಟ್ಟಿರುವುದು. ಜೊತೆಗೆ ವಿಜಯಪುರ ಸಿದ್ಧೇಶ್ವರ ಸ್ವಾಮೀಜಿಗಳು ಪರಿಸರ ಉಳಿಸುವ ವಾಗ್ಧಾನ ಮಾಡಿಸಿದ್ದು ಅವರ ಈ ವೃಕ್ಷ ಸಂರಕ್ಷಣಾ ಪ್ರಯತ್ನಕ್ಕೆ ಕಾರಣವಂತೆ.

2 ಸಾವಿರ ಸಸಿ
ಡಾ|ರಾಮನಗೌಡರ, ಕಳೆದ ನಾಲ್ಕು ವರ್ಷಗಳಿಂದ ಪ್ರತಿವರ್ಷ ಎರಡು ಸಾವಿರದಷ್ಟು ಸಸಿಗಳನ್ನು ಸ್ವತಃ ತಾವೇ ತಮ್ಮ ಆಸ್ಪತ್ರೆಯ ಕಾಂಪೌಂಡಿನಲ್ಲಿ ಬೆಳೆಸುತ್ತಿದ್ದಾರೆ. ಹೊಂಗೆ,ಕಾಡು ಬಾದಾಮಿ, ನೇರಳೆ, ಹುಣಸೆ, ಅತ್ತಿ…ಹೀಗೆ, ದೇಶಿಯ ಗಿಡಗಳನ್ನು ನೆಟ್ಟಿದ್ದಾರೆ. ವೈದ್ಯರ ಈ ಪ್ರಯತ್ನಕ್ಕೆ ಅರಣ್ಯ ಇಲಾಖೆಯೂ ಕೈ ಜೋಡಿಸಿದ್ದು ಸಸಿಗಳ ಪೂರೈಕೆ ಮಾಡುತ್ತಿದೆ.

ಆಸ್ಪತ್ರೆಯ ಸಿಬ್ಬಂದಿಗೆ ಭಾನುವಾರ ರಜೆಯಾದರೂ, ಅವರೆಲ್ಲ ಅಂದು ಪರಿಸರ ಜಾಗೃತಿ ಸಂಕೇತ ಹೊತ್ತ ಟೀಶರ್ಟ್‌ಗಳನ್ನು ಧರಿಸಿಕೊಂಡು ನಿಗದಿ ಪಡಿಸಿದ ಹಳ್ಳಿಯ ಕಡೆ ಹೆಜ್ಜೆ ಹಾಕಬೇಕು. ಆಪರೇಶನ್‌ ಥಿಯೇಟರ್‌ನಲ್ಲಿ ಕತ್ತರಿ, ಅರಳಿ, ಔಷಧಿ ಪೂರೈಸುವ ಎಲ್ಲ ಕೈಗಳು, ಆವತ್ತು ಗಿಡ ನೆಡುವ ಕಾರ್ಯಕ್ಕೆ ಸಸಿ, ಗುದ್ದಲಿ, ನೀರು, ಗೊಬ್ಬರ ಪೂರೈಸಬೇಕು.

ಗಿಡ ನೆಡುವುದು ದೊಡ್ಡದಲ್ಲ, ನೆಟ್ಟ ಗಿಡಗಳನ್ನು ರಕ್ಷಿಸುವುದು
ಡಾ|ಚಿದಾನಂದ ಅವರಿಗೆ ದೊಡ್ಡ ತಲೆನೋವಾಗಿದ್ದೂ ಸತ್ಯ. ಆದರೆ, ಶಸ್ತ್ರಚಿಕಿತ್ಸೆ ಮಾಡಿದ ರೋಗಿ ಗುಣಮುಖರಾಗುವವರೆಗೂ ಮಾಡುವ ಪ್ರಯತ್ನವನ್ನೇ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳುವುದಕ್ಕೂ ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ನೆಟ್ಟ ಗಿಡಗಳಿಗೆ ಬರಗಾಲ ಮತ್ತು ಬೇಸಿಗೆಯಲ್ಲಿ ಧಾರವಾಡದಿಂದಲೇ ಟ್ಯಾಂಕರ್‌ ಮೂಲಕ ನೀರು ಹಾಕಿ ಬರುತ್ತಾರೆ. ಅಷ್ಟೇ ಅಲ್ಲ, ಧಾರವಾಡ ಸುತ್ತಮುತ್ತಲು ಇರುವ ಹಳ್ಳಿ ಹಳ್ಳಿಯ ಮನೆ ಮನೆ ತಿರುಗಾಡಿ ಸಸಿ ನೆಡುವ ಮತ್ತು ಪೋಷಿಸುವ, ಕುಡಿಯುವ ನೀರಿನ ಬಳಕೆ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಆರಂಭಿಸಿದ್ದಾರೆ. ಇವರ ಈ ಕಾರ್ಯಕ್ಕೆ ಅವರ ತಂದೆ ಹಿರಿಯ ವೈದ್ಯರಾದ ಡಾ|ಎಸ್‌.ಆರ್‌.ರಾಮನಗೌಡರ ಆರು ಜನ ಸಹೋದರ ವೈದ್ಯರು, ಪತ್ನಿ ದಾಕ್ಷಾಯಿಣಿ, ಪುತ್ರಿಯರಾದ ಇಷ್ಠಿತಾ, ನಿಶ್ಚಿತಾ ಸಹ ಸಾತ್‌ ನೀಡಿದ್ದಾರೆ. ಸದ್ಯಕ್ಕೆ ಧಾರವಾಡ ಸುತ್ತಲಿನ ಆಯ್ದ ಹಳ್ಳಿಗಳ ಮನೆ ಮನೆಗೆ ನೀರು ವ್ಯಯ ತಪ್ಪಿಸಲು ಉಚಿತವಾಗಿ ನಲ್ಲಿ ವಿತರಿಸುವ ಪ್ರಯತ್ನದಲ್ಲಿದ್ದಾರೆ ವೈದ್ಯರು.

“ನಾನು ಒಬ್ಬ ರೋಗಿಯನ್ನು ಗುಣಪಡಿಸಿದಾಗ ಆನಂದ ಸಿಕ್ಕುತ್ತದೆ. ಆದರೆ ನನ್ನಿಂದ ಗುಣಮುಖನಾದ ರೋಗಿ ನನಗೆ ಕೊಡುವ ಪ್ರಶಂಸೆ, ಕೃತಜ್ಞ ತಾ ಭಾವಕ್ಕಿಂತ ಆತನು ಈ ಪರಿಸರಕ್ಕೆ ಚಿಕ್ಕ ಕೊಡುಗೆ ನೀಡಬೇಕು. ಅಂದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಂಚವಾದರೂ ಆರೋಗ್ಯ ಕೊಡಲು ಸಾಧ್ಯ. ಹೀಗಾಗಿಯೇ ನಾನು ಆಪರೇಷನ್‌ ಪರಿಸರ ಅಭಿಯಾನ ಆರಂಭಿಸಿದ್ದೇನೆ’ ಎನ್ನುತ್ತಾರೆ ಡಾ|ಚಿದಾನಂದ ರಾಮನಗೌಡರ್‌.

ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next