ಬೆಳಗಾವಿ: ಜಮೀನಿಗೆ ಕೆಲಸಕ್ಕೆ ಹೋಗಿ ಬಳ್ಳಾರಿ ನಾಲಾ ಮಧ್ಯದ ಮನೆಯಲ್ಲಿ ಸಿಲುಕಿ ಹಾಕಿಕೊಂಡಿರುವ ದಂಪತಿಯನ್ನು ರಕ್ಷಿಸಲು ಅಗ್ನಿಶಾಮಕ ಹಾಗೂ ಸೈನಿಕರು ಸತತ ಕಾರ್ಯಾಚರಣೆ ನಡೆಸಿದ್ದಾರೆ.
ತಾಲೂಕಿನ ಕಬಲಾಪುರ ಬಳಿಯ ಬಳ್ಳಾರಿ ನಾಲಾ ಹಳ್ಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ತಾಲೂಕಿನ ಈರನಟ್ಟಿ ಗ್ರಾಮದ ಕಾಡಪ್ಪ ಹಾಗೂ ರತ್ನವ್ವ ಎಂಬ ದಂಪತಿ ನೀರಿನಲ್ಲಿ ಸೋಮವಾರ ರಾತ್ರಿಯಿಂದ ಸಿಲುಕಿಕೊಂಡಿದ್ದು, ಮನೆಯ ಕಟ್ಟೆಯ ಮೇಲೆ ರಕ್ಷಣೆಗೆ ಮೊರೆಯಿಡುತ್ತಿದ್ದಾರೆ. ರಸ್ತೆಯಿಂದ ಮನೆ ಸುಮಾರು 200 ಮೀಟರ್ ದೂರದಲ್ಲಿರುವುದರಿಂದ ಸತತ ಕಾರ್ಯಾಚರಣೆ ನಡೆಸಿದರೂ ರಕ್ಷಣೆ ಕಷ್ಟಕರವಾಗಿದೆ. 24 ಗಂಟೆ ಕಳೆದರೂ ಹೊರ ತೆಗೆಯುವಲ್ಲಿ ಆಗುತ್ತಿಲ್ಲ.
ಹಾವೇರಿಯಿಂದ 6-7 ಜನರ ಅಗ್ನಿಶಾಮಕ ತಂಡ ಆಗಮಿಸಿ ಕಾರ್ಯಾಚರಣೆ ಮುಂದುವರಿಸಿದೆ. ನಿಪ್ಪಾಣಿಯಿಂದ ಎನ್‌ಡಿಆರ್ ಎಫ್ ತಂಡ ಆಗಮಿಸುತ್ತಿದೆ. ಹೆಲಿಕಾಪ್ಟರ್ ಬಳಸಿ ರಕ್ಷಣೆಗೆ ಮುಂದಾಗುವ ಸಾಧ್ಯತೆ ಇದೆ.
ಮಂಗಳವಾರ ಮಧ್ಯಾಹ್ನ ದಂಪತಿ ರಕ್ಷಿಸಲು ಹೋಗಿದ್ದ ಕಬಲಾಪುರ ಗ್ರಾಮದ ಯುವಕ ರಾಜು ನೀರಿನಲ್ಲಿ ಕೊಚ್ಚಿ ಹೋಗಿ ಗಿಡದ ಮೇಲೆ ಕುಳಿತಿದ್ದನು. ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಮರಕ್ಕೆ ಹಗ್ಗ ಕಟ್ಟಿ ಯುವಕ ರಾಜುನನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಯುವಕ ರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಳ್ಳಾರಿ ನಾಲಾ ಪಕ್ಕದ ಹೊಲದಲ್ಲಿ ಮನೆ ಇದೆ. ಕೂಲಿ ಕೆಲಸ ಮಾಡುತ್ತ ಈ ದಂಪತಿ ಇಲ್ಲಿಯೇ ಜೀವನ ಸಾಗಿಸುತ್ತಿತ್ತು. ಬಳ್ಳಾರಿ ನಾಲಾ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಮನೆ ಸುತ್ತಲೂ ನೀರು ತುಂಬಿಕೊಂಡಿದೆ. ಸೋಮವಾರ ರಾತ್ರಿ ನೀರು ಆವರಿಸಿಕೊಂಡಿದ್ದರಿಂದ ದಂಪತಿಗೆ ಹೊರ ಬರಲು ಸಾಧ್ಯವಾಗಿಲ್ಲ. ಇಡೀ ರಾತ್ರಿಯೆಲ್ಲ ಮಳೆ ನೀರಿನಲ್ಲಿಯೇ ಕಾಲ ಕಳೆದಿದ್ದಾರೆ. ಬೆಳಗ್ಗೆ ಕಬಲಾಪುರ ಗ್ರಾಮಸ್ಥರು ರಸ್ತೆ ಮೇಲೆ ಹಾಯ್ದು ಹೋಗುತ್ತಿದ್ದಾಗ ದಂಪತಿ ಮೊರೆಯಿಡುತ್ತಿರುವುದನ್ನು ಕಂಡಿದ್ದಾರೆ. ದಂಪತಿಯನ್ನು ಹೊರ ತರಲು ಅನೇಕರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯ ಪೊಲೀಸರು, ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಸೈನಿಕರು ಬೋಟ್ ಸಮೇತ ಸುಮಾರು 80ಕ್ಕೂ ಹೆಚ್ಚು ಜನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮನೆಯ ನಾಲ್ಕೂ ಭಾಗದಲ್ಲಿ ಮಳೆ ನೀರು ಆವರಿಸಿಕೊಂಡಿದ್ದರಿಂದ ಕಾರ್ಯಾಚರಣೆಗೆ ಅಡಚಣೆ ಆಯಿತು. ಅಗ್ನಿಶಾಮಕ ಸಿಬ್ಬಂದಿ ಯುವಕನನ್ನು ಸುಲಭವಾಗಿ ರಕ್ಷಿಸಿದ ಬಳಿಕ ದಂಪತಿಯನ್ನು ರಕ್ಷಿಸಲು ಬೋಟ್ ಮೂಲಕ ಮುಂದಾದರು. ನಾಲೆಯ ನೀರು ರಭಸದಿಂದ ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು. ಗಿಡಕಂಟಿ ಬೋಟ್‌ಗೆ ಅಡ್ಡಿಯಾಗಿವೆ.
ಬಳಿಕ ಪಕ್ಕದ ಧರನಟ್ಟಿ ಗ್ರಾಮದಲ್ಲಿ ಮೀನು ಹಿಡಿಯುವ ಬೋಟ್ ತಂದು ಇಬ್ಬರು ಸ್ಥಳೀಯರು ಕಾರ್ಯಾಚರಣೆ ನಡೆಸಿದರೂ ಇದೂ ವಿಫಲವಾಯಿತು. ರಭಸದ ನೀರು ಬರುತ್ತಿರುವುದರಿಂದ ಬೋಟ್ ಮುಂದೆ ಹೋಗಲಿಲ್ಲ. ಬೋಟ್ ಮಗುಚಿ ಬಿದ್ದು ಅದರಲ್ಲಿದ ವ್ಯಕ್ತಿ ನೀರಿನಲ್ಲಿ ಕಂಟಿಯ ಬಳಿ ಸಿಕ್ಕು ಹಾಕಿಕೊಂಡು ಪ್ರಯಾಸಪಟ್ಟು ದಡ ಸೇರಿದ್ದಾನೆ. ನೀರಿನ ಹರಿವು ಹೆಚ್ಚಾಗಿದ್ದರಿಂದ ದಂಪತಿಯನ್ನು ದಡ ಸೇರಿಸಲು ಸಾಧ್ಯವಾಗಲಿಲ್ಲ. ಮಂಗಳವಾರ ಕಾರ್ಯಾಚರಣೆ ಮುಂದುವರಿದಿದೆ.
ಸ್ಥಳದಲ್ಲಿ ಪೊಲೀಸ್ ಆಯುಕ್ತ ಲೋಕೇಶಕುಮಾರ, ತಹಶಿಲ್ದಾರ ಮಂಜುಳಾ ನಾಯಕ, ತಾಪಂ ಇಒ ಕಲಾದಗಿ ಸೇರಿದಂತೆ ಅನೇಕರು ಬೀಡು ಬಿಟ್ಟಿದ್ದಾರೆ.
ಜಿಲ್ಲಾಧಿಕಾರಿ ಸ್ಪಂದನೆ: ತಾಲೂಕಿನ ಕಬಲಾಪುರ ಬಳಿ ಹರಿದು ಹೋಗುತ್ತಿರುವ ಬಳ್ಳಾರಿ ನಾಲಾ ಪಕ್ಕದ ಮನೆಯಲ್ಲಿ ಸಿಲುಕಿಕೊಂಡಿದ್ದ ದಂಪತಿ ಬಗ್ಗೆ ವಿಷಯ ತಿಳಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಕ್ಷಣ ಸ್ಪಂದಿಸಿ ದ್ದಾರೆ. ದಂಪತಿಯನ್ನು ರಕ್ಷಿಸುವಂತೆ ಕೂಡಲೇ ಸಿಬ್ಬಂದಿ ಗೆ ಸೂಚಿಸಿ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕಳುಹಿಸಿಕೊಟ್ಟರು. ಹೆಚ್ಚಿನ ಕಾರ್ಯಾಚರಣೆಗೆ ಸೈನಿಕರನ್ನೂ ರಕ್ಷಣೆಗೆ ಕಳುಹಿಸಿದರು.