Advertisement

ಬೀಚ್‌ಗಳಿಗೂ ವಿಸ್ತರಿಸಿದ “ಆಪರೇಷನ್‌ ಸುರಕ್ಷಾ’

09:58 PM Jan 08, 2021 | Team Udayavani |

ಮಹಾನಗರ, ಜ. 8: ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಕೂಟ, ಅನಗತ್ಯ ಸಂಚಾರ, ಅಕ್ರಮ ಚಟುವಟಿಕೆಗಳನ್ನು ತಡೆಯಲು “ಆಪರೇಷನ್‌ ಸುರಕ್ಷಾ’ ಆರಂಭಿಸಿರುವ ಮಂಗಳೂರು ಪೊಲೀಸರು ಇದೀಗ ಬೀಚ್‌ಗಳತ್ತ ಕಣ್ಣು ಹಾಯಿಸಿದ್ದಾರೆ.

Advertisement

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ತಣ್ಣೀರುಬಾವಿ, ಸುರತ್ಕಲ್‌, ಸೋಮೇಶ್ವರ ಮತ್ತು ಪಣಂಬೂರು ಬೀಚ್‌ಗಳಲ್ಲಿ ಗುರುವಾರ ರಾತ್ರಿ ದಿಢೀರ್‌ ಕಾರ್ಯಾಚರಣೆ ನಡೆಸಿರುವ ಪೊಲೀಸರು 70 ಮಂದಿ ಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಅಕ್ರಮ ಚಟು ವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೆ ಬಿಸಿ ಮುಟ್ಟಿಸಿದ್ದಾರೆ.

ರಾತ್ರಿ ಬೀಚ್‌ಪ್ರಿಯರಲ್ಲಿ ಗೊಂದಲ :

ನಾಲ್ಕು ಪ್ರಮುಖ ಬೀಚ್‌ಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿರುವುದರಿಂದ ಸಂಜೆ/ರಾತ್ರಿ ವೇಳೆ ಬೀಚ್‌ಗೆ ಬರುವವರಲ್ಲಿ ಗೊಂದಲ ಉಂಟಾಗಿದೆ. ಕೆಲವು ಮಂದಿ ರಾತ್ರಿ 10 ಗಂಟೆಯವರೆಗೂ ಬೀಚ್‌ನಲ್ಲಿ ಉಳಿಯುತ್ತಾರೆ. ಇನ್ನು ಕೆಲವು ಮಂದಿ ರಾತ್ರಿ ಬೀಚ್‌ನಲ್ಲಿ ವಾಕಿಂಗ್‌ ಮಾಡುತ್ತಾರೆ. ತೀರದಲ್ಲಿ “ಮೂನ್‌ ಲೈಟ್‌’ ಆಸ್ವಾದಿಸಲು ಬರುವವರಿದ್ದಾರೆ. ಅಲ್ಲದೆ ಸ್ಥಳೀಯರು ಕೆಲವೊಮ್ಮೆ ರಾತ್ರಿ ಬೀಚ್‌ನಲ್ಲಿ ಕಾಲ ಕಳೆಯುತ್ತಾರೆ. ಪೊಲೀಸರ ಕಾರ್ಯಾಚರಣೆ ಇಂಥವರಲ್ಲಿ ಆತಂಕ ಮತ್ತು ಗೊಂದಲ ಮೂಡಿಸಿದೆ. “ರಾತ್ರಿಯೂ ಬೀಚ್‌ಗಳಿಗೆ ತೆರಳಲು ಮುಕ್ತ ಅವಕಾಶವಿರಬೇಕು. ಅಕ್ರಮ ಚಟುವಟಿಕೆ ತಡೆಯಲು, ಸಾರ್ವಜನಿಕರ ಸುರಕ್ಷತೆಗೆ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ಈ ಹಿಂದೆ ಬೀಚ್‌ ನಿರ್ವಾಹಕರಾಗಿದ್ದ ಯತೀಶ್‌ ಬೈಕಂಪಾಡಿ.

ವ್ಯಾಪಾರಕ್ಕೆ ಪೆಟ್ಟು :

Advertisement

ಕತ್ತಲಾಗುತ್ತಿದ್ದಂತೆ ಬೀಚ್‌ಗಳಿಗೆ ಪ್ರವೇಶ ನಿರ್ಬಂಧಿ ಸಿದರೆ ಬೀಚ್‌ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ. ಅಲ್ಲದೆ, ಇಲ್ಲಿ ಬದುಕು ಕಟ್ಟಿಕೊಂಡಿರುವ ವ್ಯಾಪಾರಿಗಳಿಗೂ ಸಂಕಷ್ಟ ಉಂಟಾಗಲಿದೆ. ಪೊಲೀಸರು ಅಥವಾ ಇಲಾಖಾ ಧಿಕಾರಿಗಳು ಕಾರ್ಯಾಚರಣೆ ನಡೆಸುವುದು ತಪ್ಪಲ್ಲ. ಆದರೆ, 6, 7 ಗಂಟೆಗೆ ಬೀಚ್‌ನಿಂದ ಹೊರಗೆ ಕಳುಹಿಸುವುದು ಸರಿಯಲ್ಲ. ಅಕ್ರಮ ಚಟುವಟಿಕೆಗಳು ನಡೆಯುವುದಾದರೆ ಪೊಲೀಸರು ಗಸ್ತು ನಡೆಸಿ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಬೀಚ್‌ ಸಮೀಪದ ವ್ಯಾಪಾರಸ್ಥರು.

ಕಾರ್ಯಾಚರಣೆ ವೇಳೆ :

ಬೀಚ್‌ನಲ್ಲಿ ರಾತ್ರಿ ಮದ್ಯಪಾನ ಮಾಡುತ್ತಿದ್ದ 6 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಗಾಂಜಾ ಮಾರಾಟ ಪತ್ತೆಯಾಗಿದ್ದು, ಮಾತ್ರೆಯ ರೂಪದಲ್ಲಿ ಹಾಗೂ ಚಾಕಲೇಟ್‌ನಲ್ಲಿ ಬೆರೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನಿಂದ ಗಾಂಜಾ ಹಾಗೂ ಚೂರಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಜ 17 ಬೈಕ್‌ ಮತ್ತು 7 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲವು ವಾಹನಗಳ ಮೇಲೆ ಈಗಾಗಲೇ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ.  ಕೆಲವು ಮಂದಿ ಯುವಕರು ತಮ್ಮ ಗೆಳತಿಯರ ಜತೆಗೆ ರಾತ್ರಿ ಬೀಚ್‌ನಲ್ಲಿರುವುದನ್ನು ಕೂಡ ಪೊಲೀಸರು ಗುರುತಿಸಿದ್ದಾರೆ.

ನಾಲ್ಕು ಪ್ರಮುಖ ಬೀಚ್‌ಗಳಲ್ಲಿ ರಾತ್ರಿ ವೇಳೆ ಗಾಂಜಾ, ಮದ್ಯ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಹಲವು ಅಪರಾಧ ಚಟು ವಟಿಕೆಗಳಿಗೆ ಕೂಡ ಇಂತಹ ಅಕ್ರಮ ಕೂಟಗಳು ಕಾರಣವಾಗುತ್ತವೆ. ಸಾರ್ವಜನಿಕರಿಗೆ ಸುರಕ್ಷತೆ ಒದಗಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬೀಚ್‌ನಲ್ಲಿ ರಾತ್ರಿ 8-9 ಗಂಟೆಯವರೆಗೂ ಉಳಿದುಕೊಳ್ಳು ವುದಕ್ಕೆ, ಅಕ್ರಮ ಚಟುವಟಿಕೆ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ಎನ್‌.ಶಶಿಕುಮಾರ್‌, ಪೊಲೀಸ್‌ ಆಯುಕ್ತರು, ಮಂಗಳೂರು

ಬೀಚ್‌ಗಳಿಗೆ ರಾತ್ರಿ ಹೊತ್ತು ಸಾರ್ವಜನಿಕರು ಪ್ರವೇಶಿಸುವುದಕ್ಕೆ ಅವಕಾಶವಿರುವುದಿಲ್ಲ. ಸಾರ್ವಜನಿಕರ ಸುರಕ್ಷತೆಯ ಉದ್ದೇಶದಿಂದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಮಾಣಿಕ್ಯ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ದ.

Advertisement

Udayavani is now on Telegram. Click here to join our channel and stay updated with the latest news.

Next