Advertisement

ಬಿಲ್ಗಾರ್ತಿಯ ತೋಳಿನೊಳಗೆ ಹೊಕ್ಕಿದ್ದ ಬಾಣವನ್ನು ಯಶಸ್ವಿಯಾಗಿ ಹೊರತೆಗೆದ ಏಮ್ಸ್ ವೈದ್ಯರು!

10:17 AM Jan 11, 2020 | Hari Prasad |

ನವದೆಹಲಿ: 12 ವರ್ಷ ಪ್ರಾಯದ ಯುವ ಬಿಲ್ಗಾರ್ತಿಯ ತೋಳಿನ ಭಾಗದೊಳಕ್ಕೆ ಹೊಕ್ಕಿದ್ದ ಬಾಣವನ್ನು ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ಹೊರತೆಗೆಯುವಲ್ಲಿ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

Advertisement

ಆಕೆಯ ತೊಳಿನ ಭಾಗಕ್ಕೆ ನಾಟಿಕೊಂಡಿದ್ದ ಬಾಣದ ಹೊರಭಾಗವನ್ನು ಮೊದಲಿಗೆ ಯಂತ್ರದ ಸಹಾಯದಿಂದ ಕತ್ತರಿಸಲಾಯಿತು, ಆ ಬಳಿಕ ವೈದ್ಯರು ಬಾಲಕಿಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತೋಳ್ಬಾಗದಲ್ಲಿ ಆರು ಇಂಚಿನಷ್ಟು ಒಳಗೆ ನಾಟಿಕೊಂಡಿದ್ದ ಬಾಣದ ತುಂಡನ್ನು ಹೊರ ತೆಗೆದಿದ್ದಾರೆ. ವೈದ್ಯರ ಸಕಾಲಿಕ ಮುತುವರ್ಜಿಯಿಂದಾಗಿ ಈ ಪ್ರತಿಭಾನ್ವಿತ ಕ್ರೀಡಾಪಟು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಘಟನೆಯ ವಿವರ:
ಅಸ್ಸಾಂನ ಧಿಭ್ರೂಗಢದ ಶಿಭಾಂಗಿ ಗೊಹೈನ್ ಎಂಬ 12 ವರ್ಷದ ಯುವ ಬಿಲ್ಗಾರ್ತಿ ಗುರುವಾರದಂದು ಇಲ್ಲಿ ನಡೆಯುತ್ತಿದ್ದ ‘ಖೇಲೋ ಇಂಡಿಯಾ’ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಈ ದುರ್ಘಟನೆಗೆ ಒಳಗಾಗಿದ್ದಳು.

ಬಿಲ್ಗಾರರು ಬಾಣ ಗುರಿಯಿಡುವ ಬೋರ್ಡ್ ಸಮೀಪ ಶಿಭಾಂಗಿ ನಿಂತಿದ್ದ ಸಂದರ್ಭದಲ್ಲಿ ಸಹ ಕ್ರೀಡಾಪಟು ಬಿಟ್ಟ ಬಾಣ ಗುರಿತಪ್ಪಿ ಈಕೆಯ ಬಲ ತೋಳಿನ ಮೇಲ್ಭಾಗಕ್ಕೆ ನಾಟಿಕೊಂಡಿತ್ತು. ತಕ್ಷಣವೇ ಆಕೆಯನ್ನು ದಿಭ್ರುಗಢದಲ್ಲಿರುವ ಬ್ರಹ್ಮಪುತ್ರ ಡಯಾಗ್ನಸಿಸ್ ಕೆಂದ್ರಕ್ಕೆ ಕರೆದೊಯ್ಯಲಾಯಿತು.

ಇಲ್ಲಿ ಶಿಭಾಂಗಿಯ ತೋಳಿನೊಳಗೆ ನಾಟಿದ್ದ ಬಾಣವನ್ನು ಹೊರತೆಗೆಯಲು ವೈದ್ಯರು ಪ್ರಯತ್ನಿಸಿದರು. ಆದರೆ ಒಳನಾಟಿದ್ದ ಬಾಣ ಬೆನ್ನುಹುರಿಗೆ ಘಾಸಿ ಮಾಡುವ ಸಾಧ್ಯತೆ ಇದ್ದ ಕಾರಣ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಬಯಸದ ಅಲ್ಲಿನ ವೈದ್ಯರು ಆಕೆಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದರು. ಬಳಿಕ ಶಿಭಾಂಗಿಯನ್ನು ಅಲ್ಲಿಂದ ನೇರವಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು.

Advertisement

ಇದೀಗ ಏಮ್ಸ್ ಆಸ್ಪತ್ರೆಯ ತಜ್ಞ ವೈದ್ಯರು ಶಿಭಾಂಗಿಯ ದೇಹದೊಳಗೆ ನಾಟಿದ್ದ ಬಾಣವನ್ನು ಯಶಸ್ವಿಯಾಗಿ ಹೊರತೆಗೆಯುವ ಮೂಲಕ ಎಳೆ ಕ್ರೀಡಾ ಪ್ರತಿಭೆಯ ಭವಿಷ್ಯ ಮಸುಕಾಗುವುದನ್ನು ತಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next