ಬೀದರ: ಪಿಒಪಿ ಗಣೇಶ ಮೂರ್ತಿ ಮಾರಾಟ ತಡೆದು ವಶ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ|ಎಚ್.ಆರ್. ಮಹಾದೇವ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿ ರವಿವಾರ ಪಿಒಪಿ ಗಣೇಶಮೂರ್ತಿಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿದ್ದು, ನಂತರ ಜನರ ಆಕ್ರೋಶ ಹೆಚ್ಚಾದ ಹಿನ್ನೆಲೆಯಲ್ಲಿ ಕೈ ಬಿಡಲಾಗಿದೆ.
ನಗರದ ಮುಖ್ಯ ರಸ್ತೆಬದಿಯಲ್ಲಿ ಪಿಒಪಿ ಗಣೇಶ ಮೂರ್ತಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರ ಮೂರ್ತಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆದರೆ ನಗರದ ಮೀನಾ ಮಾರ್ಕೇಟ್‌ನಲ್ಲಿ ಮಾರಾಟ ಮಾಡುತ್ತಿದ್ದ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅಧಿಕಾರಿಗಳನ್ನು ವ್ಯಾಪಾರಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ವ್ಯಾಪಾರಸ್ಥರು ಈ ಸಂದರ್ಭದಲ್ಲಿ ರಸ್ತೆಗಿಳಿದು ಪ್ರತಿಭಟನೆಗೂ ಮುಂದಾದರು. ಈ ಹಿನ್ನೆಲೆಯಲ್ಲಿ ನಗರ ಸಭೆ ಸಿಬ್ಬಂದಿ ಅಲ್ಲಿಂದ ಜಾಗ ಖಾಲಿ ಮಾಡಿದರು.
ಜನರ ಆಕ್ರೋಶ: ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವ ಮುನ್ನವೇ ಜಿಲ್ಲಾಡಳಿತ ನೋಟಿಸ್ ನೀಡಿ ತಯಾರಿಕೆಯನ್ನು ತಡೆಯಬೇಕಿತ್ತು. ಆದರೆ, ಇದೀಗ ಹಬ್ಬದ ದಿನದಂದು ಖರೀದಿಸಿದ ಮೂರ್ತಿಗಳನ್ನು ವಶಪಡಿಸಿಕೊಳ್ಳುವುದು ಎಷ್ಟು ಸರಿ ಎಂದು ವ್ಯಾಪರಸ್ಥರು ಪ್ರಶ್ನಿಸುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಮಣ್ಣಿನ ಗಣೇಶ ಮೂರ್ತಿಗಳ ಬೆಲೆ ಹೆಚ್ಚಿದ್ದು ಜನರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಡವರು ಬಂಡವಾಳ ಹಾಕಿ ಗಣೇಶ ಮೂರ್ತಿಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದು, ವ್ಯಾಪಾರಸ್ಥರಿಂದ ಮೂರ್ತಿ ವಶ ಪಡಿಸಿಕೊಂಡು ಬಡವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ ಎಂದು ಸಣ್ಣ ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರ್ಷ ಬಿಡುವು: ಈ ಕುರಿತು ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ಬಿ.ಬಸಪ್ಪ, ಗಣೇಶ ಮೂರ್ತಿ ವ್ಯಾಪಾರಸ್ಥರು ಈ ವರ್ಷ ಬಿಡುವು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ವಶ ಪಡಿಸಿಕೊಂಡ ಗಣೇಶ ಮೂರ್ತಿಗಳನ್ನು ವ್ಯಾಪಾರಸ್ಥರಿಗೆ ಮರಳಿ ನೀಡಲಾಗಿದೆ. ಮುಂದಿನ ವರ್ಷದಿಂದ ವ್ಯಾಪರಸ್ಥರು ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಜನ, ಜಾನುವಾರು ಹಾಗೂ ಜಲ ಮೂಲಗಳು ಹಾಳಾಗದಂತೆ ಹಬ್ಬ ಆಚರಣೆಗೆ ಮುಂದಾಗಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.