ಕನ್ನಡದಲ್ಲಿ ಜಾಝ್ ಶೈಲಿಯ ಗೀತೆಗಳು ತಂಬಾ ವಿರಳ. ಈ ಹಿಂದೆ “ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಅಂಥದ್ದೊಂದು ಪ್ರಯೋಗ ನಡೆದಿತ್ತು. ಈಗ ಹೊಸಬರೇ ಸೇರಿ ಮಾಡಿರುವ “ಆಪರೇಷನ್ ನಕ್ಷತ್ರ’ ಚಿತ್ರದಲ್ಲೂ ಜಾಜ್ ಶೈಲಿಯ ಹಾಡೊಂದು ಬಿಡುಗಡೆಯಾಗಿ ಯುಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದೆ. ಇತ್ತೀಚೆಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಲಿರಿಕಲ್ ವಿಡಿಯೋ ವೀಕ್ಷಿಸಿ, ಆ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.
ಸಂಗೀತ ನಿರ್ದೇಶಕ ವೀರ್ ಸಮರ್ಥ್ ಅವರು ಸಂಯೋಜಿಸಿರುವ ಜಾಝ್ ಶೈಲಿಯಲ್ಲಿ ಮೂಡಿಬಂದಿರುವ “ನಾ ಪರಿಚಯವಾಗದೆ ಈ ಒಲವಿಗೆ ಸಿಲುಕಿದೆ, ಹೇಗೆ ಹೇಳಲಿ ನನ್ನೀ ತಳಮಳ ಬಂಧಿಯಾಗಲೆ, ಆಸೆ ಮೂಡಿದೆ ಪ್ರೀತಿಯೊಂದಕೆ ಅತಿಥಿಯಾಗಲೇ…’ ಎಂಬ ಗೀತೆಯನ್ನು
ಮೆಚ್ಚಿಕೊಂಡ ರಕ್ಷಿತ್ ಶೆಟ್ಟಿ, “ಹೊಸಬರ ಹೊಸ ಪ್ರಯತ್ನಗಳು ನಿರಂತರವಾಗಿ ಗೆಲ್ಲಬೇಕು. ಕನ್ನಡಕ್ಕೆ ಜಾಝ್ ಶೈಲಿಯ ಹಾಡು ಹೊಸತು.
ಈ ರೀತಿಯ ಪ್ರಯೋಗ ಮಾಡಿರುವ ಸಂಗೀತ ನಿರ್ದೇಶಕರ ಕೆಲಸ ಇಷ್ಟವಾಯಿತು. ಸಾಹಿತ್ಯದ ಸಾಲುಗಳು ಚೆನ್ನಾಗಿವೆ. ಗಾಯಕ ಸಂಚಿತ್ ಹೆಗ್ಡೆ ಅವರು ಧ್ವನಿಯಲ್ಲೂ ಹೊಸತನವಿದೆ. ತಮ್ಮ ವಿಶೇಷ ಧ್ವನಿಯಲ್ಲಿ ಹಾಡಿರುವ ಈ ಹಾಡು ಎಲ್ಲರಿಗೂ ತಲುಪಲಿ. ಇನ್ನು, ಹೊಸಬರೆಲ್ಲ ಸೇರಿಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೆಣೆದು ಈ ಚಿತ್ರ ಮಾಡಿದ್ದಾರೆ. ಚಿತ್ರತಂಡಕ್ಕೆ ಗೆಲುವು ಸಿಗಲಿ. ಹೊಸಬರ ಪ್ರಯತ್ನಕ್ಕೆ ಶುಭವಾಗಲಿ’ ಎಂದು ಹಾರೈಸಿದ್ದಾರೆ.
ಫೈವ್ ಸ್ಟಾರ್ ಫಿಲಂಸ್ ಸಂಸ್ಥೆಯ ಬ್ಯಾನರ್‌ನಲ್ಲಿ ನಂದಕುಮಾರ್ ಎನ್., ಅರವಿಂದ್ ಮೂರ್ತಿ ಟಿ.ಎಸ್., ರಾಧಾಕೃಷ್ಣ ಹಾಗು ಕಿಶೋರ್ ಮೇಗಳಮನೆ ಚಿತ್ರವನ್ನು ನಿರ್ಮಿಸಿದ್ದಾರೆ. ಇದೀಗ ಚಿತ್ರದ ಚಿತ್ರಿಕರಣ ಪೂರ್ಣಗೊಂಡಿದ್ದು , ಈಗ ಬಿಡುಗಡೆ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಮಧುಸೂಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಶಿವಸೀನ
ಛಾಯಾಗ್ರಹಣ, ವೀರ್‌ಸಮರ್ಥ್ ಸಂಗೀತವಿದೆ. ಎರಡು ಗೀತೆಗಳಿಗೆ ವಿಜಯ್ ಅವರ ಸಾಹಿತ್ಯ, ಕಿಶೋರ್ ಮೇಗಳ ಮನೆ ಮಧುಸೂಧನ್ ಸಂಭಾಷಣೆ, ಅರ್ಜುನ್ ಕಿಟ್ಟು ಅವರ ಸಂಕಲನವಿದೆ. ಕಂಬಿ ರಾಜು ನೃತ್ಯ ನಿರ್ದೇಶನ ಮಾಡಿದರೆ, ಅಲ್ಟಿಮೇಟ್ ಶಿವು ಸಾಹಸವಿದೆ. ಶರಣ್ ಗೆಣಲ್ ಸಹ ನಿರ್ದೇಶನ ಮಾಡಿದ್ದಾರೆ.
ಚಿತ್ರದಲ್ಲಿ ನಿರಂಜನ್ ಒಡೆಯರ್, ಅದಿತಿ ಪ್ರಭುದೇವ್, ಯಜ್ಞಾಶೆಟ್ಟಿ, ಲಿಖಿತ್ ಸೂರ್ಯ ನಾಯಕ,
ನಾಯಕಿಯರಾದರೆ, ಉಳಿದಂತೆ ದೀಪಕ್‌ರಾಜ್ ಶೆಟ್ಟಿ, ಶ್ರೀನಿವಾಸ್ ಪ್ರಭು,ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಭರತ್ ಇತರರು ನಟಿಸಿದ್ದಾರೆ. ಚಿತ್ರಕ್ಕೀಗ ಹಿನ್ನೆಲೆ ಸಂಗೀತ ನಡೆಯುತ್ತಿದ್ದು, ಜೂನ್ ಅಂತ್ಯ ಅಥವಾ ಜುಲೈನಲ್ಲಿ
ಬಿಡುಗಡೆಯಾಗಲಿದೆ.