Advertisement

ಮಾಲಕನಿಂದಲೇ ಆಪರೇಷನ್‌ ಮೊಬೈಲ್‌

06:00 AM Apr 16, 2018 | Team Udayavani |

ಬೆಂಗಳೂರು: ಮೊಬೈಲ್‌ ಕಳೆದುಕೊಂಡ ವ್ಯಕ್ತಿಯೇ ಪೊಲೀಸರಿಗೆ ಕಳ್ಳರ ಸುಳಿವು ಕೊಟ್ಟು ಅವರನ್ನು ಜೈಲಿಗೆ ಹೋಗುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲ, ಮೊಬೈಲ್‌ ಮಾಲೀಕರ ಈ ಪ್ರಯತ್ನದಿಂದಾಗಿ 15ಕ್ಕೂ ಹೆಚ್ಚು ಮೊಬೈಲ್‌ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.

Advertisement

ಹೌದು, ತನ್ನ ಮೊಬೈಲ್‌ ಅಪಹರಿಸಿದ ಆರೋಪಿಗಳ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜೈಮಿನಿ ಎಂಬುವರು ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಜೈಮಿನಿ ಮೊಬೈಲ್‌ನ ಐಎಂಇಐ ನಂಬರ್‌ ಮೂಲಕ ಅವರನ್ನು  ಪತ್ತೆ ಹಚ್ಚಿ ಕಾನೂನು ಸಂಘರ್ಘ‌ಕ್ಕೊಳಗಾದ ಇಬ್ಬರು ಹಾಗೂ ಅಬೂಬಕರ್‌(19) ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಫೆ. 26ರಂದು ಕಾರ್ಮಿಕ ಭವನಕ್ಕೆ ಹೋಗಿದ್ದ ಜೈಮಿನಿ ಕೆಲಸ ಮುಗಿಸಿಕೊಂಡು ವಾಪಸಾಗಲು ಕೋರಮಂಗಲ ಸಮೀಪದ ಡೈರಿ ವೃತ್ತದಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದರು. ಇದೇ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ಏಕಾಏಕಿ ಮೊಬೈಲ್‌ ಕಳವು ಮಾಡಿ ಪರಾರಿಯಾದರು. ಈ ಸಂಬಂಧ ಜೈಮಿನಿ ನಗರ ಪೊಲೀಸರ ಇ-ಲಾಸ್ಟ್‌ ಆ್ಯಪ್‌ ಮೂಲಕ ದೂರು ಸಲ್ಲಿಸಿ, ಸ್ವೀಕೃತಿಯನ್ನು ಸಿದ್ದಾಪುರ ಠಾಣೆಗೆ ನೀಡಿದ್ದರು. ಅದರಂತೆ ಪೊಲೀಸರು ತನಿಖೆ ನಡೆಸಿದರಾದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಈ ಮಧ್ಯೆ ತನ್ನ ಸ್ನೇಹಿತರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡ ವೇಲೆ ಕಳವಾದ ತಮ್ಮ ಮೊಬೈಲ್‌ ಸಂಖ್ಯೆಗೆ ದೂರವಾಣಿ ಕರೆ ಮಾಡಿದ್ದರು. ಕರೆ ಸ್ವೀಕರಿಸಿದ್ದ ವ್ಯಕ್ತಿ, ಯಾರು ಮಾತನಾಡುತ್ತಿರುವುದು ಎಂದಷ್ಟೇ ಪ್ರಶ್ನಿಸಿ ಕರೆ ಸ್ಥಗಿತಗೊಳಿಸಿದ್ದರು. ನಂತರ ಜೈಮಿನಿ ತಮ್ಮ ಸ್ನೇಹಿತರ ಮೂಲಕ ಅದೇ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದ ವ್ಯಕ್ತಿ,  ನನ್ನ ಹೆಸರು ಅಸ್ಲಾಂ. ಹೊಸದಾಗಿ ಸಿಮ್‌ ಖರೀದಿಸಿದ್ದೇನೆ. ಆಗಾಗೆ ಕರೆ ಮಾಡಿ ತೊಂದರೆ ಕೊಡಬೇಡಿ ಎಂದಿದ್ದ. ಅಲ್ಲದೆ, ಹೆಚ್ಚು ಕರೆಗಳನ್ನು ಬರುತ್ತಿದ್ದುದರಿಂದ ಕೆಲವೊಮ್ಮೆ ಮೊಬೈಲ್‌ ಸ್ವಿಚ್‌ ಆಫ್ ಮಾಡುತ್ತಿದ್ದ.

ಇದರಿಂದ ಅನುಮಾನಗೊಂಡ ಜೈಮಿನ ತಮ್ಮ ನಂಬರ್‌ನ ಸಿಡಿಆರ್‌ ಪಡೆಯಲು ಮುಂದಾದರು. ಕೂಡಲೇ ಮೈ-ಜಿಯೋ ಆ್ಯಪ್‌ ಮೂಲಕ ನೊಂದಣಿಯಾಗಿ ತಮ್ಮ ನಂಬರ್‌ ಕರೆಗಳ ವಿವರವನ್ನು ಈ-ಮೇಲ್‌ ಮೂಲಕ ಪಡೆದುಕೊಂಡಾಗ ಮೊಬೈಲ್‌ ಕಳವಾದ ಬಳಿಕವೂ ಹೊರ ಮತ್ತು ಒಳ ಹೋಗುವ ಕರೆಗಳ ಮಾಹಿತಿ ಲಭಿಸಿತ್ತು. ಹೊರಹೋದ ಕರೆಗಳ ಸಂಖ್ಯೆಗಳನ್ನು ಟ್ರೂ ಕಾಲರ್‌ ಮೂಲಕ ಪರಿಶೀಲಿಸಿದಾಗ ಒಂದಷ್ಟು ಮಂದಿಯ ಮಾಹಿತಿ ಸಿಕ್ಕಿತ್ತು. ಕೂಡಲೇ ಅವರು ಪೊಲೀಸರಿಗೆ ಈ ಎಲ್ಲಾ ಮಾಹಿತಿಗಳನ್ನು ನೀಡಿದ್ದರು. ಅದರಂತೆ ತಾಂತ್ರಿಕ ತನಿಖೆ ನಡೆಸಿದ ಪೊಲೀಸರು ಅನುಮಾನದ ಮೇರೆಗೆ ಕೆಲ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ.

Advertisement

ಓಎಲ್‌ಎಕ್ಸ್‌ನಲ್ಲಿ ಮಾರಾಟ
ಅಷ್ಟರಲ್ಲಿ ಆರೋಪಿಗಳು ತಾವು ಕಳವು ಮಾಡುತ್ತಿದ್ದ ಮೊಬೈಲ್‌ಗ‌ಳನ್ನು ಖರೀದಿಸುತ್ತಿದ್ದ ವ್ಯಕ್ತಿಗೆ ಜೈಮಿನಿಯಿಂದ ಕದ್ದಿದ್ದ ಮೊಬೈಲನ್ನು ಮೂರು ಸಾವಿರಕ್ಕೆ ಮಾರಾಟ ಮಾಡಿದ್ದರು. ಆತ ಮೊಬೈಲ್‌  ಫ್ಲ್ಯಾಷ್‌ ಮಾಡಿ ಅದರ ಎಲ್ಲಾ ದಾಖಲೆಗಳನ್ನು ಅಳಿಸಿ, ನಕಲಿ ಬಿಲ್‌ ಸೃಷ್ಠಿಸಿ ಬಳಿಕ ಜೈಮಿನಿ ಮೊಬೈಲ್‌ ನಂಬರ್‌ ಮೂಲಕವೇ ಓಎಲ್‌ಎಕ್ಸ್‌ನಲ್ಲಿ ನೊಂದಣಿಯಾಗಿ ಮಾರಾಟ ಮಾಡಿದ್ದಾನೆ. ಇದನ್ನು ಕೇಂದ್ರ ಸರ್ಕಾರದ ಒಬ್ಬ ಉದ್ಯೋಗಿಯೊಬ್ಬರು 13 ಸಾವಿರ ರೂ.ಗೆ ಖರೀದಿಸಿ ತಮಿಳುನಾಡಿನಲ್ಲಿರುವ ಪತ್ನಿಗೆ ನೀಡಿದ್ದರು.

ನಂಬರ್‌ ಪ್ಲೇಟ್‌ ಇಲ್ಲ, ಹೆಲ್ಮೆಟ್‌ ಹಾಕಿಲ್ಲ
ಮೊಬೈಲ್‌ ಕಳವು ಮಡಿದ ಕಳ್ಳರು ಬಳಸಿದ್ದ ಬೈಕ್‌ಗೆ ಯಾವುದೇ ನೊಂದಣಿ ಸಂಖ್ಯೆ ಇರಲಿಲ್ಲ. ಜೈಮಿನಿ ಆರೋಪಿಗಳನ್ನು ಹಿಂಬಾಸಿದ್ದರಾದರೂ ಅವರನ್ನು ಹಿಡಿಯಲು ಸಾಧ್ಯವಾಗಲಿಲ್ಲ. ತನ್ನನ್ನು ಹಿಂಬಾಲಿಸಿದ ಜೈಮಿನಯತ್ತ ತಿರುಗಿ ನಗುತ್ತಾ ಸೋಲಿನ ಕೈಸನ್ನೆ ತೋರಿಸಿ ಪರಾರಿಯಾಗಿದ್ದರು. ಆರೋಪಿಗಳು ಹೆಲ್ಮೆಟ್‌ ಧರಿಸಿಲ್ಲವಾದರೂ ಘಟನಾ ಸ್ಥಳ ಅಥವಾ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾ ಇಲ್ಲದ ಕಾರಣ ಆರಂಭದಲ್ಲಿ ಆರೋಪಿಗಳ ಸುಳಿವು ಪತ್ತೆಯಾಗಲಿಲ್ಲ. ಆದರೆ, ಜೈಮಿನಿ ನಾಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳು ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

ಡೈರಿ ಸರ್ಕಲ್‌ ಕರೆ
ಜೈಮಿನಿಯಿಂದ ಕಳವು ಮಾಡಿದ ಮೊಬೈಲ್‌ ಬಳಸುತ್ತಿದ್ದ ಆರೋಪಿಗಳು ತಮ್ಮ ಸ್ನೇಹತರಿಗೆ ಆಗಾಗೆÂ ಕರೆ ಮಾಡುತ್ತಿದ್ದರು. ಇದರ ಸಿಡಿಆರ್‌ ಪಡೆದ ಜೈಮಿನಿ ಅದನ್ನು ಟ್ರೂಕಾಲರ್‌ನಲ್ಲಿ ಪರಿಶೀಲಿಸಿದಾಗ “ಡೈರಿ ಸರ್ಕಲ್‌’ ಎಂದು 3-4 ನಂಬರ್‌ಗಳು ಪತ್ತೆಯಾದವು. ಅದನ್ನು ಆಧರಿಸಿ ಪೊಲೀಸರು “ಡೈರಿ ಸರ್ಕಲ್‌’ ಹೆಸರಿನ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅಬೂಬಕರ್‌ ಬಗ್ಗೆ ಮಾಹಿತಿ ಲಭಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next