Advertisement

ಮೂತ್ರ ವಿಸರ್ಜನೆ ತಡೆಗೆ ಆಪರೇಷನ್‌ ಮಿರರ್‌!

12:32 AM Jan 14, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿ “ಕನ್ನಡಿ’ ಪ್ರಯೋಗಕ್ಕೆ ಮುಂದಾಗಿದೆ. ನಗರದ ಕೃಷ್ಣರಾಜೇಂದ್ರ ಮಾರುಕಟ್ಟೆ, ಚರ್ಚ್‌ಸ್ಟ್ರೀಟ್‌, ಇಂದಿರಾನಗರದ ಇಎಸ್‌ಐ ಆಸ್ಪತ್ರೆ, ಶಿವಾಜಿನಗರದ ಕ್ವೀನ್ಸ್‌ ರಸ್ತೆ ಹಾಗೂ ಜ್ಯೋತಿನಿವಾಸ್‌ ಕಾಲೇಜು ಪ್ರದೇಶದಲ್ಲಿ ಪ್ರಾಯೋಗಿಕವಾಗಿ 8×4 ಮೀಟರ್‌ ಸುತ್ತಳತೆಯ ಒಟ್ಟು ಐದು ಕನ್ನಡಿಗಳನ್ನು ಅಳವಡಿಸಲಾಗಿದ್ದು,

Advertisement

ಸಾರ್ವಜನಿಕರು ಕನ್ನಡಿ ಇರುವ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಲು ಮುಂದಾದರೆ, ಸಾರ್ವಜನಿಕರ ಪ್ರತಿಬಿಂಬ ಕನ್ನಡಿಯ ಮೂಲಕ ಎಲ್ಲರಿಗೂ ಕಾಣಿಸಲಿದೆ! ನಗರದಲ್ಲಿ ಸ್ವಚ್ಛ ಸರ್ವೇಕ್ಷಣ್‌ ಸರ್ವೇ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ್‍ಯಾಂಕ್‌ ಗಳಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನ ಮಾಡಲಾಗಿದೆ.

ಕನ್ನಡಿಯಲ್ಲಿ ಕ್ಯೂಆರ್‌ ಕೋಡ್‌ ಸೌಲಭ್ಯವನ್ನು ಅಳವಡಿಸಲಾಗಿದ್ದು, ಈ ಕೋಡ್‌ ಸ್ಕ್ಯಾನ್‌ ಮಾಡಿದರೆ ಹತ್ತಿರದಲ್ಲಿರುವ ಶೌಚಾಲಯದ ಮಾಹಿತಿ ಸಿಗಲಿದೆ. ಅಲ್ಲದೆ, ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಭಾಗವಹಿಸುವ ಬಗ್ಗೆಯೂ ಜಾಗೃತಿ ಮೂಡಿಸಲಾಗುತ್ತಿದೆ. ಒಂದು ಕನ್ನಡಿಗೆ ಅಂದಾಜು 70ರಿಂದ 80 ಸಾವಿರ ರೂ. ವೆಚ್ಚ ಮಾಡಲಾಗಿದ್ದು, ಸಾರ್ವಜನಿಕರ ಪ್ರತಿಕ್ರಿಯೆ ನೋಡಿಕೊಂಡು ಯೋಜನೆ ಮುಂದುವರಿಸಲಾಗುವುದು ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಪ್ರಯೋಗಕ್ಕೆ ಸಜ್ಜಾದ ಪಾಲಿಕೆ: ಸಾರ್ವಜನಿಕ ಸ್ಥಳಗಳಲ್ಲಿ ಜನ ತ್ಯಾಜ್ಯ ಎಸೆದು ಬ್ಲಾಕ್‌ಸ್ಪಾಟ್‌ ನಿರ್ಮಾಣ ಮಾಡು ವುದು ತಪ್ಪಿಸಲು ರಂಗೋಲಿ ಬಿಡಿಸಿ, ದೇವರ ಪೋಟೋ ಇಟ್ಟು ಪ್ರಯೋಗ ಮಾಡಿ ಸೋತಿದ್ದ ಪಾಲಿಕೆ ಈಗ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ತಡೆಯಲು ಕನ್ನಡಿ ಪ್ರಯೋಗಕ್ಕೆ ಮುಂದಾಗಿದೆ. ಉಳಿದ ಪ್ರಯೋಗಗಳಿಗೆ ಹೋಲಿಸಿದರೆ ಕನ್ನಡಿ ಅಸ್ತ್ರ ಯಶಸ್ವಿಯಾಗುವ ಸಾಧ್ಯತೆಯೂ ಇದೆ.

ಸಾರ್ವಜನಿಕ ಪ್ರದೇಶಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದಕ್ಕೆ ಹಿಂದೇಟು ಹಾಕುವಂತೆ ಮಾಡುವ ಪ್ರಯೋಗ ಇದಾಗಿದೆ. ಈ ಮಧ್ಯೆ ದಂಡದ ಅಸ್ತ್ರವನ್ನೂ ಪಾಲಿಕೆ ಮುಂದುವರಿಸಿದೆ. ಮಾರ್ಷಲ್‌ಗ‌ಳು ಕಳೆದ ಸೆಪ್ಟಂಬರ್‌ನಿಂದ ಡಿಸೆಂಬರ್‌ ಅಂತ್ಯದ ವರೆಗೆ ರಸ್ತೆಬದಿ, ಮೈದಾನ, ಉದ್ಯಾನವನ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ 635 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, 2,62 ಲಕ್ಷ ರೂ. ಮೊತ್ತದ ದಂಡ ವಸೂಲಿ ಮಾಡಿದೆ.

Advertisement

ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಡಿಯುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ. ಕನ್ನಡಿಯಲ್ಲಿ ಪ್ರತಿಬಿಂಬ ನೋಡಿದ ಮೇಲೆ ನಾಚಿಕೆಯಾಗಿಯಾದರೂ ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ನಿಲ್ಲಬಹುದು ಎಂದು ನಿರೀಕ್ಷಿಸಲಾಗಿದೆ.
-ಸರ್ಫರಾಜ್‌ ಖಾನ್‌, ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

Advertisement

Udayavani is now on Telegram. Click here to join our channel and stay updated with the latest news.

Next