ಹೊಸದಿಲ್ಲಿ: ಮಕ್ಕಳ ಅಶ್ಲೀಲ ವಿಡಿಯೋ ಹಂಚಿಕೆ ಜಾಲಕ್ಕೆ ಸಂಬಂಧ ಪಟ್ಟಂತೆ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 56 ಸ್ಥಳಗಳಲ್ಲಿ ಇಂದು ಏಕಕಾಲದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ದಾಳಿಗೆ ಆಪರೇಷನ್ ಮೇಘಚಕ್ರ ಎಂದು ಹೆಸರಿಡಲಾಗಿದೆ. ಇದು ದೇಶದಲ್ಲಿ ಮಕ್ಕಳ ಪೋರ್ನೋಗ್ರಫಿ ಜಾಲದ ವಿರುದ್ಧ ಸಿಬಿಐ ನಡೆಸಿದ ಅತೀ ದೊಡ್ಡ ಕಾರ್ಯಾಚರಣೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಅಂತಹ ವಿಡಿಯೋಗಳನ್ನು ವಿತರಿಸಲು ಮತ್ತು ಅಪ್ರಾಪ್ತರನ್ನು ಬ್ಲ್ಯಾಕ್‌ಮೇಲ್ ಮಾಡಲು ತೊಡಗಿರುವ ವ್ಯಕ್ತಿಗಳು ಮತ್ತು ಗ್ಯಾಂಗ್ ಗಳನ್ನು ಪತ್ತೆ ಮಾಡಲು ಸಿಬಿಐ ಆಪರೇಷನ್ ಮೇಘಚಕ್ರ ದ ಮೂಲಕ ಮುಂದಾಗಿದೆ.
ಸಿಂಗಾಪುರ ಇಂಟರ್ ಪೋಲ್ ಅಧಿಕಾರಿಗಳ ಮಾಹಿತಿಯನ್ನು ಆಧರಿಸಿ ಈ ದಾಳಿಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:24ಗಂಟೆಯಲ್ಲಿ 3 ಪ್ರಕರಣ; ಚೆನ್ನೈನಲ್ಲಿ ಆರ್ ಎಸ್ ಎಸ್ ಮುಖಂಡನ ಮನೆ ಮೇಲೆ ಪೆಟ್ರೋಲ್ ಬಾಂಬ್
ಕಳೆದ ವರ್ಷವು ಸಿಬಿಐ ಅಧಿಕಾರಿಗಳು ಮಕ್ಕಳ ಅಶ್ಲೀಲ ವಸ್ತುಗಳನ್ನು ಪ್ರಸಾರ ಮಾಡಲು ಪೆಡ್ಲರ್‌ಗಳು ಬಳಸುವ ಕ್ಲೌಡ್ ಶೇಖರಣಾ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಅದನ್ನು ಆಪರೇಷನ್ ಕಾರ್ಬನ್ ಎಂದು ಕರೆಯಲಾಗಿತ್ತು. ಆಪರೇಷನ್ ಮೇಘಚಕ್ರವು ಅದರ ಮುಂದುವರಿದ ಕಾರ್ಯಾಚರಣೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವ್ಯಾಪಕವಾದ ತಾಂತ್ರಿಕ ಕಣ್ಗಾವಲು ಮೂಲಕ ಕಳೆದ ವರ್ಷದ ದಾಳಿಯಲ್ಲಿ ಸಂಗ್ರಹಿಸಲಾದ ಮಾಹಿತಿಯ ಆಧಾರದ ಮೇಲೆ ಆರೋಪಿಗಳ ಸ್ಥಳವನ್ನು ಪತ್ತೆ ಮಾಡಿ ಇಂದು ದಾಳಿ ನಡೆಸಲಾಗಿದೆ.