Advertisement

ಬಿಜೆಪಿ ಕೈ ಮೇಲಾದರೆ ಆಪರೇಷನ್‌ ಕಮಲ ನಿಶ್ಚಿತ

11:20 PM May 04, 2019 | Team Udayavani |

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದರೆ ಮೈತ್ರಿ ಸರಕಾರ ಅಸ್ಥಿರಗೊಳಿಸಲು ಮತ್ತೆ ಬಿಜೆಪಿ ನಾಯಕರು ಪ್ರಯತ್ನ ಮಾಡುವುದು ನಿಶ್ಚಿತ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ “ಆಪರೇಷನ್‌ ಕಮಲ’ ಆರಂಭವಾಗಲಿದೆ. ಒಂದು ವೇಳೆ ಕಡಿಮೆ ಸ್ಥಾನ ಬಂದರೆ ಆಪರೇಷನ್‌ ಕಮಲದ ಆಟ ನಡೆಯುವ ಸಾಧ್ಯತೆ ಇಲ್ಲ.

ಆದರೆ, ಮೋದಿ ಸರಕಾರದ ಅವಧಿಯಲ್ಲಿ ಸರಕಾರ ಅಸ್ಥಿರಗೊಳಿಸುವ ಹುನ್ನಾರ ಸಾಮಾನ್ಯವಾಗಿದೆ. ಇಂತಹ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.

ಅಧಿಕಾರ ಹೋದ ಮೇಲೆ ಎಲ್ಲರೂ ಮಾಜಿಗಳೇ: ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಕೆಂಪು ಗೂಟದ ಕಾರಿನಲ್ಲಿ ಓಡಾಡುವ ರಾಜ್ಯದ ಸಚಿವರು ಮಾಜಿಗಳಾಗಲಿದ್ದಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಮೇಶಗೆ ಕೆಂಪು ದೀಪದ ಕಾರಿನ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎನಿಸುತ್ತದೆ.

ಕೆಂಪು ದೀಪದ ಕಾರನ್ನು ಬಳಸದಂತೆ ನ್ಯಾಯಾಲಯ ನಿಷೇಧ ವಿಧಿಸಿ ಎಷ್ಟೋ ದಿನಗಳಾದವು. ರಮೇಶ ಜಾರಕಿಹೊಳಿ ಏನೂ ಗೊತ್ತಿಲ್ಲದೆ ಏನೇನೊ ಮಾತನಾಡುತ್ತಾರೆ. ಅಧಿಕಾರ ಹೋದ ಮೇಲೆ ಎಲ್ಲರೂ ಮಾಜಿಗಳಾಗಲೇಬೇಕು.

Advertisement

ರಮೇಶ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆಗೆ ಬಂದರೆ ನಾವೂ ಅವರನ್ನು ಎದುರಿಸಲು ಸನ್ನದ್ಧರಾಗಿದ್ದೇವೆ. ಅದಕ್ಕಾಗಿ ಈಗಾಗಲೇ ಸಿದ್ಧತೆಗಳನ್ನು ಸಹ ಮಾಡಿಕೊಂಡಿದ್ದೇವೆ ಎಂದು ತಿರುಗೇಟು ನೀಡಿದರು.

ಮೈತ್ರಿಧರ್ಮ ಪಾಲನೆಯಾಗಿಲ್ಲ: “ಲೋಕಸಭೆ ಚುನಾವಣೆ ವೇಳೆ ರಾಜ್ಯದ ಹಲವು ಕಡೆಗಳಲ್ಲಿ ಮೈತ್ರಿ ಧರ್ಮ ಸರಿಯಾಗಿ ಪಾಲನೆ ಆಗಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿ ಮಾಡುವ ಪ್ರಯತ್ನ ಮಾಡಬೇಕು.

ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆಗಳಲ್ಲಿ ಗೆಲ್ಲಲು ಎಲ್ಲ ರೀತಿಯ ಯೋಜನೆ ರೂಪಿಸಲಾಗಿದೆ. ಜನರ ಒಲವು ಸಹ ಕಾಂಗ್ರೆಸ್‌ ಪರವಾಗಿದೆ. ಕುಂದಗೋಳ ಚುನಾವಣೆಯ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರಗೆ ಕೊಡಬೇಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ.

ಶಿವಕುಮಾರ ವಿರುದ್ಧ ನಾನು ಎಲ್ಲಿಯೂ ಅಸಮಾಧಾನ ಹೊರ ಹಾಕಿಲ್ಲ. ಯಾರೇ ಉಸ್ತುವಾರಿ ಮಾಡಿದರೂ ಪಕ್ಷದ ಗೆಲುವು ಮುಖ್ಯ. ಎರಡೂ ಕ್ಷೇತ್ರದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next