ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಕುಸಿತಕ್ಕೆ ತಿಂಗಳಿನಿಂದ ತೀವ್ರ ಕಸರತ್ತು ನಡೆಸಿರುವ ಬಿಜೆಪಿಯು ಇದೀಗ ಕಾಂಗ್ರೆಸ್‌ನ ಅತೃಪ್ತ ನಾಲ್ಕು ಮಂದಿ ಶಾಸಕರ ಮುಂದಿಟ್ಟುಕೊಂಡು, ತನ್ನ ‘ಕೊನೇ ಆಟ’ ಆಡಲು ಮುಂದಾಗಿದೆ.
ವಿಧಾನಮಂಡಲ ಜಂಟಿ ಅಧಿವೇಶನ ಸಮೀಪಿಸುತ್ತಿದ್ದು, ಎರಡು ದಿನದಲ್ಲಿ ಕಾಂಗ್ರೆಸ್‌ನ ಕೆಲ ಶಾಸಕರು ರಾಜೀನಾಮೆ ನೀಡಿದರೆ ಅದರ ಆಧಾರದ ಮೇಲೆ ಇನ್ನಷ್ಟು ಶಾಸಕರನ್ನು ಸೆಳೆದು ಮೈತ್ರಿ ಸರ್ಕಾರದ ಸಂಖ್ಯಾಬಲಕ್ಕೆ ಸಂಚಕಾರ ತರಲು ಬಿಜೆಪಿ ಚಿಂತಿಸಿದೆ. ಈ ನಡುವೆ ಲೋಕಸಭಾ ಚುನಾವಣೆ ಪ್ರಚಾರ ಹಾಗೂ ಪಕ್ಷ ಸಂಘಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸದ್ಯದಲ್ಲೇ ರಾಜ್ಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದಾರೆ. ಪಕ್ಷ ಹಾಗೂ ರಾಷ್ಟ್ರೀಯ ನಾಯಕರ ವರ್ಚಸ್ಸಿಗೆ ಯಾವುದೇ ರೀತಿಯಲ್ಲಿ ಚ್ಯುತಿಯುಂಟಾಗದಂತೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅವಿಶ್ವಾಸ ನಿರ್ಣಯ ಮಂಡನೆಯನ್ನು ಪೂರಕ ವಾತಾವರಣ ಸೃಷ್ಟಿಯಾದರಷ್ಟೇ ಕೊನೆಯ ‘ಅಸ್ತ್ರ’ವಾಗಿ ಬಳಸಲು ಯೋಚಿಸಿದ್ದು, ಅದು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯ ಕೊನೆಯ ಪ್ರಯತ್ನವಾಗಲಿದೆ.
ಬುಧವಾರ ರಾಜೀನಾಮೆ?: ಜಂಟಿ ಅಧಿವೇಶನ, ಬಜೆಟ್ ಅಧಿವೇಶನ ಎದುರಾಗುತ್ತಿದೆ. ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ಅತೃಪ್ತ ಶಾಸಕರ ನಡೆ ಇನ್ನೂ ನಿಗೂಢವಾಗಿದೆ. ಒಂದೊಮ್ಮೆ ಯಾವುದೇ ಅತೃಪ್ತ ಶಾಸಕ ರಾಜೀನಾಮೆ ನೀಡಿದರೆ ಬಿಜೆಪಿ ಸರ್ಕಾರ ರಚಿಸಲು ಕೊನೆಯ ಪ್ರಯತ್ನ ನಡೆಸಲಿದೆ. ಶಾಸಕರಾದ ರಮೇಶ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಗೇಂದ್ರ, ಉಮೇಶ್ ಜಾಧವ್ ಅವರು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದು, ಬಹುತೇಕರು ಅಜ್ಞಾತವಾಗಿ ಉಳಿದಿದ್ದಾರೆ. ಕಾಂಗ್ರೆಸ್‌ನ ಕೆಲ ಅತೃಪ್ತ ಶಾಸಕರು ಬುಧವಾರದೊಳಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳಿವೆ. ಕೆಲವರು ರಾಜೀನಾಮೆ ನೀಡಿದರೂ ಅತೃಪ್ತ ಇನ್ನಷ್ಟು ಶಾಸಕರು ಹಂತ ಹಂತವಾಗಿ ರಾಜೀನಾಮೆ ನೀಡಲಿದ್ದು, ಸಮ್ಮಿಶ್ರ ಸರ್ಕಾರ ಸಂಖ್ಯಾಬಲ ಸಹಜವಾಗಿಯೇ ಕುಸಿಯಲಿದೆ. ಇದು ನಿರೀಕ್ಷೆಯಂತೆ ನಡೆದರೆ ನಮ್ಮ ಕಾರ್ಯಸೂಚಿಯಂತೆ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು.
ಒಂದೊಮ್ಮೆ ರಾಜೀನಾಮೆ ಪ್ರಕ್ರಿಯೆ ಇಲ್ಲವೇ ನಿರೀಕ್ಷಿತ ಸಂಖ್ಯೆಯ ಶಾಸಕರು ರಾಜೀನಾಮೆ ನೀಡದಿದ್ದರೆ ಸಂದರ್ಭ ನೋಡಿಕೊಂಡು ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಚಿಂತನೆ ಇದೆ. ಆದರೆ ಇದು ಕೊನೆಯ ಆಯ್ಕೆಯಾಗಲಿದ್ದು, ಪೂರಕ ವಾತಾವರಣ ಸೃಷ್ಟಿಯಾದರಷ್ಟೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ ಇಳಿಕೆ ಮಾಡುವ ಪ್ರಯತ್ನದಲ್ಲೇ ರಾಜ್ಯ ಬಿಜೆಪಿಯ ಬಹುಪಾಲು ನಾಯಕರು ಸಕ್ರಿಯರಾಗಿರುವುದರಿಂದ ಲೋಕಸಭಾ ಚುನಾವಣೆ ಸಿದ್ಧತೆ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂಬ ಮಾತು ಪಕ್ಷದ ವಲಯದಲ್ಲೇ ಕೇಳಿಬಂದಿದೆ. ಬಹಳಷ್ಟು ನಾಯಕರು ಅನ್ಯ ಪಕ್ಷದ ಶಾಸಕರನ್ನು ಸೆಳೆಯುವ, ವಿಶ್ವಾಸದಲ್ಲಿರಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಪಕ್ಷ ಸಂಘಟನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹಾಗಾಗಿ ಕೊನೆಯ ಬಾರಿ ಎಂಬಂತೆ ಪ್ರಯತ್ನ ನಡೆಸಿ ಆನಂತರ ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಎಂ. ಕೀರ್ತಿಪ್ರಸಾದ್