ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಪರಮೇಶ್ವರ್ ಜೊತೆ ಶುಕ್ರವಾರ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಆಪರೇಷನ್ ಡೀಲ್ ಕುರಿತ 40 ನಿಮಿಷದ ಆಡಿಯೋ ಬಾಂಬ್ ಸಿಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ 40 ನಿಮಿಷದ ಆಡಿಯೋ ಬಾಂಬ್ ರಿಲೀಸ್!
ಪತ್ರಿಕಾಗೋಷ್ಠಿಯಲ್ಲಿ ಗುರುಮಿಠ್ಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಅವರ ಪುತ್ರ ಶರಣಗೌಡರಿಂದ ಆಡಿಯೋ ಬಾಂಬ್ ಅನ್ನು ಬಿಡುಗಡೆ ಮಾಡುವ ಮೂಲಕ ಬಿಎಸ್ ಯಡಿಯೂರಪ್ಪಗೆ ತಿರುಗೇಟು ನೀಡಿದ್ದಾರೆ.
ಎಚ್ ಡಿಕೆ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಹಲವು ಸಂಗತಿಗಳು ಬಯಲಾಗಿವೆ. ದೇವದುರ್ಗದ ಐಬಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಶಾಸಕರ ಪುತ್ರನಿಗೆ ಆಮಿಷವೊಡ್ಡಿರುವುದು ಜಗಜ್ಜಾಹೀರಾಗಿದೆ. ಯಡಿಯೂರಪ್ಪ ನನಗೆ ಸ್ವತಃ ಕಾಲ್ ಮಾಡಿ 25 ಕೋಟಿ ರೂಪಾಯಿ ಆಫರ್ ಕೊಟ್ಟಿದ್ದರು. ನಿನ್ನ ತಂದೆಯನ್ನು ಬಿಜೆಪಿಗೆ ಬರುವಂತೆ ಮನವೊಲಿಸಬೇಕು. ಖಾತೆ ಕೊಡ್ತೀವಿ. ಎಷ್ಟು ಬೇಕಾದರೂ ಹಣ ಮಾಡಬಹುದು ಎಂದು ಆಫರ್ ಕೊಟ್ಟಿದ್ದರು. ಸ್ಪೀಕರ್ ಹಾಗೂ ಜಡ್ಜ್ ಗಳನ್ನು ಕೂಡಾ ಬುಕ್ ಮಾಡಿ ಆಗಿದೆ ಎಂದು ಆಮಿಷವೊಡ್ಡಿರುವುದು ಆಡಿಯೋದಲ್ಲಿದೆ.
ಮೊದಲು ಶಾಸಕರು ಮಾತನಾಡಿದ್ದರು. ನಂತರ ಬಿಎಸ್ ವೈ ಡೀಲ್ ಕುದುರಿಸುವ ಬಗ್ಗೆ ಚರ್ಚಿಸಿದ್ದರು. ನಿಮಗೆ ಪೇಮೆಂಟ್ ಪಕ್ಕಾ. ತಂದೆಯನ್ನು ರಾಯಚೂರು ಜಿಲ್ಲಾ ಉಸ್ತುವಾರಿ ಮಂತ್ರಿಯನ್ನಾಗಿ ಮಾಡುತ್ತೇವೆ. ಮೋದಿ, ಶಾಗೆ ಹೇಳಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ದೇವದುರ್ಗದಲ್ಲಿ ಆಪರೇಷನ್ ಕಮಲ ಡೀಲ್ ನಡೆಯುವಾಗ ಹಾಸನ ಶಾಸಕ ಪ್ರೀತಂ ಗೌಡ ಸಹ ಇದ್ದಿದ್ದರು ಎಂದು ತಿಳಿಸಿದ್ದಾರೆ.