Advertisement

ಆಪರೇಷನ್‌ ಕರಕಮಲ? :ಅತಂತ್ರ ಫ‌ಲಿತಾಂಶ ಎಂಬ ಸಮೀಕ್ಷೆ ವರದಿಯಿಂದ ಆತಂಕ

12:21 AM May 12, 2023 | Team Udayavani |

ಬೆಂಗಳೂರು: ಮತದಾನೋತ್ತರ ಸಮೀಕ್ಷೆಗಳಲ್ಲಿ ಅತಂತ್ರ ಫ‌ಲಿತಾಂಶದ ಸೂಚನೆ ಸಿಕ್ಕ ಹಿನ್ನೆಲೆ ಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಾಯಕರು ತುದಿಗಾಲಲ್ಲಿ ನಿಲ್ಲುವಂತಾಗಿದೆ. ಫ‌ಲಿತಾಂಶದ ಬಳಿಕ ತಮ್ಮ ಶಾಸಕರನ್ನು ಹಿಡಿದಿಟ್ಟು ಕೊಳ್ಳುವ ಜತೆಗೆ ಪಕ್ಷೇತರರನ್ನು ಸೆಳೆಯುವ ನಿಟ್ಟಿನಲ್ಲಿ ಈಗಾಗಲೇ “ಆಪರೇಷನ್‌” ಪ್ರಾರಂಭವಾಗಿದೆ.
ಸ್ವಂತ ಬಲದಲ್ಲೇ ಸರಕಾರ ರಚಿಸುತ್ತೇವೆ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಹೇಳಿ  ಕೊಳ್ಳುತ್ತಿದ್ದರೂ, ಅತಂತ್ರ ಸ್ಥಿತಿ ನಿರ್ಮಾಣ ವಾದರೆ ಎಂದು “ಪ್ಲಾನ್‌ ಬಿ” ಸಿದ್ಧಪಡಿಸಿ ಕೊಂಡಿದ್ದಾರೆ.

Advertisement

ಬೂತ್‌ವಾರು ಮತದಾನದ ವಿವರದಲ್ಲಿ ಗೆಲ್ಲುವ ಕ್ಷೇತ್ರಗಳ ಅಂದಾಜು ಮಾಡುತ್ತಿರುವ ನಾಯಕರು, ತಮ್ಮ ಊಹೆ ಮೀರಿ ಫ‌ಲಿತಾಂಶ ಬಂದರೆ ಏನು ಮಾಡಬೇಕೆಂಬ ಬಗ್ಗೆಯೂ ಚರ್ಚಿಸುತ್ತಿದ್ದಾರೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ಬೆಂಗಳೂರಿಗೆ ಆಗಮಿಸಿದ್ದು, ಗುರುವಾರ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಹಿತ ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಸಹಿತ ಕೇಂದ್ರದ ಇತರ ಕೆಲವು ಪ್ರಮುಖ ನಾಯಕರು ಕೂಡ ಶುಕ್ರವಾರ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತ ಎಂದು ಹೇಳಿವೆಯಾದರೂ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಮತ ದಾನೋತ್ತರ ಸಮೀಕ್ಷೆ ಸುಳ್ಳಾದ ಉದಾಹರಣೆಯನ್ನು ನೀಡುತ್ತಿರುವ ಬಿಜೆಪಿ, ನಮ್ಮದೇ ಸರಕಾರ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದರ ಜತೆಗೆ ಸಮ್ಮಿಶ್ರ ಸರಕಾರ ರಚನೆಯ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್‌ ಜತೆ ಮೈತ್ರಿ ಬಗ್ಗೆಯೂ ಮುಕ್ತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ಚುನಾವಣೆಯಲ್ಲಿ ಶೇಕಡಾವಾರು ಮತ ಕಾಂಗ್ರೆಸ್‌ಗೆ ಹೆಚ್ಚಾಗಿ ಬಂದರೂ ಸ್ಥಾನಗಳ ಕೊರತೆ ಉಂಟಾಗಿತ್ತು ಎಂಬ ಸಮಜಾಯಿಷಿಯನ್ನೂ ನೀಡಲಾಗುತ್ತಿದೆ.

ಪುಲಕೇಶಿನಗರ, ರಾಣೆಬೆನ್ನೂರು, ಮೇಲು ಕೋಟೆ, ಗಂಗಾವತಿ, ರೋಣ, ಗೌರಿಬಿದನೂರು, ಪುತ್ತೂರು, ಅರಕಲಗೂಡು ಕ್ಷೇತ್ರಗಳಲ್ಲಿ ಬಿಎಸ್‌ಪಿ, ಎನ್‌ಸಿಪಿ ಹಾಗೂ ಪಕ್ಷೇತರರು ಗೆಲ್ಲುವ ಸಾಧ್ಯತೆ ಇರುವುದರಿಂದ ಸರಕಾರ ರಚನೆಗೆ ಸಂಖ್ಯೆ ಕೊರತೆ ಯಾದರೆ ಪಕ್ಷೇತರರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಸದ್ದಿಲ್ಲದೆ ಕಾರ್ಯಾ ಚರಿಸುತ್ತಿದೆ.

Advertisement

ಸದ್ಯದ ನಿರೀಕ್ಷೆಗಳು
ಕಾಂಗ್ರೆಸ್‌ 115ರಿಂದ 120 ಸ್ಥಾನ ಗಳಿಸಿದರೆ ಸರಕಾರ ರಚನೆ. ಒಂದೊಮ್ಮೆ 100ರಿಂದ 105ರೊಳಗೆ ನಿಂತರೆ, ಬಿಜೆಪಿಗೆ 80ರಿಂದ 85, ಜೆಡಿಎಸ್‌ಗೆ 35ರಿಂದ 40 ಸ್ಥಾನ ಬಂದರೆ ಬಿಜೆಪಿ-ಜೆಡಿಎಸ್‌ ಸರಕಾರ ರಚನೆಯಾಗಬಹುದು ಎಂಬ ವ್ಯಾಖ್ಯಾನಗಳೂ ಕೇಳಿಬರುತ್ತಿವೆ. ಇದೇ ರೀತಿ ಬಿಜೆಪಿ 100ರ ಗಡಿ ದಾಟಿದರೆ ಕಾಂಗ್ರೆಸ್‌ 85ರಿಂದ 90 ಸ್ಥಾನ ಗಳಿಸಿದರೆ ಜೆಡಿಎಸ್‌ 30 ಸ್ಥಾನಗಳ ವರೆಗೆ ಬಂದರೂ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ಆಗಬಹುದು ಎಂದು ಹೇಳಲಾಗುತ್ತಿದೆ.

ನಮ್ಮದೇ ಸರಕಾರ: ಬಿಜೆಪಿ ನಾಯಕರ ಭರವಸೆ
ಮತದಾನೋತ್ತರ ಸಮೀಕ್ಷೆ ಏನೇ ಇದ್ದರೂ ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ಪ್ರಚಾರ ನಮಗೆ ಪ್ಲಸ್‌ ಆಗಿದೆ. ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಮತದಾನೋತ್ತರ ಸಮೀಕ್ಷೆಗಳು ಕಳೆದ ಬಾರಿ ಕಾಂಗ್ರೆಸ್‌ 107 ಸ್ಥಾನ ಎಂದು ಹೇಳಿದ್ದವು. ಫ‌ಲಿತಾಂಶದ ದಿನ ಅದು ಉಲ್ಟಾ ಆಗಿತ್ತು. ಈಗಲೂ ಅದೇ ಆಗುತ್ತದೆ ಎಂದು ತಿಳಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ ಅವರು, 31 ಸಾವಿರ ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ ಪಡೆಯಲಿದೆ. ಅಂಕಿಅಂಶ ಬಗ್ಗೆ ಮೇ 13ರಂದು ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ಬಿಜೆಪಿ 115 ಸ್ಥಾನಗಳನ್ನು ಗೆಲ್ಲಲಿದ್ದು, ಸ್ವಂತ ಬಲದ ಮೇಲೆ ಸರಕಾರ ರಚನೆ ಮಾಡಲಿದೆ. ಮುಖ್ಯ ಮಂತ್ರಿ ಅಭ್ಯರ್ಥಿ ಶಾಸಕಾಂಗ ಪಕ್ಷದ ಸಭೆ ಯಲ್ಲಿ ಆಯ್ಕೆ ಯಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಸಮೀಕ್ಷೆಗಳು ಏನೇ ಬಂದಿದ್ದರೂ ಬಿಜೆಪಿ ಬಹುಮತ ಪಡೆಯಲಿದೆ. ಲಿಂಗಾಯತ ಮತಗಳು ವಿಭಜನೆ ಆಗಿಲ್ಲ. ಅವು ಬಿಜೆಪಿ ಪರವೇ ಚಲಾವಣೆ ಆಗಿದೆ ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಸರಕಾರ ರಚನೆ ಮಾಡುವುದು ಶತಃಸಿದ್ಧ. ನಮಗೆ ಬಹುಮತ ಬರದಿದ್ದರೆ ಪ್ಲಾನ್‌ ಬಿ ಸಿದ್ಧವಾಗಿದೆ. ನಾವೇನೂ ಸನ್ಯಾಸಿಗಳಲ್ಲ, ರಾಜಕೀಯ ಮಾಡಲು ಬಂದವರು ಎಂದು ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. ನಾವು ಜನ್‌ಕಿ ಬಾತ್‌ ನಂಬುತ್ತೇವೆ. ಈಗ ಬಂದಿರುವುದು ಎಕ್ಸಿಟ್‌ ಪೋಲ್‌, ಮೇ 13ರಂದು ಸ್ಪಷ್ಟ ಫ‌ಲಿತಾಂಶ ಬರಲಿದೆ, ಕಾದು ನೋಡಿ ಎಂದು ತಿಳಿಸಿದ್ದಾರೆ.

ರಾಜ್ಯದ ಜನತೆ ಬದಲಾವಣೆ ಬಯಸಿದ್ದಾರೆ. ಸಮೀಕ್ಷೆ ಏನೇ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತದ ಸರಕಾರ ರಚಿಸಲಿದೆ.
-ರಣದೀಪ್‌ ಸಿಂಗ್‌ ಸುರ್ಜೇವಾಲಾ

Advertisement

Udayavani is now on Telegram. Click here to join our channel and stay updated with the latest news.

Next