Advertisement

ಬಿಜೆಪಿ ನಡೆ ಬಗ್ಗೆ ಪಕ್ಷದಲ್ಲೇ ಅಪಸ್ವರ

12:32 AM Feb 14, 2019 | |

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಸಂಖ್ಯಾಬಲವಿಲ್ಲ ಎಂಬುದನ್ನು ಬಜೆಟ್‌ ಅಧಿವೇಶನದ ವೇಳೆ ಸಾಬೀತುಪಡಿಸಲು ಪ್ರಯತ್ನಿಸುವ ಜತೆಗೆ ಸರ್ಕಾರದ ವೈಫ‌ಲ್ಯವನ್ನು ತೋರಿಸಿ ಇಕ್ಕಟ್ಟಿಗೆ ಸಿಲುಕಿಸುವ ಉಮೇದಿನಲ್ಲಿದ್ದ ಬಿಜೆಪಿಗೆ ದಿಢೀರ್‌ ಸ್ಫೋಟಗೊಂಡ “ಆಪರೇಷನ್‌ ಕಮಲ’ದ ಆಡಿಯೋ ಸಂಕಷ್ಟ ತಂದೊಡ್ಡಿದೆ.

Advertisement

ರಾಜ್ಯ ಬಿಜೆಪಿಯ ಕೆಲವೇ ನಾಯಕರಷ್ಟೇ ಸೇರಿ ನಡೆಸಿದ್ದ ರಹಸ್ಯ ಕಾರ್ಯಸೂಚಿಯ ಕೆಲ ಪ್ರಯತ್ನಗಳು ಬಯಲಾಗುತ್ತಿದ್ದಂತೆ ಬಿಜೆಪಿಯ ಲೆಕ್ಕಾಚಾರ, ಕಾರ್ಯತಂತ್ರಗಳೆಲ್ಲಾ ತಲೆಕೆಳಗಾಗಿ ಪಕ್ಷದ ಬಹುತೇಕ ಶಾಸಕರು, ನಾಯಕರಲ್ಲೇ ಅಸಮಾಧಾನಕ್ಕೆ ಕಾರಣವಾಗಿದೆ. ಅನಿರೀಕ್ಷಿತ ಬೆಳವಣಿಗೆ ಯಿಂದ ಮುಜುಗರಕ್ಕೆ ಒಳಗಾಗಿರುವುದು ಒಂದೆಡೆಯಾದರೆ, ಸದನದಲ್ಲಿ ಕ್ಷೇತ್ರದ ಸಮಸ್ಯೆ, ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಇತರೆ ವಿಚಾರಗಳನ್ನು ಪ್ರಸ್ತಾಪಿಸಲು ಸಾಧ್ಯವಾಗದಿರುವುದು ಬೇಸರ ಮೂಡಿಸಿದೆ. ಪಕ್ಷದ ಕೆಲ ನಾಯಕರ ದಿಢೀರ್‌ ನಿಲುವು, ಕಾರ್ಯತಂತ್ರಗಳ ಬಗ್ಗೆ ಮಾಹಿತಿಯಲ್ಲದ ಶಾಸಕರು ಗೊಂದಲ ದಲ್ಲಿದ್ದು, ಒಳ ಬೇಗುದಿಗೂ ಕಾರಣವಾಗಿದೆ.

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಬಹಿಷ್ಕಾರ, ಬಜೆಟ್‌ಗೆ ವಿರೋಧ ಮೂಲಕ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಪ್ರತಿಪಾದಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿ ತಕ್ಕ ಮಟ್ಟಿಗೆ ಯಶಸ್ವಿ ಯಾದಂತಿದ್ದ ಬಿಜೆಪಿಗೆ ಆಡಿಯೋ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಸದನದಲ್ಲಿ ಅಕ್ಷರಶಃ ಮಂಡಿಯೂರುವಂತೆ ಮಾಡಿತು.

ಸೋಮವಾರ, ಮಂಗಳವಾರ ಹಾಗೂ ಬುಧವಾರ ಬಹುಪಾಲು ಸದನದ ಕಲಾಪ ದಲ್ಲಿ ನಡೆದಿದ್ದು, ಆಡಿಯೋ ಪ್ರಕರಣ ಕುರಿತ ಚರ್ಚೆ. ಜತೆಗೆ ಎಸ್‌ಐಟಿಗೆ ಬದಲಾಗಿ ಜಂಟಿ ಸದನ ಸಮಿತಿ ಇಲ್ಲವೇ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂಬ ಒತ್ತಾಯಕ್ಕೆ ಸೀಮಿತವಾಗಿತ್ತು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ಪ್ರಬಲ ಪ್ರತಿಪಕ್ಷವೇ ಆರೋಪಿ ಸ್ಥಾನದಲ್ಲಿ ನಿಂತು “ತಪ್ಪಾಯ್ತು, ತನಿಖೆ ನಿರ್ಧಾರ ಕೈಬಿಡಿ’ ಎಂದು ಮನವಿ ಮಾಡುವ ಸ್ಥಿತಿಗೆ ತಲುಪಿತ್ತು. ಸ್ವಪ್ರತಿಷ್ಠೆಯಿಂದಾಗಿ ಈ ಸ್ಥಿತಿ ನಿರ್ಮಾಣವಾಗಿದೆ. ಈ ಬೆಳವಣಿಗೆ ಪಕ್ಷದ ಶಾಸಕರಿಗೆ ಅಸಮಾಧಾನ ತಂದಿದೆ.

ಅವಕಾಶ ಸಿಕ್ಕಿಲ್ಲ

Advertisement

 ವಿಧಾನಮಂಡಲ ಅಧಿವೇಶನದಲ್ಲಿ ಕ್ಷೇತ್ರದಲ್ಲಿನ ಸಮಸ್ಯೆಗಳು, ಬರ ನಿರ್ವಹಣೆ ಯಲ್ಲಿನ ವೈಫ‌ಲ್ಯ, ಅನುದಾನ ಹಂಚಿಕೆ ಯಲ್ಲಿ ತಾರತಮ್ಯ ಇತರೆ ವಿಚಾರಗಳನ್ನು ಪ್ರಸ್ತಾಪಿಸಿ ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇತ್ತು. ಅದಕ್ಕೆ ಪೂರಕವಾಗಿ ಒಂದಿಷ್ಟು ಮಾಹಿತಿಯನ್ನು ಕಲೆಹಾಕಿ ಹಲವು ಶಾಸಕರು ಸಜ್ಜಾಗಿದ್ದೆವು. ಆದರೆ ಆಡಿಯೋ ಗದ್ದಲಕ್ಕೆ ಕಲಾಪ ಬಲಿಯಾಗುತ್ತಿರು ವುದರಿಂದ ಕ್ಷೇತ್ರದ ಸಮಸ್ಯೆ ಇತರೆ ವಿಚಾರ ಪ್ರಸ್ತಾಪಕ್ಕೆ ಅವಕಾಶ ಸಿಗದಂತಾಗಿರುವುದು ಬೇಸರ ತಂದಿದೆ ಎಂದು ಶಾಸಕರೊಬ್ಬರು ಹೇಳಿದರು.

ಮಾಹಿತಿ ಇಲ್ಲದೇ ಗೊಂದಲ

ಬಿಜೆಪಿಯ ಕಾರ್ಯತಂತ್ರಗಳ ಬಗ್ಗೆ ಪಕ್ಷದ ಕೆಲವೇ ನಾಯಕರು ಚರ್ಚಿಸಿ ನಿರ್ಧರಿಸುತ್ತಿದ್ದಾರೆ. ಪಕ್ಷ ಹೋರಾಟದ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಅಂತಿಮ ಕ್ಷಣದಲ್ಲಿ ಸೂಚನೆ ನೀಡಲಾಗುತ್ತಿದೆ. ಶಾಸಕರ ಸಭೆಗಳಲ್ಲೂ ಕೆಲವರೇ ಪ್ರಸ್ತಾಪಿಸಿ ಉಳಿದವರು ಅನುಮೋದಿಸಿ ಸಭೆ ಮುಗಿಸುವಂತಾಗಿದೆ. ಇದರಿಂದ ಗೊಂದಲದ ವಾತಾವರಣ ಸೃಷ್ಟಿಯಾದಂತಾಗಿದೆ ಎಂದು ಹಿರಿಯ ಶಾಸಕರೊಬ್ಬರು ಹೇಳಿದರು.

ಅಸಮಾಧಾನ
ಫೆ. 7ರಂದು ರಾಜ್ಯ ಬಿಜೆಪಿ ಪದಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಲೋಕಸಭಾ ಚುನಾವಣೆ ತಯಾರಿಯಲ್ಲಿ ರಾಜ್ಯ ಬಿಜೆಪಿ ಹಿಂದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 ಎಂ.ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next