Advertisement

“ಆಪರೇಷನ್‌ ಕಮಲ’ಸದ್ಯಕ್ಕೆ ಬ್ರೇಕ್

06:00 AM Dec 12, 2018 | |

ಬೆಂಗಳೂರು: ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕರ್ನಾಟಕದ ಮಟ್ಟಿಗೆ ಸದ್ಯಕ್ಕೆ “ಆಪರೇಷನ್‌ ಕಮಲ’ ಕಾರ್ಯಾಚರಣೆಗೆ ಬ್ರೇಕ್‌ ಬಿದ್ದಂತಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ನಿರಾಳವಾಗಿದ್ದರೆ, ಬಿಜೆಪಿ ಪಾಳಯದಲ್ಲಿ ಮಂಕು ಕವಿದ ವಾತಾವರಣ ಮೂಡಿದೆ. ತೆಲಂಗಾಣದಲ್ಲಿ ಟಿಆರ್‌ಎಸ್‌, ಮಿಜೋರಾಂನಲ್ಲಿ ಎಂಎನ್‌ಎಫ್‌ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಸಾಧಿಸಿರುವುದು ಜೆಡಿಎಸ್‌ ನಲ್ಲಿ ಆಶಾಭಾವನೆ ಮೂಡಿಸಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಪಕ್ಷದ ಸಾಧನೆ
ಅಧಿಕಾರದ ಸನಿಹಕ್ಕೆ ಬಂದಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿಸಿದೆ.

Advertisement

ಈ ಹಿಂದೆ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕಾಂಗ್ರೆಸ್‌, ಕರ್ನಾಟಕ ವಿಧಾನಸಭಾ ಚುನಾವಣೆ 
ಯಲ್ಲೂ ಮತ್ತೂಮ್ಮೆ ಅಧಿಕಾರಕ್ಕೆ ಬರಲು ಸಾಧ್ಯವಾಗದೆ, ಜೆಡಿಎಸ್‌ಗೆ ಬೆಂಬಲ ನೀಡಿತ್ತು. ಒಟ್ಟಾರೆ ಸರ್ಕಾರ ಬಿಜೆಪಿ ತೆಕ್ಕೆಗೆ ಹೋಗದಂತೆ ನೋಡಿಕೊಂಡಿತ್ತು. ಇದೀಗ ಮೂರು ರಾಜ್ಯಗಳ ಫಲಿತಾಂಶ ಕಾಂಗ್ರೆಸ್‌ ಪಾಳಯದಲ್ಲಿ ಚೇತರಿಕೆಯುಂಟು ಮಾಡಿದ್ದು, ಮುಂದಿನ ಲೋಕಸಭೆ ಚುನಾವಣೆಗೆ ಮತ್ತಷ್ಟು ಉತ್ಸಾಹದಿಂದ ಸಜ್ಜಾಗಲು ಕಾರ್ಯಕರ್ತರು ಹಾಗೂ ಮುಖಂಡರಿಗೆ ಪಕ್ಷದ ಬಗ್ಗೆ ಭರವಸೆ ಮೂಡಲು ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮತ್ತೂಂದೆಡೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದು ಮತ್ತಷ್ಟು
ಗಟ್ಟಿಯಾಗಿದೆ. ಆದರೆ, ಸೀಟು ಹೊಂದಾಣಿಕೆ ಈಗ ಜಟಿಲವಾಗಬಹುದು. ಏಕೆಂದರೆ, ಉಪ ಚುನಾವಣೆಯಲ್ಲೂ ಕಾಂಗ್ರೆಸ್‌ ಮಂಡ್ಯ,
ಶಿವಮೊಗ್ಗ, ರಾಮನಗರ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಬಳ್ಳಾರಿ ಹಾಗೂ ಜಮಖಂಡಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಿತ್ತು. ಪಕ್ಷದಲ್ಲಿ ಶಿವಮೊಗ್ಗ ಹಾಗೂ ರಾಮನಗರ ಕ್ಷೇತ್ರ ಬಿಟ್ಟು ಕೊಡಲು ತೀವ್ರ ವಿರೋಧ ಎದುರಾದರೂ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಈ ಬಗ್ಗೆ ನಿರ್ಧಾರ ಕೈಗೊಂಡಿತು ಎಂದು ಅಸಮಾಧಾನಿತರನ್ನು ಸುಮ್ಮನಾಗಿಸಲಾಗಿತ್ತು. ಆದರೆ, ಪ್ರಸಕ್ತ ಪರಿಸ್ಥಿತಿಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಸೀಟು ಬಿಟ್ಟು ಕೊಡಲು ಸ್ಥಳೀಯ ಮಟ್ಟದಲ್ಲಿ ನಾಯಕರು ಒಪ್ಪದೆ ಇರಬಹುದು. ಕಾಂಗ್ರೆಸ್‌ ಪರ ರಾಷ್ಟ್ರವ್ಯಾಪಿ ಅಲೆ ಪ್ರಾರಂಭದ ಸೂಚನೆ ಕಾಣುತ್ತಿರುವುದರಿಂದ 18 :10 ಸೀಟು ಹಂಚಿಕೆ ಸೂತ್ರಕ್ಕೆ ವಿರೋಧ ವ್ಯಕ್ತವಾಗಿ, 20:8ಕ್ಕೆ
ಸೀಮಿತವಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಬಿಜೆಪಿಗೆ ಹಿನ್ನಡೆ: ಪಂಚರಾಜ್ಯಗಳ ಚುನಾವಣೆ  ಬಿಜೆಪಿ ಮಟ್ಟಿಗಂತೂ ಹಿನ್ನಡೆಯಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಮೇಲೂ ಅದರ ಪರಿಣಾಮ ಬೀರಬಹುದೆಂಬ ಆತಂಕ ನಾಯಕರಲ್ಲಿದೆ. ರಾಜ್ಯದಲ್ಲಿ ಅವಕಾಶ ಸಿಕ್ಕರೆ ಹತ್ತರಿಂದ ಹದಿನೈದು ಶಾಸಕರನ್ನು ಸೆಳೆದು ಸರ್ಕಾರ ರಚಿಸಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುವ ಕನಸು ಹೊಂದಿದ್ದ ಬಿಜೆಪಿ, ತಕ್ಷಣಕ್ಕೆ ಪಕ್ಷಕ್ಕೆ ಆಗುವ ಡ್ಯಾಮೇಜ್‌ ಕಡಿಮೆ ಮಾಡಿಕೊಳ್ಳುವತ್ತ ಚಿಂತನೆ ನಡೆಸುವಂತಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಟಾರ್ಗೆಟ್‌-20 ಗುರಿಯೊಂದಿಗೆ ಸಜ್ಜಾಗುತ್ತಿದ್ದ ವೇಳೆಯಲ್ಲೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ ಗಢದಲ್ಲಿ ಹಿನ್ನಡೆಯುಂಟಾಗಿ ಮಿಜೋರಾಂ,
ತೆಲಂಗಾಣದಲ್ಲೂ ಸರ್ಕಾರ ರಚನೆಯಲ್ಲಿ ತಮ್ಮ ಪಾತ್ರ ಏನೂ ಇಲ್ಲದಂತಾಗಿರುವುದು ಬಿಜೆಪಿ ರಾಜ್ಯ ನಾಯಕರನ್ನು ಚಿಂತೆಯಲ್ಲಿ ಮುಳುಗಿಸಿದೆ. ಪಂಚರಾಜ್ಯಗಳ ಫಲಿತಾಂಶದ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತುಕೊಂಡು ಜನರಿಗೆ ಹತ್ತಿರವಾಗದಿದ್ದರೆ ಮತ್ತಷ್ಟು ಕಷ್ಟವಾಗಲಿದೆ. ಇದು ನಮಗೆ ಖಂಡಿತವಾಗಿಯೂ ಎಚ್ಚರಿಕೆ ಗಂಟೆ ಎಂದು ಬಿಜೆಪಿ ನಾಯಕರು ವಿಶ್ಲೇಷಿಸಿರುವುದು ಅವರಿಗೆ ಇರುವ ಆತಂಕಕ್ಕೆ ಸಾಕ್ಷಿ.

ಈ ಮಧ್ಯೆ, ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಬಾಕಿ ಪಾವತಿ, ಸಾಲ ಮನ್ನಾ ಸೇರಿದಂತೆ ರೈತರ ಸಮಸ್ಯೆ ಮುಂದಿಟ್ಟುಕೊಂಡು ಸಮ್ಮಿಶ್ರ ಸರ್ಕಾರದ ಮೇಲೆ ಮುಗಿ ಬೀಳಲು ಬಿಜೆಪಿ ಬೆಳಗಾವಿಯಲ್ಲಿ ಆಯೋಜಿಸಿದ್ದ ರೈತರ ಸಮಾವೇಶವೂ ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿಲ್ಲ. ಒಂದು ಲಕ್ಷ ರೈತರ ಸಮಾವೇಶದ ಘೋಷಣೆ ಮಾಡಿದ್ದರೂ 10 ರಿಂದ 15 ಸಾವಿರ ಜನರನ್ನಷ್ಟೇ ಸೇರಿಸಲು ನಾಯಕರಿಗೆ ಸಾಧ್ಯವಾಯಿತು. ಇದೂ ಸಹ ಪಕ್ಷಕ್ಕೆ ಒಂದು ರೀತಿಯಲ್ಲಿ ಹಿನ್ನಡೆ ಎಂಬ ಮಾತು ಪಕ್ಷದ ವಲಯದಲ್ಲೇ ಕೇಳಿ ಬರುತ್ತಿದೆ.

Advertisement

ಫ‌ಲಿತಾಂಶ ಲೋಕಸಭಾ ಚುನಾವಣೆ ದಿಕ್ಸೂಚಿಯಲ್ಲ. ಮೋದಿಯವರನ್ನು ಬಿಟ್ಟರೆ ಈ ದೇಶದ ಪ್ರಧಾನಿಯಾಗುವ ಅರ್ಹತೆ ಇನ್ಯಾರಿಗೆ ಇದೆ?. ಫ‌ಲಿತಾಂಶದಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು ನಿಜ, ಆಡಳಿತ ವಿರೋಧಿ ಅಲೆ ಈ ಫ‌ಲಿತಾಂಶಕ್ಕೆ ಕಾರಣ.
● ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ,

ಪಂಚರಾಜ್ಯಗಳ ಫಲಿತಾಂಶದ ಪೈಕಿ ಮೂರು ರಾಜ್ಯಗಳ ಬಗ್ಗೆ ಮೊದಲೇ ನಿರೀಕ್ಷೆಯಿತ್ತು. ನಾವು ಐದೂ ರಾಜ್ಯ ಗೆದ್ದಂತೆಯೇ. ರಾಹುಲ್‌ಗಾಂಧಿ ದೂರದೃಷ್ಟಿ ಇಟ್ಟುಕೊಂಡಿದ್ದರು. ಫಲಿತಾಂಶವು ಜನರು ಬಿಜೆಪಿಯಿಂದ ದೂರ ಹೋಗುತ್ತಿದ್ದಾರೆ ಎಂಬುದರ ಸಂಕೇತ.
● ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ

ತೆಲಂಗಾಣದಲ್ಲಿ ಸಾಕಷ್ಟು ಶ್ರಮ ಹಾಕಿದ್ದೆವು. ಆದರೆ, ಅಲ್ಲಿ ಯಾಕೆ ಇಂತಹ ಫಲಿತಾಂಶ ಬಂತೋ ಗೊತ್ತಿಲ್ಲ. ತೆಲಂಗಾಣದಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಫಲಿತಾಂಶದ ನಿರೀಕ್ಷೆ ಯಿತ್ತು. ಜನರ ತೀರ್ಪನ್ನು ಒಪ್ಪಬೇಕು, ಜನರ ತೀರ್ಪು ಅಂತಿಮ. ಆದರೂ ಫಲಿತಾಂಶ ಲೋಕಾ ಚುನಾವಣೆಗೆ ದಿಕ್ಸೂಚಿ.
● ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ.

ರಾಹುಲ್‌ಗಾಂಧಿ ಕಷ್ಟಕಾಲದಲ್ಲೂ ಧೃತಿಗೆಡದೆ ಹೋರಾಟ ನಡೆಸಿದ್ದರು. ವಿರೋಧಪಕ್ಷಗಳ ವ್ಯಂಗ್ಯಕ್ಕೂ ತಲೆಕೆಡಿಸಿಕೊಳ್ಳದೆ ಜನರಿಗೆ ಹತ್ತಿರವಾಗಿದ್ದರು. ಸುಳ್ಳಿನ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ.
● ಕೃಷ್ಣ ಬೈರೇಗೌಡ, ಸಚಿವ

ಬಿಜೆಪಿಯವರು ಈಗಲಾದರೂ ಕಾಂಗ್ರೆಸ್‌ ಮುಕ್ತ ಭಾರತ ಎಂಬ ಬಾಲಿಶ ಹೇಳಿಕೆ ನೀಡುವುದನ್ನು ಬಿಡಬೇಕು. ಮೋದಿಯವರ ಅಹಂ, ಗರ್ವಕ್ಕೆ ಫಲಿತಾಂಶ ಲಗಾಮು ಹಾಕಿದೆ.
● ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

● ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next