Advertisement

ಆಪರೇಷನ್‌ ಕಮಲ; ಕೈ ಸುಟ್ಟುಕೊಂಡ ಬಿಜೆಪಿ 

06:00 AM Sep 19, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳಿಸಬೇಕೆಂಬ ಅವಸರದಲ್ಲಿ ಬಿಜೆಪಿ ಮತ್ತೂಮ್ಮೆ ಕೈ ಸುಟ್ಟುಕೊಂಡಿದ್ದು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರನ್ನು ಸೆಳೆಯಲು ಹೋಗಿ ತಮ್ಮ ಪಕ್ಷದವರೇ “ಆಪರೇಷನ್‌’ಗೆ ಒಳಗಾಗುವ ಆತಂಕ ಎದುರಿಸುತ್ತಿದೆ. ಆಪರೇಷನ್‌ ಕಮಲ ಕಾರ್ಯಾಚರಣೆ ಪ್ರಯತ್ನಕ್ಕೆ ತಿರುಗೇಟು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಶತಾಯ ಗತಾಯ ಐವರು ಬಿಜೆಪಿ ಶಾಸಕರನ್ನು ಸೆಳೆಯಲು ತೀರ್ಮಾನಿಸಿದ್ದು, ಸಂಪುಟದಲ್ಲಿ ಖಾಲಿಯಿರುವ ಒಂದು ಸ್ಥಾನ ಸದ್ಯಕ್ಕೆ ಭರ್ತಿ ಮಾಡದೆ ಬಿಜೆಪಿಯಿಂದ ಜೆಡಿಎಸ್‌ಗೆ ಬರುವವರಿಗೆ “ಆಫ‌ರ್‌’ ನೀಡಿದ್ದಾರೆ. ಅಷ್ಟೇ ಅಲ್ಲದೆ ಅಗತ್ಯ ಬಿದ್ದರೆ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್‌ನ ತುಮಕೂರು ಹಾಗೂ ಮಂಡ್ಯದ ಇಬ್ಬರು ಸಚಿವರ ರಾಜೀನಾಮೆ ಕೊಡಿಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಿದ್ದಾರೆ. ಇನ್ನೊಂದು ತಿಂಗಳಲ್ಲಿ ಐವರು ಬಿಜೆಪಿ ಶಾಸಕರು ಜೆಡಿಎಸ್‌ ಸೇರುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಮಧ್ಯೆ, ಹದಿನೆಂಟು ಶಾಸಕರನ್ನು ಖೆಡ್ಡಾಕ್ಕೆ ಕೆಡವಲು ಹೋಗಿದ್ದ ಬಿಜೆಪಿ, ಆರು ಶಾಸಕರ ಒಟ್ಟುಗೂಡಿಸುವಿಕೆಗೆ ಮಾತ್ರ ಸೀಮಿತವಾಗಿದ್ದಷ್ಟೇ ಅಲ್ಲದೆ
ತಮ್ಮದೇ ಪಕ್ಷದ ಐವರು ಬೇಲಿ ಹಾರಲು ಸಿದಟಛಿವಾಗಿರುವುದು ತಿಳಿದು ಗಾಬರಿಯಾಗಿ ಆಪರೇಷನ್‌ ಕಾರ್ಯಾಚರಣೆ ಬರಕಾಸ್ತುಗೊಳಿಸುವಂತಾಗಿದೆ. ಅಂಗೈ ತೋರಿಸಿ ಅವಲಕ್ಷಣ ಮಾಡಿಸಿಕೊಂಡಂತೆ ಎಂಬ ಗಾದೆಯಂತೆ ಎರಡನೇ ಬಾರಿಯೂ ಆಪರೇಷನ್‌
ಕಮಲ ಕಾರ್ಯಾಚರಣೆಗೆ ಕೈ ಹಾಕಿ ವಿಫ‌ಲವಾದ ರಾಜ್ಯ ನಾಯಕರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಗರಂ ಆಗಿದ್ದಾರೆ. ಜತೆಗೆ, ಈ ಕಾರ್ಯಾಚರಣೆಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ಕ್ಯಾಸಿನೋ ಕಿಂಗ್‌ಪಿನ್‌ಗಳು ಭಾಗಿಯಾಗಿದ್ದರೆಂದು ಬಿಂಬಿತವಾಗಿದ್ದರಿಂದ ಬಿಜೆಪಿ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ತೀವ್ರ ಅಸಮಾಧಾನಗೊಂಡಿದ್ದಾರೆ. ಇನ್ನು ಮುಂದೆ ಇಂತಹ ವ್ಯರ್ಥ ಕಸರತ್ತು ಮಾಡ ದಂತೆ ಹಾಗೂ ಲೋಕಸಭೆ ಚುನಾವಣೆ ಬಗ್ಗೆ ಮಾತ್ರ ಹೆಚ್ಚು ತಲೆಕೆಡಿಸಿಕೊಳ್ಳುವಂತೆಯೂ ತಾಕೀತು ಮಾಡಿದ್ದಾರೆಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ನಂಬರ್‌ಗೇಮ್‌: ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೈ ಹಾಕಿದ ರಾಜ್ಯ ಬಿಜೆಪಿ ನಾಯಕರು “18′ ನಂಬರ್‌ಗೇಮ್‌ ಒಟ್ಟು ಮಾಡುವಲ್ಲಿ ಶತಪ್ರಯತ್ನ ಮಾಡಿದರು. ಅದಕ್ಕಾಗಿ ಜಾರಕಿಹೊಳಿ ಸಹೋದ ರರ ನಂಬಿದ್ದರು. ಆದರೆ, ಕಾರ್ಯಾಚರಣೆ ಮಾಹಿತಿ ಸೋರಿಕೆಯಾಗುತ್ತಲೇ ಎಚ್ಚೆತ್ತು
ಕೊಂಡ ಕಾಂಗ್ರೆಸ್‌-ಜೆಡಿಎಸ್‌ ಬಿಜೆಪಿ ಬುಡಕ್ಕೆ ಕೈ ಹಾಕಿತು. ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ಹಾಗೂ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಚುನಾವಣೆಯಲ್ಲಿ ಗೆದ್ದಿರುವ ರಾಯಚೂರಿನ ಶಿವರಾಜ್‌ ಪಾಟೀಲ್‌, ಹೊಸದುರ್ಗದ ಗೂಳಿಹಟ್ಟಿ ಶೇಖರ್‌, ಸಿರಗುಪ್ಪದ ಎಂ.ಎಸ್‌.ಸೋಮಲಿಂಗಪ್ಪ, ಹೊಳಲ್ಕೆರೆ ಚಂದ್ರಪ್ಪ, ಆಳಂದದ ಸುಭಾಷ್‌ ಗುತ್ತೇದಾರ್‌ ಅವರನ್ನು ಸೆಳೆಯಲು ಮಾಸ್ಟರ್‌ ಪ್ಲಾನ್‌ ರೂಪಿಸಿದ್ದರು. ಜತೆಗೆ ಸಮುದಾಯದ ಪ್ರಭಾವಿಗಳ ಮೂಲಕ ಇತರೆ ಶಾಸಕರಿಗೂ ಗಾಳ ಹಾಕಿ ಎರಡು ಸುತ್ತು ಮಾತುಕತೆ ಸಹ ಪೂರ್ಣಗೊಳಿಸಿದ್ದರು. ಇದಾದ ನಂತರ
ಬಿಜೆಪಿ 18ರ ಬದಲು 23ರ ಟಾರ್ಗೆಟ್‌ ಇಟ್ಟುಕೊಂಡಿತು. ರಮೇಶ್‌ ಜಾರಕಿಹೊಳಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ತಿಳಿಸಿ 15 ಶಾಸಕರನ್ನು ಕರೆತರಲು ಹೇಳಿತು. ಆದರೆ, ಅವರ ಬಳಿಯಿದ್ದವರ ಸಂಖ್ಯೆಯೂ 10 ದಾಟಲಿಲ್ಲ ಎಂದು ಹೇಳಲಾಗಿದೆ. ಮತ್ತೂಂದು ಬೆಳವಣಿಗೆಯಲ್ಲಿ ರಮೇಶ್‌ಜಾರಕಿಹೊಳಿ ಒಂದು ಹಂತದಲ್ಲಿ ಭಯಕ್ಕೆ ಬಿದ್ದರು. ಸರ್ಕಾರ ಪತನವಾಗದೆ ನಾನು ಏಕಾಂಗಿಯಾದರೆ ಕಾಂಗ್ರೆಸ್‌ ನನ್ನ ರಕ್ಷಣೆಗೆ ಬರದಿದ್ದರೆ ಹೇಗೆ ಎಂಬ ಚಿಂತೆ ಕಾಡಿತು. ಬಿಜೆಪಿ ಡಿಸಿಎಂ ಆಫ‌ರ್‌ ಕೊಟ್ಟಿರುವುದಾಗಿ ಹೇಳಿದಾಗ, “ಇದು ಕಾಂಗ್ರೆಸ್‌ ಕಣಯ್ನಾ, ಇಲ್ಲಿ ಆ ರೀತಿಯ ಬೇಡಿಕೆ ಈಡೇರಿಕೆ ಕಷ್ಟ’ ಎಂದು ಸಿದ್ದರಾಮಯ್ಯ ಸಹ ಕೈ ಚೆಲ್ಲಿದರು.  ಇದಾದ ನಂತರ ರಮೇಶ್‌ ಜಾರಕಿಹೊಳಿ ಹಾಗೂ ಸತೀಶ್‌ ಜಾರಕಿಹೊಳಿ ತಣ್ಣಗಾಗಿ ಕುಮಾರಸ್ವಾಮಿ ಜತೆ ಮಾತನಾಡಿ ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಸೇರಿ ಆಡಳಿತಾತ್ಮಕ ವಿಚಾರಗಳ ಸಮಸ್ಯೆ ಹಾಗೂ ಇತರೆ “ಬೇಡಿಕೆ’ಗಳನ್ನು ಬಗೆಹರಿಸಿಕೊಂಡಿದ್ದಾರೆ. ತಮ್ಮ ಸಮುದಾಯದ ಮತ್ತೂಬ್ಬರಿಗೆ ಸಚಿವ ಸ್ಥಾನದ ಬೇಡಿಕೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಗೆ ಇನ್ನೂ ಇದೆ ಆಸೆ
ಇಷ್ಟಾದರೂ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ತಮ್ಮ ಕಾರ್ಯಾಚರಣೆ ಯಶಸ್ವಿಯಾಯಿತು ಎಂಬ ಸಂದೇಶ ರವಾನಿಸಲು ಬಿ.ಎಸ್‌.ಯಡಿಯೂರಪ್ಪ ಆ್ಯಂಡ್‌ ಟೀಂ ಇನ್ನೂ ತೆರೆಮರೆಯ ಪ್ರಯತ್ನದಲ್ಲಿದೆ. ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ ಅಸಮಾಧಾನ ಸ್ಫೋಟವಾಗಬಹುದು. ಆಗ ಒಂದು ಕೈ ನೋಡಬಹುದೆಂಬ ಆಸೆಯಲ್ಲಿದೆ ಎಂದು ಹೇಳಲಾಗುತ್ತಿದೆ. 

 ಎಸ್‌. ಲಕ್ಷ್ಮೀನಾರಾಯಣ

Advertisement
Advertisement

Udayavani is now on Telegram. Click here to join our channel and stay updated with the latest news.

Next