Advertisement

“ಆಪರೇಷನ್‌ ಗಂಗಾ’ದೊಡ್ಡ ಕಾರ್ಯಾಚರಣೆ: ಮೀನಾಕ್ಷಿ ಲೇಖಿ

12:15 AM Mar 08, 2022 | Team Udayavani |

ಬೆಂಗಳೂರು: ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಿಸುವಲ್ಲಿ “ಆಪರೇಷನ್‌ ಗಂಗಾ ‘ಕೇಂದ್ರ ಸರಕಾರದ ಅತ್ಯಂತ ದೊಡ್ಡ ಕಾರ್ಯಾಚರಣೆ ಎಂದು ಕೇಂದ್ರ ವಿದೇಶಾಂಗ ಖಾತೆಯ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

Advertisement

ಬೆಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಇಂಡಿಯನ್‌ ಗ್ಲೋಬಲ್‌ ಫೋರಮ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಠಿನ ಪರಿಸ್ಥಿತಿಯಲ್ಲೂ ಕೇಂದ್ರ ಸರಕಾರ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ನಿಂತಿದೆ. ಸಾವಿರಾರು ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದರು. ಅವ ರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರುವ ಆಪರೇಷನ್‌ ಗಂಗಾ ಕಾರ್ಯಾಚರಣೆ ಈಗಲೂ ಸಹ ನಡೆಯುತ್ತಿದೆ ಎಂದರು.

ಸರಕಾರದ ಪ್ರಯತ್ನ
ಉಕ್ರೇನ್‌ನಲ್ಲಿ ಮೃತ ನವೀನ್‌ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉಕ್ರೇನ್‌ನಲ್ಲಿ ಓದಿ ದೊಡ್ಡ ಡಾಕ್ಟರ್‌ ಆಗಬೇಕೆಂಬ ಆಸೆ ಇಟ್ಟುಕೊಂಡಿದ್ದ. ಅವನ ಊರಿನಲ್ಲೇ ಸ್ವಂತ ಕ್ಲಿನಿಕ್‌ ತೆರೆಯಬೇಕು ಎಂಬ ಆಸೆ ಹೊಂದಿದ್ದ ಹುಡುಗ, ಆದರೆ ಉಕ್ರೇನ್‌ ರಷ್ಯಾ ನಡುವಿನ ಯುದ್ಧದಿಂದ ಆತನನ್ನು ಕಳೆದುಕೊಳ್ಳಬೇಕಾಯಿತು. ಆತನ ಮೃತದೇಹ ತರಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ನಾವಿದ್ದ ರೈಲು ನಿಲ್ದಾಣದ ಪಕ್ಕದಲ್ಲೇ ಸಿಡಿದ ಬಾಂಬ್‌
ವಿಜಯಪುರ/ಲಿಂಗಸುಗೂರು: ಉಕ್ರೇನ್‌ ಯುದ್ಧ ಭೂಮಿಯ ನೆಲೆಯಿಂದ ಪಾರಾಗಿ ಬಂದುದೇ ದೇವರ ಕೃಪೆ. ಬಾಂಬ್‌ ದಾಳಿಯಿಂದ ತಪ್ಪಿಸಿ ಕೊಂಡು ಸ್ವದೇಶಕ್ಕೆ ಮರಳುವ ಹಂತದಲ್ಲಿ ಎದುರಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ. ಒಂದು ಹಂತದಲ್ಲಂತೂ ನಾವು ಪ್ರಯಾಣಿಸಲು ನಿಂತಿದ್ದ ರೈಲು ನಿಲ್ದಾಣದ ಪಕ್ಕದಲ್ಲೇ ಕ್ಷಿಪಣಿ ದಾಳಿಯಾದಾಗ ಜೀವವೇ ಹೋದಂತಾಗಿತ್ತು ಎಂದು ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಅವರು ಹೇಳಿದರು. ಅವರು ಮಂಗಳವಾರ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ.

ಉಕ್ರೇನ್‌ನ ಖಾರ್ಕಿವ್‌ಗೆ ತೆರಳಿದ್ದ ಪಟ್ಟಣದ ಪ್ರಜ್ವಲ್‌ ಹೂಗಾರ ಹಾಗೂ ತಾಲೂಕಿನ ಹಟ್ಟಿ ಪಟ್ಟಣದ ರುಬಿನಾ ಸೋಮವಾರ ಮನೆಗೆ ಆಗಮಿಸಿದರು. ಆರೇಳು ದಿನ ಬಂಕರ್‌ನಲ್ಲಿ ವಾಸ ಮಾಡಿ ಊಟ, ನೀರಿಗೂ ತೊಂದರೆ ಆಯಿತು. ಭಾರತೀಯ ರಾಯಭಾರ ಕಚೇರಿಯಿಂದ ಪ್ರತಿದಿನವೂ ಧೈರ್ಯವಾಗಿರುವಂತೆ ಸಂದೇಶ ಬರುತ್ತಿತ್ತು. ರಾಯಭಾರ ಕಚೇರಿ ಸೂಚನೆಯಂತೆ ಖಾರ್ಕಿವ್‌ ಪಟ್ಟಣದಿಂದ ಪಶ್ಚಿಮದ ಗಡಿಯತ್ತ ತೆರಳಿದಾಗ ಪೋಲ್ಯಾಂಡ್‌ ದೇಶದ ಮೂಲಕ ಬಂದಿದ್ದೇವೆ ಎಂದವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next