Advertisement

ಮಾಲಾಡಿ: ಆಪರೇಷನ್‌ ಚೀತಾ ಕಾರ್ಯಾಚರಣೆ ಯಶಸ್ವಿ:12 ದಿನದಲ್ಲಿ ಮತ್ತೊಂದು ಹೆಣ್ಣು ಚಿರತೆ ಸೆರೆ

10:00 AM Dec 25, 2019 | keerthan |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಾಲಾಡಿ ಅರೆಬೈಲು ತೋಳಾರ್‌ ಮಾವಿನ ತೋಪಿನಲ್ಲಿ ಕಳೆದ ಹಲವು ದಿನಗಳಿಂದಲೂ ಚಿರತೆ ಸಂಚರಿಸುತ್ತಿರುವ ಬಗ್ಗೆ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಅರಣ್ಯಾ ಇಲಾಖೆ ಚಿರತೆ ಸೆರೆ ಹಿಡಿಯಲು ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಬಳಿ ಬೋನ್‌ ಇರಿಸಿ ಸತತವಾಗಿ ಒಂದು ತಿಂಗಳುಗಳ ಕಾಲ ಕಾರ್ಯಾಚರಣೆ ನಡೆಸಿದ ಫಲವಾಗಿ ಡಿ.24 ರಂದು ಹೆಣ್ಣು ಚಿರತೆ ಸೆರೆ ಬಿದ್ದಿದ್ದು ಒಟ್ಟಿನಲ್ಲಿ ಒಂದೇ ಕಡೆಯಲ್ಲಿ ನಾಲ್ಕನೆ ಚಿರತೆಯೊಂದು ಸೆರೆಯಾದಂತಾಗಿದೆ.

Advertisement

ಬೋನ್‌ನಲ್ಲಿ ಸೆರೆಯಾದ ನಾಲ್ಕನೇ ಚಿರತೆ : ಚಿರತೆಯೊಂದು ಬೋನಿನಲ್ಲಿ ಸೆರೆಯಾಗಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಸ್ಥಳದಲ್ಲಿ ಪರಿಸರದ ನೂರಾರು ಮಂದಿ ಜಮಾಯಿಸಿ ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂತು.

ನಿರಂತರ ಕಾರ್ಯಾಚರಣೆ : ಈ ಹಿಂದೆ ಆ.4 ,2018 , ಅ.6, 2019, ಡಿ.12, 2019, ಡಿ.24 ,2019 ಸೇರಿದಂತೆ ಇದೇ ಸ್ಥಳದಲ್ಲಿ ಇರಿಸಿದ ಬೋನ್‌ಗೆ ನಾಲ್ಕು ಚಿರತೆಗಳು ಸೆರೆಯಾದಂತಾಗಿದೆ. ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಉದಯ ಬಿ., ಗ್ರಾ.ಪಂ.ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಗ್ರಾ.ಪಂ.ಸದಸ್ಯ ಸಂಜೀವ ದೇವಾಡಿಗ, ಸತೀಶ್‌ ದೇವಾಡಿಗ, ವಿಜಯ ಭಂಡಾರಿ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.


ಕಾರ್ಯಾಚರಣೆಗೆ ಸಾಥ್‌ ನೀಡಿದ ಸುರೇಶ್‌ ದೇವಾಡಿಗ ಮತ್ತು ಸತೀಶ್‌ ದೇವಾಡಿಗ ಸಹೋದರರು.
ಗ್ರಾಮೀಣ ಭಾಗದ ಜನತೆಯಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಸಂಚಾರ ಒಂದೆಡೆಯಾದರೆ ಮಾವಿನ ತೋಪಿನ ಸಮೀಪದಲ್ಲೇ ಇರುವ ಅಂಗನವಾಡಿ ಕೇಂದ್ರ ಹಾಗೂ ಶಾಲಾ ಪರಿಸರದಲ್ಲೇ ಹಗಲಿನಲ್ಲಿಯೇ ಪ್ರತ್ಯಕ್ಷವಾಗುವ ಚಿರತೆಗಳು ಸ್ಥಳೀಯರಿಗೆ ತೀವ್ರ ತಲೆ ನೋವಾಗಿ ಪರಿಣಮಿಸಿತ್ತು. ಚಿರತೆ ಸೆರೆ ಹಿಡಿಯಲು ಬೋನ್‌ ಇರಿಸಿ ಸ್ಥಳಕ್ಕೆ ಕತ್ತಲಾಗುತ್ತಿದ್ದಂತೆ ಬೋನ್‌ನ ಒಂದೆಡೆಯಲ್ಲಿ ನಾಯಿ ಮರಿಯನ್ನು ಇರಿಸಿ , ಅಪಾಯದ ನಡುವೆಯೂ ಕೂಡಾ ಕಾರ್ಯಾಚರಣೆಗೆ ಸಂಪೂರ್ಣ ಸಾಥ್‌ ನೀಡಿದ ಸ್ಥಳೀಯರಾದ ಮಾಲಾಡಿ ಸುರೇಶ್‌ ದೇವಾಡಿಗ ಮತ್ತು ಸತೀಶ್‌ ದೇವಾಡಿಗ ಸಹೋದರರ ಬಗ್ಗೆ ಪರಿಸರದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Advertisement

ಸ್ಥಳೀಯ ಉದ್ಯಮಿ ಪ್ರಭಾಕರ ತೋಳಾರ್‌ ಅವರಿಗೆ ಸಂಬಂಧಪಟ್ಟ ಮಾಲಾಡಿ ಅರೆಬೈಲ್‌ನಲ್ಲಿ ಸುಮಾರು 14 ಎಕರೆ ವಿಸ್ತೀರ್ಣದಲ್ಲಿ ಬೆಳೆದು ನಿಂತ ಮಾವಿನ ತೋಪುಗಳ ನಡುವೆ ದಟ್ಟವಾಗಿ ಗಿಡಗಂಟಿಗಳು ಆವರಿಸಿದ್ದು , ಈ ನಡುವೆ ವನ್ಯ ಜೀವಿಗಳು ಕಾಡು ಬಿಟ್ಟು ನಾಡಿನೆಡೆಗೆ ಸಂಚರಿಸಲು ಪ್ರಮುಖ ಕಾರಣವಾಗಿದೆ . ಈ ಬಗ್ಗೆ ಬೆಳೆದು ನಿಂತ ಗಿಡಗಂಟಿಗಳ ತೆರವಿಗೆ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದ್ದು ಸಂಭವನೀಯ ಅವಘಡಗಳು ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತೆಕ್ಕಟ್ಟೆ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದ್ದಾರೆ.

ಶಾಲಾ ವಠಾರ ನಿಧಾನ ಚಲಿಸಿ , ಚಿರತೆ ಇದೆ ವೇಗವಾಗಿ ಚಲಿಸಿ ಜಾಗೃತಿ ನಾಮಫಲಕ
ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜನವಸತಿ ಪ್ರದೇಶ ಸೇರಿದಂತೆ ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನ, ಅಂಗನವಾಡಿ ಕೇಂದ್ರ ಮತ್ತು ಮಾಲಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪರಿಸರದ ನಡುವೆ ಇರುವ ಮಾಲಾಡಿ ಅರೆಬೈಲು ತೋಳಾರ್‌ ಮಾವಿನ ತೋಪಿನ ನಿರಂತರವಾಗಿ ಚಿರತೆ ಸಂಚಾರ ನಡೆಸುತ್ತಿದ್ದು ಈ ಬಗ್ಗೆ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಕೂಡಾ ಯಾವುದೇ ಶಾಶ್ವತ ಪರಿಹಾರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮಾವಿನ ತೋಪಿಗೆ ಸಂಪರ್ಕ ಕಲ್ಪಿಸುವ ಗೇಟ್‌ಗೆ ಸ್ಥಳೀಯರು ಶಾಲಾ ವಠಾರ ನಿಧಾನ ಚಲಿಸಿ , ಚಿರತೆ ಇದೆ ವೇಗವಾಗಿ ಚಲಿಸಿ ಎನ್ನುವ ಜಾಗೃತಿ ನಾಮಫಲಕ ಅಳವಡಿಸಿ ಜನ ಜಾಗೃತಿ ಮೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next