ನವದೆಹಲಿ/ಮಾಲೆ: ಮಾಲ್ಡೀವ್ಸ್‌ನಲ್ಲಿ ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಡುವೆ ಬಿಕ್ಕಟ್ಟು ಉಂಟಾಗಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರ ಸೂಕ್ಷ್ಮವಾಗಿ ಗಮನಹರಿಸುತ್ತಿದ್ದು,ಅಗತ್ಯ ಬಿದ್ದರೆ ಸೇನೆಯನ್ನು ರವಾನಿಸುವ ಆಯ್ಕೆಯನ್ನೂ ಮುಕ್ತವಾಗಿ ಇರಿಸಿಕೊಂಡಿದೆ.
ದ್ವೀಪ ರಾಷ್ಟ್ರದ ಬೆಳವಣಿಗೆ ಕಳವಳಕಾರಿಯಾಗಿದೆ. ಇದರಿಂದ ಭಾರತದ ಇಲಾಖೆ ವ್ಯಾಕುಲಗೊಂಡಿದೆ ಎಂದು ವಿದೇಶಾಂಗ ಇಲಾಖೆ ನವದೆಹಲಿಯಲ್ಲಿ ಹೇಳಿದೆ. ಭಾರತೀಯರು ಅಗತ್ಯ ಬಿದ್ದರೆ ಮಾತ್ರ ಮಾಲ್ಡೀವ್ಸ್‌ಗೆ ಪ್ರಯಾಣಿಸಬೇಕು ಎಂದು ಈಗಾಗಲೇ ಎಚ್ಚರಿಕೆ ಸೂಚನೆ ನೀಡಿರುವ ಕೇಂದ್ರ, ದಕ್ಷಿಣ ಭಾರತದ ಪ್ರಮುಖ ವಾಯುನೆಲೆಯೊಂದರಿಂದ ಮಾಲ್ಡೀವ್ಸ್ ರಾಜಧಾನಿ
ಮಾಲೆಗೆ ಸೇನೆ ರವಾನಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿರುವುದಾಗಿ ಮೂಲಗಳು ಹೇಳಿವೆ. ಮೂಲಗಳ
ಪ್ರಕಾರ ಆ ವಾಯುನೆಲೆಯಲ್ಲಿ ಸೇನೆಗಳ ಸಂಚಾರ ಬಿರುಸಿನಿಂದ ನಡೆಯುತ್ತಿದೆ. ಪರಿಸ್ಥಿತಿಯನ್ನು ಗಮನಿಸಿಕೊಂಡು ನಿರ್ಧಾರ ಕೈಗೊಳ್ಳಲಾಗುತ್ತದೆ. ಮತ್ತೂಂದೆಡೆ ಭಾರತ ಮತ್ತು ಮಾಲ್ಡೀವ್ಸ್ ಅಂತಾರಾಷ್ಟ್ರೀಯ ಜಲಗಡಿ ಪ್ರದೇಶದಲ್ಲಿ ಗಸ್ತು ಬಿಗಿಗೊಳಿಸಲಾಗಿದೆ.
ಭಾರತ ಮಧ್ಯಪ್ರವೇಶಿಸಲಿ: ಇದೇ ವೇಳೆ ಶ್ರೀಲಂಕಾ ರಾಜಧಾನಿ ಕೊಲೊಂಬೋದಲ್ಲಿರುವ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಮಾತನಾಡಿ ಭಾರತ ಸರ್ಕಾರ ಕೂಡಲೇ ವಿಶೇಷ ಪ್ರತಿನಿಧಿಯೊಬ್ಬರನ್ನು ಕಳುಹಿಸಬೇಕು. ಜತೆಗೆ ಸೇನೆಯನ್ನು ಕಳುಹಿಸಿ ಪರಿಸ್ಥಿತಿ ನಿಯಂತ್ರಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಮೆರಿಕ ಸರ್ಕಾರವೂ ಬಿಕ್ಕಟ್ಟು ನಿವಾರಣೆಗೆ ನೆರವಾಗ ಬೇಕು ಎಂದು ಪ್ರತಿಪಾದಿಸಿದ್ದಾರೆ. ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಕ್ರಮವಾಗಿ ತುರ್ತು ಪರಿಸ್ಥಿತಿ ಹೇರಿದ್ದಾರೆ. ಇದು ಸಂವಿಧಾನಬಾಹಿರ ಎಂದು ಅವರು ಹೇಳಿದ್ದಾರೆ. ಅಧ್ಯಕ್ಷ ಯಮೀನ್‌ರನ್ನು ಕೂಡಲೇ ಅಧಿಕಾರದಿಂದ ಕೆಳಗಿಳಿಸಬೇಕು. ದೇಶದಲ್ಲಿನ ಬೆಳವಣಿಗೆ ಮಾಲ್ಡೀವ್ಸ್ ಮತ್ತು ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿನ ಭದ್ರತೆಗೆ ಧಕ್ಕೆ ಎಂದು ನಶೀದ್ ಹೇಳಿದ್ದಾರೆ. 2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮೊಹಮ್ಮದ್ ನಶೀದ್ ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ವಿರುದ್ಧ ಕಡಿಮೆ ಅಂತರದಲ್ಲಿ ಸೋತಿದ್ದರು.
ಆದೇಶ ರದ್ದು: ಮಂಗಳವಾರ ತಡ ರಾತ್ರಿ ಒಂಭತ್ತು ಮಂದಿ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕೆಂದು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ. ಭಾರತ ಸೇನೆಯನ್ನು ಕಳುಹಿಸಬೇಕು ಎಂದು ಮಾಜಿ ಅಧ್ಯಕ್ಷ ನಶೀದ್ ಮನವಿ
ಮಾಡಿದ ಬೆನ್ನಲ್ಲೇ ಹೀಗಾಗಿದೆ. ಸುಪ್ರೀಂಕೋರ್ಟ್ ಇತರ ನ್ಯಾಯಮೂರ್ತಿಗಳು ಬದಲಿ ತೀರ್ಪು ನೀಡಿದ್ದಾರೆ.
ಕಳೆದ ರಾತ್ರಿ ಏನಾಗಿತ್ತು?: ಕಳೆದ ರಾತ್ರಿ ಮಾಜಿ ಅಧ್ಯಕ್ಷ ಮವೂಮ್ ಅಬ್ದುಲ್ ಗಯೂಮ್ ಮತ್ತು ಅವರ ಪುತ್ರಿ,ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ಮತ್ತೂಬ್ಬ ನ್ಯಾಯಮೂರ್ತಿಗಳನ್ನು ಬಂಧಿಸಲಾಗಿತ್ತು. ಮಾಜಿ ಅಧ್ಯಕ್ಷ ಗಯೂಮ್ ಹಾಲಿ ಅಧ್ಯಕ್ಷ ಯಮೀನ್ ಅವರ ಮಲ ಸಹೋದರನಾಗಿದ್ದಾರೆ. ಸೇನೆ ಸುಪ್ರೀಂಕೋರ್ಟ್ ಒಳಪ್ರವೇಶಿಸಿವೆ.