Advertisement

ದಿನಬಳಕೆ ವಸ್ತುಗಳ ಕೃತಕ ಅಭಾವ, ಅಧಿಕ ಬೆಲೆ ವಿರುದ್ಧ ಕಾರ್ಯಾಚರಣೆ

01:35 AM Apr 19, 2020 | Sriram |

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ದಿನಬಳಕೆ ವಸ್ತುಗಳು ಹಾಗೂ ಔಷಧಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಆ ಮೂಲಕ ಕೃತಕ ಅಭಾವ ಸೃಷ್ಟಿಸಿ ಅಧಿಕ ಬೆಲೆಗೆ ಮಾರಾಟ ಮಾಡುವ ವ್ಯಾಪಾರಸ್ಥರು ಹಾಗೂ ಕಾಳಸಂತೆ ಕೋರರ ವಿರುದ್ಧದ ಕಾರ್ಯಾ ಚರಣೆಯ ಜಾಲವನ್ನು ಸರಕಾರ ಮತ್ತಷ್ಟು ಬಿಗಿಗೊಳಿಸಿದೆ.

Advertisement

ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಔಷಧ ನಿಯಂತ್ರಣ ಇಲಾಖೆಯ ವಿಶೇಷ ಜಂಟಿ ತಂಡಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿದ್ದು, ಅಕ್ರಮ ದಾಸ್ತಾನು, ಕೃತಕ ಅಭಾವ ಸೃಷ್ಟಿ ಹಾಗೂ ಅಧಿಕ ಬೆಲೆಗೆ ಮಾರಾಟಕ್ಕೆ ಸಂಬಂಧಿಸಿದಂತೆ ಈ ವರೆಗೆ 5 ಸಾವಿರಕ್ಕೂ ಹೆಚ್ಚು ತಪಾಸಣೆಗಳನ್ನು ನಡೆಸಿ 352 ಪ್ರಕರಣಗಳನ್ನು ದಾಖಲಿಸಿಕೊಂಡು 13 ಲಕ್ಷ ರೂ. ದಂಡ ವಿಧಿಸಲಾಗಿದೆ.

ಈ ಪೈಕಿ ಮಾಸ್ಕ್ , ಸ್ಯಾನಿಟೈಸರ್‌ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿ ದಂತೆ ಎ.1ರಿಂದ 17ರವರೆಗೆ 2,122 ತಪಾಸಣೆಗಳನ್ನು ನಡೆಸಲಾಗಿದ್ದು, 166 ಪ್ರಕರಣಗಳನ್ನು ದಾಖಲಿಸಿ, 106 ಎಫ್‌ಐಆರ್‌ ಹಾಕಲಾಗಿದೆ ಅಧಿಕ ಬೆಲೆಗೆ ಮಾರಾಟ ಮಾಡಿದ ಪ್ರಕರಣಗಳಲ್ಲಿ 4.24 ಲಕ್ಷ ರೂ. ದಂಡ ಹಾಕಲಾಗಿದೆ. ಉಳಿದ ಪ್ರಕರಣ ಗಳಲ್ಲಿ 1.78 ಲಕ್ಷ ರೂ. ದಂಡ ವಿಧಿಸಲಾಗಿದೆ. ಸಾರ್ವಜನಿಕ ಪಡಿತರ ವಿತರಣ ಪದ್ಧತಿಗೆ ಸಂಬಂಧಿಸಿದಂತೆ ಕಾನೂನು ಮಾಪನ ಶಾಸ್ತ್ರ ಇಲಾಖೆ 2,893 ತಪಾಸಣೆಗಳನ್ನು ನಡೆಸಿ 392 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. 5 ಲಕ್ಷ ರೂ. ದಂಡ ವಿಧಿಸಿದೆ.

ಇದೇ ವೇಳೆ ಎ.1ರಿಂದ ಇಲ್ಲಿಯವರೆಗೆ ಅಗತ್ಯ ವಸ್ತುಗಳ ಕಾಯ್ದೆಯಡಿ 19 ಪ್ರಕರಣಗಳನ್ನು ದಾಖಲಿಸಿಕೊಂಡು, ಅದರಲ್ಲಿ 14 ಪ್ರಕರಣಗಳಲ್ಲಿ ಎಫ್‌ಐಆರ್‌ ಹಾಕಲಾಗಿದೆ. 34 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, 64.95 ಲಕ್ಷ ರೂ. ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.

ಇನ್ನು, ಆಹಾರ ಪದಾರ್ಥ, ಔಷಧಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸಿ ಆ ಮೂಲಕ ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿ ಅಧಿಕ ಬೆಲೆಗೆ ಮಾರಾಟ ಮಾಡುವ ಮಾರಾಟಗಾರರು ಮತ್ತು ಕಾಳಸಂತೆಕೋರರ ವಿರುದ್ಧ ಮಾರ್ಚ್‌ ಕೊನೆಯ ವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಈಗ ಅದನ್ನು ಮತ್ತಷ್ಟು ಚುರುಕುಗೊಳಿಸಲಾಗಿದ್ದು, ಈ ಸಂಬಂಧ ಜಂಟಿ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Advertisement

ವರ್ತಕರ ಲೆಕ್ಕ ತಪಾಸಣೆ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆ-1995ರನ್ವಯ ಅಗತ್ಯ ವಸ್ತುಗಳು ಸಾರ್ವಜನಿಕರಿಗೆ ಅಗತ್ಯಕ್ಕೆ ತಕ್ಕಂತೆ ಲಭ್ಯವಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸದ್ಯ ಪಡಿತರ ವಿತರಣೆ ಕಾರ್ಯ ಮುಗಿದಿದೆ. ಈ ಸಂಬಂಧ ಕರ್ನಾಟಕ ಅಗತ್ಯ ವಸ್ತುಗಳ (ಲೈಸೆನ್ಸಿಂಗ್‌) ಆದೇಶ-1981 ಮತ್ತು ಕಾಳಸಂತೆ ತಡೆ ಮತ್ತು ಅಗತ್ಯ ವಸ್ತುಗಳ ಸರಬರಾಜು ನಿರ್ವಹಣೆ ಕಾಯ್ದೆ-1980ರ ಅನ್ವಯ ತಪ್ಪಿತಸ್ಥರನ್ನು 7 ವರ್ಷಗಳ ಅವಧಿಗೆ ಕಾರಾಗೃಹ ಅಥವಾ ದಂಡ ವಿಧಿಸಬಹುದಾಗಿದೆ. ಆದ್ದರಿಂದ ಮುಕ್ತ ಮಾರುಕಟ್ಟೆ ವರ್ತಕರ ಲೆಕ್ಕಪತ್ರಗಳನ್ನು ನಿಯಮಿತವಾಗಿ ತಪಾಸಣೆ ಮಾಡುವಂತೆ ಜಿಲ್ಲಾ ಜಂಟಿ ಹಾಗೂ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿ ಆಹಾರ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next