Advertisement

ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ

10:03 AM Oct 28, 2019 | Team Udayavani |

ಬೆಂಗಳೂರಿನ 3 ಸ್ಥಳಗಳಲ್ಲಿ ಸಿಸಿಬಿ ತಂಡದಿಂದ ಶೋಧ
ಮಹಿಳೆಯರು, ಯುವತಿಯರು ಸೇರಿ 60 ಮಂದಿ ಸೆರೆ

Advertisement

ಬೆಂಗಳೂರು: ಅಕ್ರಮ ವಲಸಿಗರನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಸ್ಸಾಂ ಮಾದರಿಯಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಯಾಗುತ್ತದೆ ಎಂಬ ವರದಿಗಳ ನಡುವೆಯೇ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ದೇಶೀಯರು ಮತ್ತು ಇತರ ವಿದೇಶೀಯರ ಪತ್ತೆಗೆ ಶೋಧ ಕಾರ್ಯ ಆರಂಭವಾಗಿದೆ. ಮೊದಲ ಹಂತದಲ್ಲಿ ಅಪರಾಧ ವಿಭಾಗ ಪೊಲೀಸರು (ಸಿಸಿಬಿ) ಬೆಂಗಳೂರಿನಲ್ಲಿ 60 ಮಂದಿ ಅಕ್ರಮ ಬಾಂಗ್ಲಾದೇಶಿಗರನ್ನು ಬಂಧಿಸಿದ್ದಾರೆ.

ಮಾರತಹಳ್ಳಿ, ರಾಮಮೂರ್ತಿ ನಗರ, ಬೆಳ್ಳಂದೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ದಾಖಲೆ ಇಲ್ಲದೆ ವಾಸಿಸುತ್ತಿದ್ದ ಬಾಂಗ್ಲಾದೇಶಿಯರನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಅಕ್ರಮ ವಲಸಿಗರಿಗೆ ಮನೆ ಬಾಡಿಗೆ ನೀಡುವುದು, ಆಶ್ರಯ ಕಲ್ಪಿಸುವವರ ವಿರುದ್ಧವೂ ಕ್ರಮ ಜರಗಿಸಲು ಪೊಲೀಸರು ನಿರ್ಧರಿಸಿದ್ದಾರೆ. 29 ಮಂದಿ ಪುರುಷರು, 22 ಮಹಿಳೆಯರು, 9 ಮಂದಿ ಯುವತಿಯರು ಸೇರಿದ್ದಾರೆ

ಗಡೀಪಾರಿಗೆ ಕ್ರಮ
ಬಂಧಿತ 60 ಮಂದಿಯನ್ನು ಸದ್ಯಕ್ಕೆ ಪುನರ್ವಸತಿ ಕೇಂದ್ರಗಳಲ್ಲಿ ಇರಿಸಲಾಗುತ್ತದೆ. ನಿಯಮಗಳನ್ನು ಪರಿಶೀಲಿಸಿ ಅವರನ್ನೆಲ್ಲ ಬಾಂಗ್ಲಾದೇಶಕ್ಕೆ ಗಡೀಪಾರು ಮಾಡುವ ಬಗ್ಗೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗುತ್ತದೆ.

ಬಂಧಿತರ ಪೈಕಿ ಬಹುತೇಕರು ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಆಗಮಿಸಿದ್ದರು. ಕೂಲಿ, ಕಟ್ಟಡ ನಿರ್ಮಾಣ, ಚಿಂದಿ ಆಯುವ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಆದರೆ ಇದುವರೆಗೂ ಯಾರೊಬ್ಬರೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿಲ್ಲ. ಇದರ ಹೊರತಾಗಿಯೂ ಅವರ ವಿಚಾರಣೆ ಹಾಗೂ ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದರು.

Advertisement

ಬೆಂಗಳೂರು ನಗರ ಮತ್ತು ಹೊರವಲಯ ದಲ್ಲಿಯೂ ಬಾಂಗ್ಲಾದೇಶ ಸಹಿತ ಇನ್ನಿತರ ದೇಶಗಳ ಪ್ರಜೆಗಳು ಅಕ್ರಮವಾಗಿ ನೆಲೆಸಿರುವ ಬಗ್ಗೆ ಮಾಹಿತಿಯಿದೆ. ಹೀಗಾಗಿ ಕಾರ್ಯಾಚರಣೆ ನಿರಂತರವಾಗಿರಲಿದೆ. ಅಕ್ರಮ ವಲಸಿಗರ ಚಲನವಲನಗಳು, ಅವರ ಚಟುವಟಿಕೆಗಳ ಬಗ್ಗೆಯೂ ನಿಗಾ ಇಡಲಾಗಿದೆ. ಹೀಗಾಗಿ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್‌ಆರ್‌ಒ) ಸಹಿತ ಇತರ ಸಕ್ಷಮ ಪ್ರಾಧಿಕಾರಗಳ ಜತೆ ಚರ್ಚಿಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದರು.

ಆಫ್ರಿಕಾ ಪ್ರಜೆಗಳ ಸ್ಥಳಾಂತರ
ಕಳೆದ ವಾರ ನಡೆಸಿದ್ದ ಕಾರ್ಯಾಚರಣೆಯಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದ 7 ಮಂದಿ ಆಫ್ರಿಕಾ ದೇಶಗಳ ಪ್ರಜೆಗಳನ್ನು ಎಫ್ಆರ್‌ಆರ್‌ಒ ಮೂಲಕ ಅವರ ದೇಶಗಳಿಗೆ ವಾಪಸ್‌ ಕಳುಹಿಸಿ ಕೊಡುವ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.

ಎಚ್ಚರಿಕೆ ವಹಿಸಿ
ಬಾಡಿಗೆ ಮನೆ ನೀಡುವ ಮೊದಲು ಮಾಲಕರು ಎಚ್ಚರಿಕೆ ವಹಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ ರಾವ್‌ ತಿಳಿಸಿದ್ದಾರೆ. ಅಕ್ರಮವಾಗಿ ನೆಲೆಸಿರುವವರಿಗೆ ಅವರ ಪೂರ್ವಾಪರ, ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಮನೆ ಬಾಡಿಗೆ ನೀಡುವವರು, ಆಶ್ರಯ ನೀಡುವವರ ವಿರುದ್ಧ ಕೇಸು ದಾಖಲಿಸಿ ಕಠಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಬಂಧಿತರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಬಗ್ಗೆ ಮಾಹಿತಿ ಇಲ್ಲ
ಎಫ್ಆರ್‌ಆರ್‌ಒ ಸಹಿತ ಇತರ ಸಕ್ಷಮ ಪ್ರಾಧಿಕಾರಗಳ ಜತೆಗೆ ಚರ್ಚೆ
ಮನೆ ಬಾಡಿಗೆ ಕೊಡುವ ಮೊದಲು ಎಚ್ಚರಿಕೆ ವಹಿಸಿ: ಭಾಸ್ಕರ ರಾವ್‌

ಪುರುಷರು 29
ಮಹಿಳೆಯರು 22
ಯುವತಿಯರು 09

ಅಪರಾಧಗಳ ಪರಿಣಾಮಕಾರಿ
ನಿಯಂತ್ರಣ ಸಲುವಾಗಿ ನಗರದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ಪತ್ತೆ ಹಾಗೂ ಅವರನ್ನು ಅವರ ದೇಶಗಳಿಗೆ ವಾಪಸ್‌ ಕಳುಹಿಸಿಕೊಡುವ ಕಾರ್ಯಾಚರಣೆ ಮುಂದುವರಿಯಲಿದೆ. ಅವರ ಚಟುವಟಿಕೆಗಳು ಹಾಗೂ ಚಲನವಲನಗಳ ಮೇಲೆಯೂ ನಿಗಾ ಇಡಲಾಗುತ್ತದೆ
-ಕುಲದೀಪ್‌ ಜೈನ್‌, ಸಿಸಿಬಿ ಡಿಸಿಪಿ

 

Advertisement

Udayavani is now on Telegram. Click here to join our channel and stay updated with the latest news.

Next