Advertisement

ಶಾಲೆ ಬಿಟ್ಟ ಬಾಲಕಿ ಹೆಸರಲ್ಲೇ ಕಾರ್ಯಾಚರಣೆ

08:31 AM Jul 27, 2019 | Suhan S |

ಬಾಗಲಕೋಟೆ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ನವನಗರದ ಸೆಕ್ಟರ್‌ ನಂ.46ರ ಆಶ್ರಯ ಕಾಲೋನಿಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಕುದುರೆ ಸವಾರಿ ಮಾಡುವ ಮೂಲಕ ಚಾಲನೆ ನೀಡಿದರು.

Advertisement

ಚಾಲನೆ ನೀಡಿದ ಹಿನ್ನಲೆ ಯಲ್ಲಿ ಕಾರ್ಯಾಚರಣೆ ಕೈಗೊಂಡ ತಮ್ಮ ನೇತೃತ್ವದ ತಂಡ ರಸುಲ್ಲಾ ಚೌದರಿ ಎಂಬ ಬಾಲಕಿಯ ಮನೆಗೆ ಭೇಟಿ ನೀಡಿ ಅವಳ ತಂದೆ-ತಾಯಿಯ ವನವೊಲಿಸಿ ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 684 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಆ ಮಕ್ಕಳೆಲ್ಲ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದರು.

ಸರ್ಕಾರದ ಗುರಿ 14 ವರ್ಷದ ಎಲ್ಲ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬುದಾಗಿದ್ದು, ಇದಕ್ಕಾಗಿ ಕಾನೂನನ್ನು ಜಾರಿಗೆ ತಂದಿದೆ. ಈ ಕಾನೂನಿನ ಅನ್ವಯ ಪಾಲಕರು ತಮ್ಮ ಮಗುವಿಗೆ 14 ವರ್ಷದವರೆಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು. ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದರು.

ಪ್ರತಿಯೊಂದು ಮಗುವನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಪ್ರತಿ ತಿಂಗಳು ಕನಿಷ್ಠ ಒಂದು ಮಗುವನ್ನಾದರೂ ಸಹ ಮರಳಿ ಶಾಲೆಗೆ ಸೇರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ತಾವು ಸಹ ತಿಂಗಳಿಗೆ ಒಂದು ಮಗು ಸೇರಿಸುವ ಕಾರ್ಯ ಮಾಡುತ್ತಿದ್ದು, ಶುಕ್ರವಾರ ಎರಡು ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಲಾಗಿದೆ. ಅಲ್ಲದೇ ಗುರುವಾರ ಜಮಖಂಡಿ ನಗರದಲ್ಲಿ ಡಿಡಿಪಿಐ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದ ತಂಡ 3 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ ಎಂದು ತಿಳಿಸಿದರು.

ಜಿ.ಪಂ ಸಿಇಒ ಗಂಗೂಬಾಯಿ ಮಾನಕರ ನೇತೃತ್ವದ ತಂಡವು ಸಹ ಮರಳಿ ಶಾಲೆಗೆ ಸೇರಿಸುವ ಕಾರ್ಯ ಚುರುಕಾಗಿ ಮಾಡುತ್ತಿದ್ದು, ಈ ವರೆಗೆ 8 ಮಕ್ಕಳನ್ನು ಮರಳಿ ಶಾಲೆಗೆ ಸೇರಿಸಿದ್ದಾರೆ. ಅಲ್ಲದೇ ಸೀಮಿಕೇರಿ ಹತ್ತಿರವಿರುವ ವೀರಾಪುರದಲ್ಲಿ ಜಿಲ್ಲಾಡಳಿತ ಕಣ್ಣು ತಪ್ಪಿಸಿ ಬಾಲ್ಯ ವಿವಾಹವಾಗಿದ್ದು, ಮದುವೆಯಾದ ಬಾಲಕಿಯ ಮನೆಗೆ ಸಿಇಒ ಭೇಟಿ ನೀಡಿ ಮನೆಯ ಪಾಲಕರನ್ನು ಮನವೊಲಿಸಿ ಪುನಃ 8ನೇ ತರಗತಿಗೆ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

Advertisement

ದುರಗವ್ವ ಯಲ್ಲಪ್ಪ ಭೋವಿ ಎಂಬ ಬಾಲಕಿ ವೀರಾಪುರ ಆರ್‌.ಸಿ. ಕೇಂದ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯವರೆಗೆ ಕಲಿತು ಶಿಕ್ಷಣ ಮುಂದುವರಿಸದೇ ಅವರ ಮನೆಯವರು ಮದುವೆ ಮಾಡಿದ್ದಾರೆ. ಈಗ ಆ ಬಾಲಕಿ ಗರ್ಭಾವಸ್ಥೆಯಲ್ಲಿದ್ದ ಬಗ್ಗೆ ಭೇಟಿ ಸಮಯದಲ್ಲಿ ತಿಳಿದು ಬಂದಿತು. ಇದನ್ನು ಅರಿತ ಸಿಇಒ ಅವರು ಗರ್ಭಾವಸ್ಥೆಯಲ್ಲಿರುವ ಬಾಲಕಿ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹತ್ತಿರದ ಸೀಮಿಕೇರಿ ಸರ್ಕಾರಿ ಪ್ರೌಢಶಾಲೆಗೆ 8ನೇ ತರಗತಿಗೆ ದಾಖಲು ಮಾಡಿಸಿದ್ದಾರೆ ಎಂದು ತಿಳಿಸಿದರು.

ಆಹಾರ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಿ.ಎಚ್. ಗೋನಾಳ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಸಪ್ಪ ನೀರಲಕೇರಿ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಕೆ. ಗುಡೂರ, ಜಿಲ್ಲಾ ಸಮನ್ವಯಾಧಿಕಾರಿ ಸಿ.ಆರ್‌. ಓಣಿ, ಶಿಕ್ಷಣಾಧಿಕಾರಿ ಎಂ.ಐ. ಬಾಳಿಕಾಯಿ, ಸಂಪನ್ಮೂಲ ವ್ಯಕ್ತಿ ಡಾ| ಪಿ.ಜಿ. ಖಾಡೆ, ಜಿ.ಬಿ. ಚಲವಾದಿ, ಎ.ಎಸ್‌. ಪವಾರ ಉಪಸ್ಥಿತರಿದ್ದರು.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ನಿಟ್ಟಿನಲ್ಲಿಂದು ನವನಗರದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ರಸುಲ್ಲಾ ಎಂಬ ಬಾಲಕಿಯನ್ನು ಮರಳಿ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದ ಹಿನ್ನೆಲೆಯಲ್ಲಿ ರಸುಲ್ಲಾ ಎಂಬ ಬಾಲಕಿಯ ಹೆಸರಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಕಾರ್ಯಾಚರಣೆಗೆ ಆಪರೇಶನ್‌ ರಸುಲ್ಲಾ ಎಂದೇ ಹೆಸರಿಡಲು ಜಿಲ್ಲಾಡಳಿತ ನಿರ್ಧರಿಸಿದೆ. •ಆರ್‌.ರಾಮಚಂದ್ರನ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next