Advertisement

ಆಷಾಢದಾಗ ಆಪರೇಷನ್‌ ಮಾಡಿ ಕೋಮಾಕ್ಕ ಕೆಡವಿದ್ರು!

02:00 AM Jul 07, 2019 | mahesh |

ಕಾಲಭೈರೇಶ್ವರನ ಕಾಪಾಡ್ತಾನು ಅಂತ ಅರಾಮ್‌ ಅಮೆರಿಕದಾಗ ತಿರುಗಾಡಾಕತ್ತಿರೋ ಸಿಎಂ ಕುಮಾರಸ್ವಾಮಿ ಸಾಹೇಬ್ರು ಸುದ್ದಿ ಕೇಳಿ ಇಮಾನ ಹತ್ಯಾರಂತ. ಬರೂದ್ರಾಗ ಎಲ್ಲಿ ಮಾಜಿ ಅಕ್ಕಾರೋ ಅನ್ನುವಂಗಾಗೇತಿ. ಪಾಪ ಪರಮೇಶ್ವರ್‌ ಸಾಹೇಬ್ರು ಮಾತ್ರ ಸರ್ಕಾರಕ್ಕ ಏನೂ ಆಗಬಾರದು ಅಂತೇಳಿ ಇರೋ ಬರೋ ದೇವರಿಗೆಲ್ಲ ಹರಕಿ ಹೊತ್ಕೊಂಡು ಕುಂತಾರಂತ.

Advertisement

ಅಕ್ಕಾ ಏಕಾಏಕಿ ಫೋನ್‌ ಮಾಡಿ ಮಗನ ಮದುವಿ ಐತಿ ಇಬ್ರೂ ಬರ್ರಿ ಅಂದ್ಲು. ಊರಿಗಿ ಹೋಗಾಕ ಕಾರಣಾ ಹುಡುಕಾಕತ್ತಿದ್ದ ಯಜಮಾನ್ತಿ ಟಿಕೆಟ್ ಬುಕ್‌ ಮಾಡೂ ಮೊದ್ಲ ಬ್ಯಾಗ್‌ ಪ್ಯಾಕ್‌ ಮಾಡಾಕ್‌ ಶುರು ಮಾಡಿದ್ಲು.

ಇದೊಂದ್‌ ರೀತಿ ಅನ್‌ಎಕ್ಸ್‌ಪೆಕ್ಟೆಡ್‌ ಆಪರೇಷನ್‌ ಕಮಲ ಆರಂಭ ಆದಂಗ. ಯಾರೂ ಬಯಸದಿದ್ರೂ ಆನಂದ್‌ ಸಿಂಗ್‌ ಎಂಎಲ್ಎ ಸ್ಥಾನಕ್ಕ ರಾಜೀನಾಮೆ ನೀಡಿದಂಗ. ಬಂಡಾಯ ಶಾಸಕರು ರಾಜೀನಾಮೆ ಕೊಡ್ತೇವಿ ಕೊಡ್ತೇವಿ ಅಂದ್ಕೋಂತನ ಆರು ತಿಂಗಳು ದೂಡಿದ್ರು, ಹಿಂಗಾಗಿ ಸರ್ಕಾರಕ್ಕ ಈಗೇನು ಆಗುದಿಲ್ಲ ಅಂತ ಆರಾಮ ಅಮೆರಿಕಾ ಪ್ರವಾಸ ಹೋಗಿರೋ ಸಿಎಂಗ ಆನಂದ್‌ ಸಿಂಗ್‌ ಏಕಾ ಏಕಿ ಶಾಕ್‌ ಕೊಟ್ಟಿದ್ದು, ಕಾಂಗ್ರೆಸ್‌ನ್ಯಾರಿಗಷ್ಟ ಅಲ್ಲ ಸ್ವತಃ ಯಡಿಯೂರಪ್ಪಗೂ ಫ‌ುಲ್ಶಾಕ್‌ ಆಗಿರಬೇಕು ಅನಸ್ತೈತಿ.

ಯಾಕಂದ್ರ ಅವರ ಆಪರೇಷನ್‌ ಕಮಲದ ಲಿಸ್ಟ್‌ ನ್ಯಾಗ ಆನಂದ್‌ಸಿಂಗ್‌ದು ಎಷ್ಟನೇ ನಂಬರ್‌ ಇತ್ತೋ ಯಾರಿಗ್ಗೊತ್ತು. ಅವರ ಲಿಸ್ಟಿನ್ಯಾಗ ಮೊದಲನೇ ನಂಬರ್‌ ಇರೋ ರಮೇಶ್‌ ಜಾರಕಿಹೊಳಿ ಸಾಹೇಬ್ರು ಆರ್‌ ತಿಂಗಳಿಂದ ರಾಜಿನಾಮೆ ಕೊಟ್ಟ ಬಿಡ್ತೇನಿ ಅಂತೇಳಿ ಎಲ್ಲಾರಿಗೂ ಗೋಕಾಕ್‌ ಕರದಂಟ್ ಆಸೆ ತೋರಿಸಿಕೋಂತ ತಿರುಗ್ಯಾಡಿದ್ರು. ಬಿಜೆಪ್ಯಾರೂ ಇಂದಿಲ್ಲ ನಾಳೆ ಗೋಕಾಕ್‌ ಕರದಂಟು ಸಿಕ್ಕ ಸಿಗತೈತಿ ಅಂತೇಳಿ ಬಾಯಿ ತಕ್ಕೊಂಡು ಕುಂತಾರು. ಆದ್ರ ಕೈಗಿ ಬಂದ ತುತ್ತು ಯಾವಾಗ ಬಾಯಿಗಿ ಬಂದು ಬೀಳತೈತೋ ಗೊತ್ತಿಲ್ಲ.

ಆದರೂ ಹಠವಾದಿ ಯಡಿಯೂರಪ್ಪ ಪ್ರಯತ್ನ ನಿಲ್ಲಿಸಿಲ್ಲ ಅನಸ್ತೈತಿ. ನಾ ಆಪರೇಷನ್‌ ಮಾಡಾತಿಲ್ಲ ಅನಕೋಂತನ ಆನಂದ್‌ ಸಿಂಗ್‌ ರಾಜೀನಾಮೆ ಕೊಟ್ಟಾಗ ಆಷಾಢ ಮುಗಿದ್ರಾಗ ಅಧಿಕಾರ ಸಿಗ‌ತೈತಿ ಅಂತ ಒಳಗೊಳಗ ಖುಷಿಯಾಗಿ ತಿರುಗ್ಯಾಡಾಕತ್ತಾರು. ಅದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನ್ಯಾಗ ಕೆಲವು ಮಂದಿ ಫ‌ುಲ್ ಖುಷಿ ಆಗ್ಯಾರು. ಕಡಿಗೂ ರಾಜೀನಾಮೆ ಪರ್ವ ಶುರುವಾತು ಅಂತೇಳಿ ಸರ್ಕಾರದ ಜುಟ್ಟಾ ಹಿಡಕೊಂಡು ಕುಂತಾರನ ಅತೃಪ್ತರ ರಾಜೀನಾಮೆ ಕೊಟ್ಟಿರೋ ಖುಷಿಗೆ ಜನಾರ್ಧನ ಹೊಟೆಲ್ ಮಸಾಲಿ ದ್ವಾಸಿ ತಿಂದ್ರಂತ.

Advertisement

ಈ ಸರ್ಕಾರ ಉಳಿಬೇಕು ಅಂತ ಯಾರ್‌ ಬಯಸಾಕತ್ತಾರೋ, ಬೀಳಬೇಕು ಅಂತ ಯಾರು ಬಯಸಾಕತ್ತಾರೋ ತಿಳಿದಂಗ ಆಗೇತಿ. ಬಿಜೆಪ್ಯಾಗ ಕೆಲವು ಮಂದಿಗೆ ಇದ ಸರ್ಕಾರ ಇದ್ರೂ ಇರ್ವಾಲ್ತು, ಯಡಿಯೂರಪ್ಪಮುಖ್ಯಮಂತ್ರಿ ಆಗೂದು ಬ್ಯಾಡಾಗೇತಿ. ಹಿಂಗಾಗಿ ಇದ್ದಷ್ಟ ದಿನಾ ಇರ್ಲಿ ಸರ್ಕಾರ ಸೇಫ್ ಆಗಿರಲಿ ಅಂತ ಬಯಸಾಕತ್ತಾರು ಅಂತ ಅನಸ್ತೈತಿ. ಆದ್ರ ಸರ್ಕಾರದ ಭಾಗ ಆಗಿರೋ ಕಾಂಗ್ರೆಸ್‌ನ್ಯಾಗ ಕೆಲವು ಮಂದಿಗೆ ಈ ಸರ್ಕಾರ ಯಾವಾಗ ಹೊಕ್ಕೇತೋ ಅಂತ ಕಾಯಾಕತ್ತಾರು. ತಮ್ಮ ಪಕ್ಷದ ಎಂಎಲ್ಎಗೋಳು ರಾಜೀನಾಮೆ ಕೊಟ್ಟು ಸರ್ಕಾರ ಕೆಡವಾಕ ಓಡ್ಯಾಡಾಕತ್ತಾರು ಅಂತ ಗೊತ್ತಾದ ಮ್ಯಾಲೂ ಅಧ್ಯಕ್ಷರು ಲಂಡನ್‌ ಟೂರ್‌ ಹೊಕ್ಕಾರು ಅಂದ್ರ ಸರ್ಕಾರ ಉಳಿಲಿ ಅಂತ ಬಯಸ್ಯಾರೋ ಹೋದ್ರ ಹೋಗ್ಲಿ ಅಂತ ಮಜಾ ಮಾಡಾಕ್‌ ಹೋಗ್ಯಾರೋ ಯಾರಿಗೊತ್ತು. ಅಧಿಕಾರದಾಗ ಇರೋ ಸಿಎಂ ಅಮೆರಿಕ ಪ್ರವಾಸ ಮಾಡಾಕತ್ತಾರು, ನಾ ಯಾಕ್‌ ಮಾಡಬಾರ್ದು ಅಂತ ಹಠಕ್ಕ ಬಿದ್ದು ಲಂಡನ್ನಿಗೆ ಹೋಗ್ಯಾರು ಅಂತ ಕಾಣತೈತಿ. ಯಾಕಂದ್ರ ಆನಂದ್‌ಸಿಂಗ್‌ ರಾಜೀನಾಮೆ ನೀಡಿದ್ಕೂಡ್ಲೆ ಸಿಎಂನ ವಾಪಸ್‌ ಕರಸ್ರಿ ಅಂತ ದೊಡ್ಡ್ ಗೌಡ್ರಿಗಿ ಹೇಳಿದ್ರ, ನಮ್ಮ ಎಂಎಲ್ಎಗೋಳು ಯಾರೂ ಹೋಗುದಿಲ್ಲ. ಕಾಂಗ್ರೆಸ್ನ್ಯಾಗ ಸಮಸ್ಯೆ ಐತಿ. ನೀವ ನಿಮ್ಮ ಎಂಎಲ್ಎಗೋಳ್ನ ನೋಡ್ಕೋರಿ ಅಂತ ಹೇಳಿದ್ರಂತ, ಹಿಂಗಾಗಿ ಸಿಟ್ ಮಾಡ್ಕೊಂಡು ಹೋಗ್ಯಾರು ಅಂತು ಹೇಳಾಕತ್ತಾರು. ಸರ್ಕಾರ ಬಿದ್ರ ಸಾಕು ಅಂತೇಳಿ ಕಾಯಾಕತ್ತಿರೋ ಕಾಂಗ್ರೆಸ್‌ನ್ಯಾರಿಗೆ ಅತೃಪ್ತರ ನಡಿ ನೋಡಿ ತಲಿ ಕೆಟ್ ಹೋಗಿರತೈತಿ. ಶಾಸಕರು ರಾಜೀನಾಮೆ ಕೊಟ್ಟಾರು ಅಂತ ಟಿವ್ಯಾಗ ಬಿಗ್‌ ಬ್ರೇಕಿಂಗ್‌ ಬರಾಕತ್ತಿತ್ತು ಅಂದ್ರ ಒಳಗೊಳಕ ಖುಷಿಯಾಗಿರ್ತಾರು. ಕಾಲಭೈರೇಶ್ವರನ ಕಾಪಾಡ್ತಾನು ಅಂತ ಅರಾಮ್‌ ಅಮೆರಿಕದಾಗ ತಿರುಗಾಡಾಕತ್ತಿರೋ ಸಿಎಂ ಕುಮಾರಸ್ವಾಮಿ ಸಾಹೇಬ್ರು ಸುದ್ದಿ ಕೇಳಿ ಇಮಾನ ಹತ್ಯಾರಂತ. ಬರೂದ್ರಾಗ ಎಲ್ಲಿ ಮಾಜಿ ಅಕ್ಕಾರೋ ಅನ್ನುವಂಗಾಗೇತಿ. ಪಾಪ ಪರಮೇಶ್ವರ್‌ ಸಾಹೇಬ್ರು ಮಾತ್ರ ಸರ್ಕಾರಕ್ಕ ಏನೂ ಆಗಬಾರದು ಅಂತೇಳಿ ಇರೋ ಬರೋ ದೇವರಿಗೆಲ್ಲ ಹರಕಿ ಹೊತ್ಕೊಂಡು ಕುಂತಾರಂತ.

ಡಿಕೆ ಸಾಹೇಬ್ರಂತೂ ಸರ್ಕಾರ ಉಳಸಾಕತ್ತೇತಿ ಅಂತ ಗೊತ್ತಾದ್ಕೂಡ್ಲೆ ಎಲ್ಲಾ ನಾನ ಸರಿಪಡಸ್ತೇನಿ ಅಂತ ನಾಕ್‌ ಮಂದಿ ಕರಕೊಂಡು ಮನವೊಲಿಸೋ ಪ್ರಯತ್ನ ಮಾಡಿದ್ರು, ಜಾಸ್ತಿ ಮೈಮ್ಯಾಲ್ ಬಿದ್ದು ಏನಾರ ಮಾಡಾಕ ಹೋದ್ರ ಇಡಿಯಾರು ಬೆನ್‌ ಹತ್ತಾರು ಅನ್ನೋ ಹೆದರಿಕಿನೂ ಐತಿ ಅಂತ ಕಾಣತೈತಿ. ಈಗಿನ ಪರಿಸ್ಥಿತ್ಯಾಗ ಯಾರು ಯಾರ ಪರವಾಗಿ ನಡ್ಕೊಳ್ಳಾಕತ್ತಾರು ಅಂತ ಗೊತ್ತಾಗವಾಲ್ತು. ಲೋಕಸಭಾ ಎಲೆಕ್ಷ ್ಯನ್ಯಾಗ ಪಕ್ಷ ಸೋತಿದ್ಕ ರಾಹುಲ್ ಗಾಂಧೀನ ಅಧಿಕಾರ ಬಿಟ್ಟು ಕೈ ಕಟ್ಕೊಂಡು ಕುಂತಾರ ನಾ ಇದ್ದರ ಏನ್‌ ಮಾಡೋದು ಅಂತ ದಿನೇಶ್‌ ಗುಂಡೂರಾವ್‌ ಪ್ರವಾಸಕ್ಕ ಹೋಗ್ಯಾರೊ, ಏನು ರಾಹುಲ್ ಗಾಂಧೀನ ಅಧಿಕಾರ ಬಿಟ್ ಮ್ಯಾಲ್ ನಾ ಉಳದ್ರ ಮರ್ಯಾದಿ ಇರುದಿಲ್ಲ ಅಂತೇಳಿ ತಾವೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಾಕ್‌ ಸಿದ್ಧರಾಗೇ ಪ್ರವಾಸ ಕೈಗೊಂಡಾರೋ ಯಾರಿಗೊತ್ತು.

ಅಧಿಕಾರಕ್ಕಿಂತ ನೈತಿಕತೆ ದೊಡ್ಡದು ಅಂತ ರಾಹುಲ್ ಅಧ್ಯಕ್ಷ ಗಾದಿ ಬಿಟ್ಟು ಕುಂತಾರು. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಅಂದ್ರ ರಾಹುಲ್ ನಿರ್ಧಾರ ಮೆಚ್ಚುವಂಥಾದ್ದು. ರಾಹುಲ್ ಗಾಂಧಿ ಕುಟುಂಬ ರಾಜಕಾರಣದ ವ್ಯವಸ್ಥೆಯಿಂದ ಪಕ್ಷ ಹೊರಗ್‌ ಬರಬೇಕು ಅಂತ ಬಯಸಾಕತ್ತಾರು. ಆದ್ರ ಕಾಂಗ್ರೆಸ್‌ನ್ಯಾರಿಗಿ ಮಾತ್ರ ಆ ವ್ಯವಸ್ಥೆಯಿಂದ ಹೊರಗ ಬರಾಕ್‌ ಮನಸಿಲ್ಲ.

ಪಕ್ಷದ ಅಧಿಕಾರ ಗಾಂಧಿ ಕುಟುಂಬದಿಂದ ಬ್ಯಾರೇದಾರ ಕೈಯಾಗ ಹೋತು ಅಂದ್ರ ರಾಜ್ಯಕ್ಕೊಂದು ಸಾಮಂತ ಕಾಂಗ್ರೆಸ್‌ ಸಂಸ್ಥಾನಗೋಳು ಹುಟ್ಕೋತಾವು ಅನ್ನೋ ಹೆದರಿಕಿ ಕಾಂಗ್ರೆಸ್‌ನ್ಯಾರಿಗಿ ಐತಿ. ಈಗಾಗ್ಲೆ ಕಾಂಗ್ರೆಸ್‌ನಿಂದ ಒಡದು ಹೋಗಿರೋ ನಾಯಕರು ಪ್ರಾದೇಶಿಕ ಪಕ್ಷಾ ಕಟಗೊಂಡು ತಮ್ಮ ರಾಜ್ಯದಾಗ ಕಾಂಗ್ರೆಸ್‌ ಬೇರುಗೋಳು ಇಲ್ಲದಂಗ ಮಾಡ್ಯಾರು. ಅದ್ಕ ವಯಸಿನ್ಯಾಗ ತಮಗಿಂತ ಸಣ್ಣಾವ ಇದ್ರೂ, ತೊಂಬತ್ತರ ಇಳಿ ವಯಸಿನ್ಯಾಗು ಹೋಗಿ ರಾಹುಲ್ ಗಾಂಧಿ ಮುಂದ ಸೊಂಟಾ ಬಗ್ಗಿಸಿ ಕಾಲ್ ಬೀಳ್ಳೋ ಬುದ್ಧಿ ಬೆಳಸ್ಕೊಂಡಾರು. ರಾಹುಲ್ ಗಾಂಧಿ ಪದ ತ್ಯಾಗ ಪ್ರಜಾಪ್ರಭುತ್ವ ಉಳಿವಿಗೆ ಚೊಲೊ ಬೆಳವಣಿಗಿ ಅಂತನ ಹೇಳಬೇಕು. ಆದ್ರ, ಕಾಂಗ್ರೆಸ್‌ ದೃಷ್ಟಿಯಿಂದ ನೋಡಿದ್ರ ಸ್ವಲ್ಪಕಷ್ಟಾ ಆಗಬೌದು. ಯಾಕಂದ್ರ ಸದ್ಯಕ್ಕ ಕಾಂಗ್ರೆಸ್‌ ಸ್ಥಿತಿ ನೋಡಿದ್ರ ವೆಂಟಿಲೇಟರ್‌ ಇಲ್ಲದ ಉಸಿರಾಡೋದ ಕಷ್ಟ ಆದಂಗ ಆಗೇತಿ. ಹಂತಾದ್ರಾಗ ಅದ್ನೂ ತಗದ ಬಿಟ್ರ ಪಕ್ಷ ಜೀವಂತ ಇದ್ರೂ ಕೋಮಾದಾಗ ಬದುಕೂ ಸಾಧ್ಯತೆ ಐತಿ. ಈಗ ಯಾಡ್‌ ಎಲೆಕ್ಷ್ಯನ್ಯಾಗ ಕೇಂದ್ರದಾಗ ಬಿಜೆಪಿನ ಎದರಸಾಕ ಅಧಿಕೃತ ಪ್ರತಿಪಕ್ಷ ಇಲ್ಲದಂಗ ಆಗೇತಿ. ಸಂಸತ್ತಿನ್ಯಾಗ ಅಧಿಕೃತ ಪ್ರತಿಪಕ್ಷ ಇಲ್ಲಾ ಅಂದ್ರ ಪ್ರಜಾಪ್ರಭುತ್ವ ವೀಕ್‌ ಆಗೇತಿ ಅಂತ ಅರ್ಥ. ಪ್ರಬಲ ಆಡಳಿತ ಪಕ್ಷ ಅಧಿಕಾರಕ್ಕ ತರಬೇಕು ಅಂತ ಬಯಸೋದು ಎಷ್ಟು ಮುಖ್ಯಾನೋ, ಅಷ್ಟ ಸ್ಟ್ರಾಂಗ್‌ ಆಗಿರೋ ಪ್ರತಿಪಕ್ಷಾನೂ ಉಳಿಸಿಕೊಂಡು ಹೋಗೋದು ಪ್ರಬಲ ಪ್ರಜಾಪ್ರಭುತ್ವ ಬಯಸೋ ಪ್ರಜೆಗಳ ಜವಾಬ್ದಾರಿ ಅಂತ ಅನಸ್ತೈತಿ. ಯಾವಾಗ ಮತದಾರ ಭ್ರಮೆಗೊಳಗಾಗದ ವಿವೇಚನೆ ಬಳಸಿ ಮತ ಹಾಕ್ತಾನೋ ಅವಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಗಟ್ಟಿ ಅಕ್ಕೇತಿ ಅಂತ ಅನಸ್ತೈತಿ.

ಯಾಕಂದ್ರ ಬಹುಮತ ಪಡದ ಪಕ್ಷಾ ತನ್ನ ಬಜೆಟ್ನ್ಯಾಗ ಹೆಣ್ಮಕ್ಕಳಿಗೆ ಬಂಗಾರ ಬೆಲೆ ಜಾಸ್ತಿ ಮಾಡಿದ್ರ ಸರ್ಕಾರ ಸಾಮಾನ್ಯ ಜನರ ಪರವಾಗಿ ಐತಿ ಅಂತ ಹೆಂಗ್‌ ಹೇಳೂದು? ಬಂಗಾರ ರೇಟ್ ಜಾಸ್ತಿ ಮಾಡಿದ್ಕ ಈ ವರ್ಷದ ಖರೀದಿ ಮುಂದ್‌ ಹೋತು ಅಂತ ಒಳಗೊಳಗ ಖುಷಿ ಆದ್ರೂ, ಬಾಯಿ ಬಿಟ್ಟು ಹೇಳುವಂಗಿಲ್ಲ. ಯಾಕಂದ್ರ ಹನ್ಯಾಡ ಮಂದಿ ರಾಜೀನಾಮೆ ಕೊಟ್ಟು ಸರ್ಕಾರಾನ ಕೋಮಾದಾಗ ಇಟ್ಟಂಗ, ಖುಷಿಯಾಗೇತಿ ಅಂತ ಮಂದಿಮುಂದ ಹೇಳಿ ಕೋಮಾದಾಗ ಹೋಗೂದು ಯಾರಿಗೆ ಬೇಕಾಗೇತಿ.

•ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next