ಉಡುಪಿ: ಭಕ್ತಿ, ನೃತ್ಯ, ಹಾಡುಗಾರಿಕೆ ಒಳಗೊಂಡಿರುವ ತುಳಸೀ ಸಂಕೀರ್ತನೆ ಕಲೆ ಅಪೂರ್ವವಾಗಿದ್ದು, ನಶಿಸುತ್ತಿರುವ ಈ ಕಲೆಗೆ ಜೀವಕಲೆ ನೀಡುವ ತುಶಿಮಾಮ ಸಂಘಟನೆ ಪ್ರಯತ್ನ ಶ್ಲಾಘನಾರ್ಹ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ನುಡಿದರು.
ಸೋಮವಾರ ಮಧ್ವಮಂಟಪದಲ್ಲಿ ಪರ್ಯಾಯ ಪಲಿಮಾರು ಮಠ ಮತ್ತು ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ವತಿಯಿಂದ ಒಂದು ವಾರ ನಡೆಯುವ ತುಳಸೀ ಸಂಕೀರ್ತನೆ ಸಪ್ತಾಹ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ತುಳಸೀ ಕಟ್ಟೆ ಮನೆ ಎದುರಿಗೆ ಇದ್ದರೆ ಆರೋಗ್ಯ ಪ್ರಾಪ್ತಿಯಾಗುತ್ತದೆ. ಇಂಥ ವಿಶಿಷ್ಟ ಗುಣ ತುಳಸಿಗಿದೆ. ಬಹು ಮಹಡಿ ಕಟ್ಟಡ ಹಾಗೂ ಮನೆಯ ಎದುರಲ್ಲಿ ತುಳಸೀ ಕಟ್ಟೆ ನಿರ್ಮಾಣ ಮಾಡಿದರೆ ತುಶಿಮಾಮ ಸದಸ್ಯರು ಬಂದು ಸಂಕೀರ್ತನಾ ಸೇವೆ ನಡೆಸಿಕೊಡಲಿದ್ದಾರೆ ಎಂದರು.
ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಹಿರಿಯ ಸಾಹಿತಿ ಎ.ವಿ. ನಾವಡ, ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯುಗಪುರುಷದ ಭುವನಾಭಿರಾಮ ಉಡುಪ, ಉದ್ಯಮಿ ಶ್ರೀಪತಿ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ಕೃಷ್ಣರಾಜ ಸರಳಾಯ, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಕರ್ಣಾಟಕ ಬ್ಯಾಂಕ್ ಎಜಿಎಂ ಗೋಪಾಲಕೃಷ್ಣ ಸಾಮಗ, ತುಶಿಮಾಮ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಭಟ್ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಅರವಿಂದ ಆಚಾರ್ಯ ಸ್ವಾಗತಿಸಿದರು.
ಅ. 20: ಸಮಾರೋಪ
ಅ.20ರಂದು ಸಾಯಂಕಾಲ 3.30ಕ್ಕೆ ಸಮಾರೋಪ ನಡೆಯಲಿದೆ. ಪುರುಷ, ಮಹಿಳೆ ಹಾಗೂ ಬಾಲಕಿಯರ ಮೂರು ವಿಭಾಗದಲ್ಲಿ 25 ತಂಡಗಳು ಭಾಗವಹಿಸಲಿವೆ. ಪ್ರಥಮ ಬಹುಮಾನ 5 ಸಾವಿರ ರೂ., ದ್ವಿತೀಯ 3 ಸಾವಿರ, ತೃತೀಯ 2 ಸಾವಿರ ರೂ.ಹಾಗೂ ಪ್ರಶಸ್ತಿ ಫಲಕ ನೀಡಲಾಗುತ್ತದೆ.