Advertisement

ತಾಲೂಕು ಪಂಚಾಯತ್‌ ಅಪೂರ್ಣ ವಾಣಿಜ್ಯ ಸಂಕೀರ್ಣ ಉದ್ಘಾಟನೆ

10:27 PM Jul 13, 2019 | mahesh |

ಪುತ್ತೂರು: ಪುತ್ತೂರು ತಾ.ಪಂ. ವತಿಯಿಂದ ಮುಖ್ಯ ಕಚೇರಿಯ ಪಕ್ಕದಲ್ಲಿ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಾಣಿಜ್ಯ ಸಂಕೀರ್ಣವನ್ನು ಶನಿವಾರ ಉದ್ಘಾಟಿಸಲಾಯಿತು.

Advertisement

ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅವರು ಟೇಪ್‌ ಕತ್ತರಿಸಿ ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ್‌ ಎಸ್‌., 80 ಲಕ್ಷ ರೂ. ವೆಚ್ಚದಲ್ಲಿ ಕೆಳ ಅಂತಸ್ತು ಸೇರಿ ಒಟ್ಟು 4 ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿದೆ. ಸಭಾಭವನವನ್ನೂ ನಿರ್ಮಿಸಲಾಗುತ್ತದೆ. ಈಗಾಗಲೇ ಎರಡು ಅಂತಸ್ತು ನಿರ್ಮಾಣವಾಗಿದೆ. ಮುಂದೆ ಆಷಾಢ ಮಾಸ ಬರುವ ಹಿನ್ನೆಲೆಯಲ್ಲಿ, ಬೇಡಿಕೆಗಳು ಬಂದಿರುವ ಕಾರಣ ತುರ್ತಾಗಿ ಉದ್ಘಾಟನೆ ಇಟ್ಟುಕೊಳ್ಳಲಾಗಿದೆ ಎಂದರು.

ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿಯ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ತಾ.ಪಂ. ಸ್ಥಾಯೀ ಸಮಿತಿಯ ಅಧ್ಯಕ್ಷ ಹರೀಶ್‌ ಬಿಜತ್ರೆ, ಜಿ.ಪಂ. ಸದಸ್ಯರಾದ ಶಯನಾ ಜಯಾನಂದ್‌, ಪ್ರಮೀಳಾ ಜನಾರ್ದನ, ತಾ.ಪಂ. ಮಾಜಿ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಪುಲಸ್ತಾ ರೈ, ಡಿ. ಶಂಭು ಭಟ್‌, ಭವಾನಿ ಚಿದಾನಂದ, ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಶಿವರಂಜನ್‌, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಮುಕುಂದ, ಸುಜಾತಾ, ತೇಜಸ್ವಿನಿ, ಮೀನಾಕ್ಷಿ ಮಂಜುನಾಥ್‌, ದಿವ್ಯಾ ಪುರುಷೋತ್ತಮ, ಲಲಿತಾ ಈಶ್ವರ್‌, ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಮೊದಲಾದವರು ಉಪಸ್ಥಿತರಿದ್ದರು.

ತರಾತುರಿಯ ಉದ್ಘಾಟನೆ
ವಾಣಿಜ್ಯ ಸಂಕೀರ್ಣದ ನೆಲ ಹಾಗೂ ಪ್ರಥಮ ಅಂತಸ್ತಿನ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ತಾ.ಪಂ. ಇಒ ವರ್ಗಾವಣೆಗೊಳ್ಳುತ್ತಿರುವುದು ಹಾಗೂ ಮುಂದೆ ಆಷಾಢ ಮಾಸ ಬರುವ ಕಾರಣ ನೀಡಿ ಶನಿವಾರ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಪ್ರಥಮ ಅಂತಸ್ತಿನ ಉದ್ಘಾಟನೆಯನ್ನು ತರಾತುರಿಯಲ್ಲಿ ಮಾಡಲಾಗಿದೆ ಎನ್ನುವ ವಿಚಾರ ಚರ್ಚೆಗೆ ಕಾರಣವಾಯಿತು.

ಅಪೂರ್ಣ ಕೆಲಸ
ತಾ.ಪಂ.ನ 60 ಲಕ್ಷ ರೂ. ಹಾಗೂ ಜಿ.ಪಂ.ನ 20 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆಯುತ್ತಿದ್ದು, ತಳ ಅಂತಸ್ತು ಹಾಗೂ ಪ್ರಥಮ ಅಂತಸ್ತಿನಲ್ಲಿ ಸುತ್ತು ಗೋಡೆಯ ಕೆಲಸ ಮಾತ್ರ ಆಗಿದೆ. ಒಳ ಕೊಠಡಿಗಳ ಗೋಡೆ ವ್ಯವಸ್ಥೆ, ಸಾರಣೆ, ಕಿಟಿಕಿ ಬಾಗಿಲುಗಳ ವ್ಯವಸ್ಥೆ, ವಿದ್ಯುತ್‌ ಸಂಪರ್ಕ, ಎದುರು ಭಾಗದಲ್ಲಿ ಮೆಟ್ಟಿಲು ವ್ಯವಸ್ಥೆ ಸಹಿತ ಕೆಲಸಗಳು ಆಗಿಲ್ಲ. ಆದರೂ ಅಪೂರ್ಣ ಸ್ಥಿತಿಯಲ್ಲಿರುವ ವಾಣಿಜ್ಯ ಸಂಕೀರ್ಣದ 1ನೇ ಅಂತಸ್ತಿನ ಉದ್ಘಾಟನೆ ನಡೆದಿದೆ.

Advertisement

ಅರೆಬರೆ ಕೆಲಸವಾಗಿರುವ ಕಟ್ಟಡ ವನ್ನು ಉದ್ಘಾಟನೆ ಮಾಡಿರುವ ತರಾತುರಿಯ ಔಚಿತ್ಯದ ಕುರಿತು ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಎದ್ದಿದೆ. ವಾಣಿಜ್ಯ ಸಂಕೀರ್ಣದ ತಳ ಹಾಗೂ ಪ್ರಥಮ ಅಂತಸ್ತಿನಲ್ಲಿ 20 ಕೋಣೆಗಳು ನಿರ್ಮಾಣ ವಾಗುತ್ತಿದ್ದು, ಕೋಣೆಗಳಿಗೆ ಸಾಕಷ್ಟು ಬೇಡಿಕೆಗಳು ಬಂದಿವೆ. ಬೇಡಿಕೆದಾರರ ಒತ್ತಡಕ್ಕೆ ಮಣಿದು ತಾ.ಪಂ. ಆಡಳಿತ ಆತುರದ ನಿರ್ಧಾರ ಕೈಗೊಂಡಿತೇ ಎಂಬ ಪ್ರಶ್ನೆಗಳು ಮೂಡಿವೆ. ಜಿ.ಪಂ.ನಿಂದ ಇನ್ನಷ್ಟೇ 20 ಲಕ್ಷ ರೂ. ಮಂಜೂರಾಗಬೇಕಿದೆ. ಉದ್ಘಾಟನ ಕಾರ್ಯಕ್ರಮದ ಕುರಿತು ಆಮಂತ್ರಣ ಪತ್ರವನ್ನೂ ಮಾಡಿಲ್ಲ. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಜಿ.ಪಂ. ಅಧ್ಯಕ್ಷರೂ ಇರಲಿಲ್ಲ.

ಏಲಂ ನಡೆಸಿಯೇ ಕೊಠಡಿ ನೀಡುತ್ತೇವೆ
ವಾಣಿಜ್ಯ ಸಂಕೀರ್ಣದ ಶಂಕುಸ್ಥಾಪನೆ ಮಾಡಿದ ಬಳಿಕ ಕಾಮಗಾರಿಯಲ್ಲಿ ಸಾಕಷ್ಟು ವಿಳಂಬವಾಗಿದೆ. 40 ಲಕ್ಷ ರೂ. ವೆಚ್ಚದಲ್ಲಿ ನೆಲ ಅಂತಸ್ತು ಮತ್ತು ಪ್ರಥಮ ಅಂತಸ್ತಿನ ಕೆಲಸ ಬಹುತೇಕ ಆಗಿದೆ. ಶೀಘ್ರದಲ್ಲಿ ಉಳಿದ ಕೆಲಸಗಳು ಪೂರ್ಣಗೊಳ್ಳಲಿವೆ. ಮುಂದೆ ಆಷಾಢ ಮಾಸ ಬರಲಿರುವುದರಿಂದ ಹಾಗೂ ತಾ.ಪಂ. ಇಒ ಜಗದೀಶ್‌ ಎಸ್‌. ಅವರಿಗೆ ವರ್ಗಾವಣೆ ಆದೇಶ ಬಂದಿರುವುದರಿಂದ ತುರ್ತಾಗಿ ಈ ಉದ್ಘಾಟನೆ ಇಟ್ಟುಕೊಳ್ಳಲಾಗಿದೆ. ತಾ.ಪಂ.ಗೆ ಆದಾಯದ ದೃಷ್ಟಿಯಿಂದ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದ್ದು, ನಿಯಮದಂತೆ ಏಲಂ ಪ್ರಕ್ರಿಯೆ ನಡೆಸಿಯೇ ಕೊಠಡಿಗಳನ್ನು ನೀಡಲಾಗುವುದು.
– ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷರು, ತಾ. ಪಂ., ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next