ಕಾಸರಗೋಡು: ಪೆರುಂಬಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಕಂದಾಯ ಸಚಿವ ಇ. ಚಂದ್ರಶೇಖರನ್ ನೆರವೇರಿಸಿದರು. ಸಮಾಜದ ಸೃಜನಾತ್ಮಕ ಏಳಿಗೆಯಲ್ಲಿ ಶಿಕ್ಷಣಾಲಯಗಳ ಪಾತ್ರ ಪ್ರಧಾನವಾಗಿದೆ ಎಂದವರು ಈ ವೇಳೆ ಅಭಿಪ್ರಾಯಪಟ್ಟರು. ಕೋವಿಡ್ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಸುಧಾರಿತ ವಾತಾವರಣ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
4 ವರ್ಷದ ಅವಧಿಯಲ್ಲಿ 5 ಲಕ್ಷಕ್ಕೂ ಅಧಿಕ ಮಕ್ಕಳು ಸಾರ್ವಜನಿಕ ಶಿಕ್ಷಣ ವಲಯಕ್ಕೆ ಪಾದಾರ್ಪಣೆ ನಡೆಸಿದ್ದಾರೆ. ಪ್ರಬುದ್ಧರಾದ ಶಿಕ್ಷಕ ವೃಂದ ಮತ್ತು ಅತ್ಯಾಧುನಿಕ ತತಂತ್ರಜ್ಞಾನ ಸಹಿತದ ಶಿಕ್ಷಣ ಸಾರ್ವಜನಿಕ ಶಿಕ್ಷಣಾಲಯಗಳ ಏಳಿಗೆಗೆ ಪ್ರಧಾನ ಕಾರಣ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 45 ತರಗತಿಗಳು ಸ್ಮಾರ್ಟ್ ಕ್ಲಾಸ್‌ಗಳಾಗಿ ಭಡ್ತಿ ಪಡೆದಿವೆ. ಈ ವಿಚಾರ ಇನ್ನೂ ಮುಂದುವರಿಯಲಿದೆ ಎಂದರು.
ಕೋವಿಡ್ ಕಟ್ಟುನಿಟ್ಟಿನ ಹಿನ್ನೆಲೆಯಲ್ಲಿ ಸಮಾರಂಭ ಜರಗಿತು. ಶಾಸಕ ಕೆ. ಕುಂಞರಾಮನ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸಿ.ಎಂ. ಷಾಸಿಯಾ, ಸದಸ್ಯರಾದ ಕರುಣಾಕರನ್, ಎನ್.ವಿ.ಬಾಲನ್, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಸೆಬಾಸ್ಟಿನ್ ಮಂಥೆರೋ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಟಿ.ವಿನೋದ್ ಕುಮಾರ್, ಹಿರಿಯ ಸಹಾಯಕ ಶಿಕ್ಷಕಿ ಯು. ಗೀತಾ ಉಪಸ್ಥಿತರಿದ್ದರು. ಲೋಕೋಪಯೋಗಿ ಕಾರ್ಯಕಾರಿ ಎಂಜಿನಿಯರ್ ಎಂ.ವಿ. ಸಂತೋಷ್ ವರದಿ ವಾಚಿಸಿದರು.
ಶಾಸಕ ಕೆ. ಕುಂಞಿರಾಮನ್ ಅವರ ಸ್ಥಳೀಯ ಅಭಿವೃದ್ಧಿ ನಿಧಿಯಿಂದ 30 ಲಕ್ಷ ರೂ. ಮಂಜೂರು ಗೊಳಿಸಲಾಗಿದ್ದು, 23.90 ಲಕ್ಷ ರೂ.ನಲ್ಲಿ ಈ ನೂತನ ಕಟ್ಟಡ ನಿರ್ಮಿಸಲಾಗಿದೆ. 4 ತರಗತಿ ಕೊಠಡಿಗಳಿರುವ ನೂತನ ಕಟ್ಟಡಕ್ಕೆ 2018 ಸೆಪ್ಟಂಬರ್ ತಿಂಗಳಲ್ಲಿ ಶಿಲಾನ್ಯಾಸ ನಡೆಸಲಾಗಿತ್ತು. ಕಳೆದ ಮಾರ್ಚ್ ತಿಂಗಳಲ್ಲಿ ನಿರ್ಮಾಣ ಪೂರ್ತಿಗೊಂಡಿದ್ದರೂ ಕೋವಿಡ್ ಸಂಹಿತೆಗಳ ಹಿನ್ನೆಲೆಯಲ್ಲಿ ಉದ್ಘಾಟನೆ ಸಮಾರಂಭವನ್ನು ಮುಂದೂಡಲಾಗಿತ್ತು.
1956ರಲ್ಲಿ ಸ್ಥಾಪನೆಗೊಂಡಿದ್ದ ಈ ಶಾಲೆಯಲ್ಲಿ ಹಳೆಯ ಕಟ್ಟಡ ಮತ್ತು ಸಭಾಂಗಣ ಮಾತ್ರವಿತ್ತು. ಈ ಕಟ್ಟಡದಲ್ಲಿ 4 ತರಗತಿ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಶಿಕ್ಷಕರ ಕೊಠಡಿ, ಎಲ್.ಕೆ.ಜಿ., ಯು.ಕೆ.ಜಿ. ಸಹಿತ ತರಗತಿಗಳೂ ಚಟುವಟಿಕೆ ನಡೆಸುತ್ತಿದ್ದುವು. ನೂತನ ಕಟ್ಟಡದಲ್ಲಿ ಚಟುವಟಿಕೆ ಆರಂಭಿಸಿರುವ ಹಿನ್ನೆಲೆಯಲ್ಲಿ ಕಲಿಕೆಗೆ ಹೆಚ್ಚುವರಿ ಸೌಲಭ್ಯ ಒದಗಿದೆ.