Advertisement

ಸುರತ್ಕಲ್‌ನ ನಿರ್ಮಿತಿ ಕೇಂದ್ರದಲ್ಲಿ ಪ್ರತ್ಯೇಕ ಉಚಿತ ಸಲಹಾ ಕೇಂದ್ರ ಆರಂಭ

12:17 AM Jul 03, 2019 | mahesh |

ಮಹಾನಗರ: ಮಳೆ ನೀರಿನ ಸಂರಕ್ಷಣೆ ಮೂಲಕ ಜಲ ಸಾಕ್ಷರತೆ ಕಡೆಗೆ ಜನರನ್ನು ಪ್ರೇರೇಪಿಸುವ ಹಾಗೂ ಜಾಗೃತಗೊಳಿಸುವ ನಿಟ್ಟಿನಲ್ಲಿ ಉದಯವಾಣಿ ಕೈಗೆತ್ತಿಕೊಂಡಿರುವ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಈಗ ನಿರೀಕ್ಷೆಗೂ ಮೀರಿದ ಜನ ಸ್ಪಂದನೆಯೊಂದಿಗೆ ಮುಂದುವರಿಯುತ್ತಿದೆ.

Advertisement

ಒಂದೆಡೆ ಮಳೆ ಕೊಯ್ಲು ಅಳವಡಿಸಿಕೊಳ್ಳುವುದಕ್ಕೆ ತೀರ್ಮಾನ ತೆಗೆದುಕೊಂಡು ಆ ಬಗ್ಗೆ ಅಗತ್ಯ ಮಾಹಿತಿ ಕೋರಿ ಕಚೇರಿ ಮೊಬೈಲ್ಗೆ ಬರುತ್ತಿರುವ ಕರೆಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇನ್ನೊಂದೆಡೆ ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಶುರುವಾದ ಬಳಿಕ ನೀರಿನ ವಾಸ್ತವ ಪರಿಸ್ಥಿತಿಯನ್ನು ಅರಿತು ತುರ್ತಾಗಿ ಅದನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ಆ ಮಾಹಿತಿಯನ್ನು ಪತ್ರಿಕೆಗೆಗೆ ಕಳುಹಿಸಿಕೊಡುತ್ತಿರುವವರೂ ಹೆಚ್ಚಾಗುತ್ತಿದ್ದಾರೆ.

ಮಳೆಕೊಯ್ಲು ಅಭಿಯಾನವನ್ನು ಬೆಂಬಲಿಸಿ ಹಾಗೂ ಅದಕ್ಕೆ ಪೂರಕವಾಗಿ ಈಗ ಹಲವು ಕಡೆಗಳಲ್ಲಿ ಸ್ಥಳೀಯವಾಗಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳು ಹಾಗೂ ಯುವ ಸಮೂಹದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲು ಕೆಲವೊಂದು ವಿದ್ಯಾಸಂಸ್ಥೆಗಳು, ಸಮಾಜ ಸೇವೆ ಹಾಗೂ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು ಕೂಡ ಮುಂದಾಗಿವೆ.

ಸುರತ್ಕಲ್ನಲ್ಲಿ ಮಾಹಿತಿ ಕೇಂದ್ರ
ಉದಯವಾಣಿಯ ಮಳೆಕೊಯ್ಲು ಅಭಿಯಾನವನ್ನು ಜಿಲ್ಲೆಯಾದ್ಯಂಥ ಅನುಷ್ಠಾನಗೊಳಿಸುವಲ್ಲಿ ಬಹಳ ಮುತುವರ್ಜಿಯಿಂದ ಕಾರ್ಯಪ್ರವೃತವಾಗುವ ಮೂಲಕ ಜನರಿಗೆ ಆ ಬಗ್ಗೆ ಪರಿಪೂರ್ಣ ಮಾಹಿತಿ ಒದಗಿಸುತ್ತಿರುವುದು ನಿರ್ಮಿತಿ ಕೇಂದ್ರದವರು. ಈ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ರಾವ್‌ ಕಲ್ಬಾವಿ ಹಾಗೂ ಅವರ ತಾಂತ್ರಿಕ ಪರಿಣತರ ತಂಡವು ದಿನವಿಡೀ ಕೆಲಸ ಮಾಡುತ್ತಿದೆ. ಸಾರ್ವಜನಿಕರಿಂದ ಮಳೆಕೊಯ್ಲಿನ ಬಗ್ಗೆ ಮಾಹಿತಿ ಕೋರಿ ಹೆಚ್ಚಿನ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಸುರತ್ಕಲ್ನ ನಿರ್ಮಿತಿ ಕೇಂದ್ರದ ಆವರಣದಲ್ಲಿ ಈಗ ಮಳೆ ಕೊಯ್ಲಿನ ಬಗ್ಗೆಯೇ ಸಮಗ್ರ ಮಾಹಿತಿ ಒದಗಿಸುವ ಪ್ರತ್ಯೇಕ ಸಲಹಾ ಕೇಂದ್ರ ತೆರೆಯಲಾಗಿದೆ. ಆಸಕ್ತರು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಈ ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಬಹುದು.

ಉದಯವಾಣಿಯ ಅಭಿಯಾನದಿಂದ ಮಳೆಕೊಯ್ಲು ಅಳವಡಿಕೆ ಬಗ್ಗೆ ಸಾರ್ವಜನಿಕರ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರತ್ಕಲ್ನ ನಿರ್ಮಿತಿ ಕೇಂದ್ರದ ಆವರಣದಲ್ಲಿ ಸ್ಥಾಪಿಸಲಾಗಿರುವ ಉಚಿತ ಮಳೆಕೊಯ್ಲು ಸಲಹಾ ಕೇಂದ್ರ.

Advertisement

ಹಳೆಯಂಗಡಿಯ ಕಲ್ಲಾಪುವಿನ ಪ್ರವೀಣ್‌ ಕುಮಾರ್‌ ಬಿ.ಎನ್‌. ಅವರು ಕಳೆದ ಹತ್ತು ದಿನಗಳ ಹಿಂದೆ ಮಳೆಕೊಯ್ಲು ವಿಧಾನವನ್ನು ಅಳವಡಿಸಿದ್ದಾರೆ. ಎನ್‌ಐಟಿಕೆಯಲ್ಲಿರುವ ನಿರ್ಮಿತಿ ಕೇಂದ್ರದ ಪರಿಣಿತರಿಂದ ಮಾಹಿತಿ ಪಡೆದು ಈ ವಿಧಾನವನ್ನು ಅಳವಡಿಸಿದ್ದಾರೆ.

ಪ್ರವೀಣ್‌ ಅವರ ಮನೆಯಲ್ಲಿ ಈ ವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಈ ವೇಳೆ ನೆರೆಹೊರೆಯವರ ಮನೆಯಿಂದ ಕುಡಿಯುವ ಉದ್ದೇಶಕ್ಕೆ ನೀರು ಉಪಯೋಗಿಸುತ್ತಿದ್ದರು. ಇದೇ ಕಾರಣಕ್ಕೆ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿ ಮಳೆ ನೀರನ್ನು ಹಿಡಿದಿಟ್ಟುಕೊಂಡು ಬಾವಿಗೆ ಬಿಡುತ್ತಿದ್ದಾರೆ.

ಮೇಲ್ಫಾವಣಿಯಲ್ಲಿ ಬಿದ್ದ ಮಳೆ ನೀರು ಪೈಪ್‌ ಮುಖೇನ ಬಾವಿಗೆ ಬಿಡಲಾಗಿದೆ. ಬಾವಿ ಪಕ್ಕದಲ್ಲಿ ಫಿಲ್ಟರ್‌ ವ್ಯವಸ್ಥೆ ಅಳವಡಿಸಿದ್ದಾರೆ. ಮೊದಲೆರಡು ಮಳೆ ನೀರು ಶುದ್ಧವಾಗಿರದ ಕಾರಣ ಅದನ್ನು ಹೊರ ಬಿಡಲು ಪೈಪ್‌ ಮುಖೇನ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಹೊಸ ಮನೆಯಲ್ಲಿ ಮಳೆಕೊಯ್ಲು
ಕೊಲ್ಯದ ಪ್ರವೀಣ್‌ ಕುಮಾರ್‌ ಅವರು ಒಂದು ತಿಂಗಳ ಹಿಂದೆ ನಿರ್ಮಿಸಿದ ಹೊಸ ಮನೆಯಲ್ಲಿ ಮಳೆ ನೀರು ಕೊಯ್ಲು ಅಳವಡಿಸಿದ್ದಾರೆ.

ಮನೆ ನಿರ್ಮಾಣ ಮಾಡುವ ವೇಳೆ ಬಾವಿ ತೋಡಿದ್ದು, ಬಾವಿಯಲ್ಲಿ ಸ್ವಲ್ಪವೂ ನೀರಿರಲಿಲ್ಲ. ಕೆಲವು ದಿನಗಳವರೆಗೆ ಪಕ್ಕದ ಮನೆಯ ಬಾವಿಯಿಂದ ನೀರು ತೆಗೆದುಕೊಂಡು ಬಂದಿದ್ದಾರೆ. ಬಳಿಕ, ಪರಿಚಯದವರೊಬ್ಬರು ಮಳೆಕೊಯ್ಲು ಅಳವಡಿಸುವ ಸಲಹೆ ನೀಡಿದರಂತೆ. ಅದರ ಪ್ರಕಾರ ಕಳೆದ ಹತ್ತು ದಿನಗಳ ಹಿಂದೆ ಮಳೆಕೊಯ್ಲು ಅಳವಡಿಸಿದ್ದಾರೆ. ಮನೆಯ ಮೇಲ್ಛಾವಣಿಯ ನೀರು ಪೈಪ್‌ ಮುಖೇನ ಫಿಲ್ಟರ್‌ ಆಗಿ ಬಾವಿಗೆ ಬೀಳುತ್ತದೆ. ಒಂದೆರಡು ಮಳೆ ಬಂದ ಕಾರಣ, ಈಗ ಬಾವಿಯಲ್ಲಿ ನೀರು ಮೇಲೆ ಬಂದಿದೆ. ಮನೆಗೆಲಸಗಳಿಗೆ ಅದೇ ನೀರನ್ನು ಉಪಯೋಗ ಮಾಡುತ್ತಿದ್ದಾರೆ.

ಉಪ್ಪು ನೀರಿದ್ದ ಬೋರ್‌ವೆಲ್‌ನಲ್ಲಿ ಸಿಹಿ ನೀರು
ಕುದ್ರೋಳಿಯ ಸುನಿಲ್ ಕರ್ಕೇರ ಅವರ ಮನೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಇದರೊಂದಿಗೆ ಮುಂಬರುವ ಬೇಸಗೆಯಲ್ಲಿ ನೀರಿನ ಅಭಾವವಿರದೆಂಬ ನಿರೀಕ್ಷೆಯಲ್ಲಿದ್ದಾರೆ.

ಸುನಿಲ್ ಅವರ ಮನೆಯಲ್ಲಿ ಎರಡು ಬೋರ್‌ವೆಲ್ಗಳಿವೆ. ಅದರಲ್ಲಿ ಒಂದು ಬೋರ್‌ವೆಲ್ ಬತ್ತಿದೆ. ಮನೆ ಹತ್ತಿರದಲ್ಲಿಯೇ ಸಮುದ್ರವಿರುವ ಕಾರಣ ಮತ್ತೂಂದು ಕೊಳವೆ ಬಾವಿಯಲ್ಲಿ ಮಾರ್ಚ್‌ ವೇಳೆಗೆ ನೀರು ಉಪ್ಪಿನಿಂದ ಕೂಡಿರುತ್ತದೆ. ಈಗ ಎರಡೂ ಕೊಳ ಬಾವಿಗೆ ಮಳೆನೀರು ಕೊಯ್ಲು ಸಂಪರ್ಕ ಅಳವಡಿಸಿದ್ದಾರೆ. ಮನೆಯ ಮೇಲ್ಫಾವಣಿ ನೀರು ಪೋಲಾಗಲು ಬಿಡದೆ, ಪೈಪ್‌ ಮುಖೇನ ಫಿಲ್ಟರ್‌ ಆಗಿ ಬೋರ್‌ವೆಲ್ಗೆ ಬೀಳುತ್ತದೆ. ಈಗ ನೀರಿನಲ್ಲಿ ಉಪ್ಪಿನ ಅಂಶ ಹೋಗಿದೆ. ಇನ್ನು, ಬತ್ತಿದ ಬೋರ್‌ವೆಲ್ನಲ್ಲಿ ಕೂಡ ನೀರು ಕಾಣಿಸಿಕೊಂಡಿದೆ. ಈ ಬಗ್ಗೆ ಸುನಿಲ್ ಅವರು ಪ್ರತಿಕ್ರಿಯಿಸಿ ‘ಉದಯವಾಣಿ ಹಮ್ಮಿಕೊಂಡಿದ್ದ ಮನೆ ಮನೆಗೆ ಮಳೆಕೊಯ್ಲು ಅಭಿಯಾನದಲ್ಲಿ ನಾನು ಭಾಗವಹಿಸಿದ್ದೆ. ನಾನು ಪ್ಲಂಬರ್‌ ಆಗಿದ್ದ ಕಾರಣ, ಮರುದಿನವೇ ನನ್ನ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದೆ. ಅಲ್ಲದೆ, ನನ್ನ ಸ್ನೇಹಿತರಿಗೂ ಈ ಬಗ್ಗೆ ತಿಳಿಸಿದ್ದು, ಅವರು ಕೂಡ ಈ ವ್ಯವಸ್ಥೆ ಅಳವಡಿಸಲು ಮುಂದಾಗಿದ್ದಾರೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next