ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಜಲಕ್ಷಾಮಕ್ಕೆ ಕೊಳವೆಬಾವಿ ಮಾತ್ರವೇ ಸೂಕ್ತ ಪರಿಹಾರ ಎಂದು ತಿಳಿದುಕೊಂಡವರು ಇದೀಗ ಅಲ್ಪ ಬದಲಾಗಿ ಚಿಂತಿಸಲು ಆರಂಭಿಸಿರುವುದು ಜಿಲ್ಲೆಯ ಮಟ್ಟಿಗೆ ಉತ್ತಮ ಬೆಳವಣಿಗೆಯಾಗಿದೆ. ಬತ್ತುವ ಬಾವಿಗಳಲ್ಲಿ ಬೇಸಿಗೆಯಲ್ಲೂ ಒರತೆ ಉಳಿದುಕೊಳ್ಳುವಂತೆ ಮಾಡುವ ಸಲುವಾಗಿ ಮಳೆನೀರು ಇಂಗಿಸುವುದಕ್ಕೆ ಜಿಲ್ಲಾ ಪಂಚಾಯತ್ ಹಿಂದಿಗಿಂತಲೂ ಇದೀಗ ಹೆಚ್ಚು ಒತ್ತು ಕೊಡುತ್ತಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಜೊತೆ ಸೇರಿ ಮಳೆನೀರು ಬಾವಿಗಿಳಿಯುವಂತೆ ಮಾಡುವುದಕ್ಕೆ ಯೋಜನೆ ಹಾಕಲಾಗಿದೆ.
ಜಿಲ್ಲೆಯ ಪಳ್ಳಿಕ್ಕೆರೆ, ಅಜಾನೂರು, ತೃಕ್ಕರಿಪುರ, ಕಯ್ಯೂರು – ಚೀಮೇನಿ, ಮಡಿಕೈ, ಚೆರ್ವತ್ತೂರು ಗ್ರಾಮ ಪಂಚಾಯತ್‌ಗಳಲ್ಲಿ, ಕಾಂಞಂಗಾಡು ನಗರಸಭೆಯಲ್ಲಿ ಈ ವರ್ಷ ಪ್ರಸ್ತುತ ಯೋಜನೆಯು ಸಮಗ್ರವಾಗಿ ಜಾರಿಗೆ ಬರಲಿದೆ. ಮನೆಯ ತಾರಸಿಗೆ ಬೀಳುವ ಮಳೆನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಿ ಬಾವಿಗೆ ತಲುಪುವಂತೆ ಮಾಡುವುದೇ ಬಾವಿ ರೀಚಾರ್ಜಿಂಗ್ ಯೋಜನೆಯಾಗಿದೆ.
ಈ ರೀತಿ ಮಳೆನೀರನ್ನು ಸಂಗ್ರಹಿಸಿಡಲು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸಲಿವೆ. ರಾಜ್ಯ ಸರಕಾರದ ಆರ್ಥಿಕ ಸಹಕಾರವೂ ಲಭ್ಯವಾಗಲಿದೆ. ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರನ್ನು ಬಳಸಿಕೊಂಡು ಭೂಗರ್ಭ ಜಲ, ಕೃಷಿ, ಮಣ್ಣು ಸಂರಕ್ಷಣೆ ಇಲಾಖೆ, ಬಡತನ ನಿರ್ಮೂಲನ ಮಿಶನ್, ಕುಟುಂಬಶ್ರೀ ಇವುಗಳ ಸಹಕಾರದೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಒಂದು ಬಾವಿಗೆ 5,000ರೂ. ವರೆಗೆ ಸಹಾಯ ದೊರಕಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವೆಚ್ಚವನ್ನು ಫಲಾನುಭವಿಯೇ ಭರಿಸಬೇಕಾಗಿದೆ. ಬಾವಿಯನ್ನು ರೀಚಾರ್ಜ್ ಮಾಡುವುದಕ್ಕೆ ಕುಟುಂಬಶ್ರೀ ಸದಸ್ಯೆಯರಿಗೆ ತರಬೇತಿ ನೀಡಲಾಗಿದೆ.
ಆಯಾ ಪ್ರದೇಶದ ಕುಟುಂಬಶ್ರೀ ಘಟಕಗಳು ಈ ಯೋಜನೆಯನ್ನು ಜಾರಿಗೊಳಿಸಲಿವೆ.2017-18ನೇ ವರ್ಷದ ಯೋಜನೆಗಳಲ್ಲಿ ಕೆಲವು ಮನೆಗಳಿಗೆ ಮಾತ್ರವೇ ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಾಗಿದ್ದು, ಇಲ್ಲಿನ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಿರುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷ ತೆರೆದ ಬಾವಿ ರೀಚಾರ್ಜ್, ಕೊಳವೆಬಾವಿ ರೀಚಾರ್ಜ್ ಮೊದಲಾದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.