Advertisement

ಮುಕ್ತ ವಿವಿ 31 ಕೋರ್ಸ್‌ ಮಾನ್ಯ, ನಾಡಿದ್ದಿನಿಂದ ಪ್ರವೇಶ

06:15 AM Oct 05, 2018 | Team Udayavani |

ಮೈಸೂರು: ಎಲ್‌ಎಲ್‌ಎಂ ಹೊರತುಪಡಿಸಿ ಹೆಚ್ಚುವರಿಯಾಗಿ 14 ಕೋರ್ಸ್‌ ಸೇರಿದಂತೆ ಒಟ್ಟು 31 ಕೋರ್ಸ್‌ಗಳನ್ನು ಆರಂಭಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ವಿಶ್ವ ವಿದ್ಯಾನಿಲಯಗಳ ಧನ ಸಹಾಯ ಆಯೋಗ (ಯುಜಿಸಿ) ಅನುಮತಿ ನೀಡಿದ್ದು, ಅ.7ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018-19ನೇ ಸಾಲಿನಿಂದ 2022-23ನೇ ಸಾಲಿನ ಐದು ವರ್ಷಗಳ ಅವಧಿಗೆ ಮಾನ್ಯತೆ ನೀಡಿರುವ ಯುಜಿಸಿ, 17 ಅಂತರ್‌ ಗೃಹ ತಾಂತ್ರಿಕೇತರ ಕೋರ್ಸ್‌ಗಳನ್ನು ಆರಂಭಿಸಲು ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ದಾಖಲಾತಿ ನಡೆಯುತ್ತಿದ್ದು, ಈ 17 ಕೋರ್ಸ್‌ಗಳಿಗೆ ಈವರೆಗೆ ಸುಮಾರು 9 ಸಾವಿರ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ ಎಂದು ಹೇಳಿದರು.

ಪ್ರವೇಶಾತಿಗೆ ನಿಗದಿಪಡಿಸಿದ್ದ ಅಂತಿಮ ದಿನಾಂಕವನ್ನು ಅ.20ರವರೆಗೆ ವಿಸ್ತರಿಸಲಾಗಿದೆ. ಮುಕ್ತ ವಿವಿಯ ಕೇಂದ್ರ ಕಚೇರಿ ಮತ್ತು ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ರಜಾ ದಿನಗಳೂ ಸೇರಿದಂತೆ ಎಲ್ಲಾ ದಿನಗಳಲ್ಲಿ ಪ್ರವೇಶಾತಿ ನೀಡಲಾಗುತ್ತಿದೆ. 

ಕೋರ್ಸ್‌ಗಳ ವಿವರ: 
ನಿಯಂತ್ರಕ ಸಂಸ್ಥೆಗಳ ಪೂರ್ವಾನುಮತಿ ಮತ್ತು ಅಧ್ಯಾಪಕರ ಕೊರತೆಯ ಕಾರಣಗಳಿಂದಾಗಿ ಈ ಹಿಂದೆ ಅನುಮತಿ ನೀಡದಿದ್ದ ಬಿ.ಇಡಿ, ಎಂ.ಬಿ.ಎ, ಎಂ.ಎ (ಸಂಸ್ಕೃತ), ಎಂಎಸ್ಸಿ (ಜೀವ ರಸಾಯನ ಶಾಸ್ತ್ರ), ಎಂಎಸ್ಸಿ (ಜೈವಿಕ ತಂತ್ರಜ್ಞಾನ), ಎಂಎಸ್ಸಿ (ಕ್ಲಿನಿಕಲ್‌ ನ್ಯೂಟ್ರಿಷನ್‌ ಮತ್ತು ಡಯಟಿಟಿಕ್ಸ್‌), ಎಂಎಸ್ಸಿ(ಗಣಕ ವಿಜ್ಞಾನ), ಎಂಎಸ್ಸಿ (ಭೂಗೋಳ ಶಾಸ್ತ್ರ), ಎಂಎಸ್ಸಿ (ಮಾಹಿತಿ ವಿಜ್ಞಾನ), ಎಂಎಸ್ಸಿ (ಗಣಿತ ಶಾಸ್ತ್ರ), ಎಂಎಸ್ಸಿ(ಸೂಕ್ಷ್ಮ ಜೀವಶಾಸ್ತ್ರ), ಎಂಎಸ್ಸಿ(ಭೌತಶಾಸ್ತ್ರ) ಹಾಗೂ ಎಂಎಸ್ಸಿ (ಮನೋ ವಿಜ್ಞಾನ)ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ನೀಡಿದೆ. ಇದರೊಂದಿಗೆ ಮುಕ್ತ ವಿವಿಯ 32 ಕೋರ್ಸ್‌ಗಳ ಪೈಕಿ 31 ಕೋರ್ಸ್‌ಗಳಿಗೆ ಮಾನ್ಯತೆ ಸಿಕ್ಕಂತಾಗಿದೆ. ಎಲ್‌ಎಲ್‌ಎಂ ಕೋರ್ಸ್‌ಗೂ ಮಾನ್ಯತೆ ಪಡೆಯಲು ಪ್ರಯತ್ನ ಮುಂದುವರಿಸಲಾಗುವುದು ಎಂದರು.

7ರಿಂದ ಪ್ರವೇಶ ಪ್ರಕ್ರಿಯೆ:
14 ಕೋರ್ಸ್‌ಗಳಿಗೂ ಅ.20ರೊಳಗೆ ಪ್ರವೇಶಾತಿ ಪೂರ್ಣಗೊಳಿಸುವಂತೆ ಹೇಳಿರುವುದರಿಂದ ಅ.7ರಿಂದ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗುವುದು. ಬಿ.ಇಡಿ ಮತ್ತು ಎಂ.ಬಿ.ಎ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ, ರೋಸ್ಟರ್‌ ಪಾಲನೆ ಮಾಡಬೇಕಿರುವುದರಿಂದ ಈ ಎರಡು ಕೋರ್ಸ್‌ಗಳನ್ನು ಜನವರಿ ಶೈಕ್ಷಣಿಕ ವರ್ಷದಿಂದ ಆರಂಭಿಸಲಾಗುವುದು ಎಂದರು.

Advertisement

ಪ್ರಸ್ತುತ ನಡೆಯುತ್ತಿರುವ 17 ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಎಂ.ಕಾಂಗೆ ಅತಿ ಹೆಚ್ಚು 1300 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಉಳಿದಂತೆ ಬಿ.ಎ, ಬಿ.ಕಾಂ, ಎಂ.ಎ (ಕನ್ನಡ), ಎಂ.ಎ (ಇತಿಹಾಸ), ಎಂ.ಎ (ಅರ್ಥಶಾಸ್ತ್ರ)ಕೋರ್ಸ್‌ಗಳಿಗೆ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಒಟ್ಟಾರೆ ಈ ಶೈಕ್ಷಣಿಕ ಸಾಲಿನಲ್ಲಿ 15 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

2013-14 ಮತ್ತು 2014-15ನೇ ಸಾಲಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಯುಜಿಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಯುಜಿಸಿ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ. ಅಗತ್ಯಬಿದ್ದರೆ ಕಾನೂನು ಹೋರಾಟವನ್ನೂ ಮಾಡುವ ಮೂಲಕ ಹಳೆ ವಿದ್ಯಾರ್ಥಿಗಳ ಹಿತಾಸಕ್ತಿ ಕಾಪಾಡಲು ಮುಕ್ತ ವಿವಿ ಬದ್ಧವಾಗಿದೆ ಎಂದರು.

ಗೋಷ್ಠಿಯಲ್ಲಿ ಮುಕ್ತ ವಿವಿ ಕುಲ ಸಚಿವ ಡಾ.ಬಿ.ರಮೇಶ್‌, ಡೀನ್‌ ಪ್ರೊ.ಜಗದೀಶ್‌  ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next