Advertisement
ಬೆಂಗಳೂರು ವಿವಿ, ಮಂಗಳೂರು ವಿವಿ, ಮೈಸೂರು ವಿವಿ, ಕುವೆಂಪು ವಿವಿ, ದಾವಣಗೆರೆ ವಿವಿ ಸೇರಿದಂತೆ ರಾಜ್ಯದಲ್ಲಿ ನಿರಂತರ ತರಗತಿ ನಡೆಸುತ್ತಿರುವ ವಿಶ್ವವಿದ್ಯಾಲಯಗಳು ಪದವಿ ಹಾಗೂ ಸ್ನಾತಕೋತ್ತರ ಪದವಿಯ ಜತೆಗೆ ಕೌಶಲ್ಯ ಆಧಾರಿತ ತರಬೇತಿ ನಡೆಸುತ್ತಿವೆ. ಇನ್ನು ಕೆಲವು ವಿಶ್ವವಿದ್ಯಾಲಯಗಳು ಕೌಶಲಾಭಿವೃದ್ಧಿ ಡಿಪ್ಲೊಮಾ ಕೋರ್ಸ್ ಕೂಡ ಆರಂಭಿಸಿವೆ.ಇದೇ ಮಾದರಿಯಲ್ಲಿ ಮೈಸೂರಿನಲ್ಲಿರುವ ರಾಜ್ಯ ಮುಕ್ತ ವಿಶ್ವವಿದ್ಯಾಲಯವೂ ಪ್ರಸಕ್ತ ಸಾಲಿನಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ತರಬೇತಿ ಕಡ್ಡಾಯಗೊಳಿಸಿದೆ.
ಬೇಸಿಕ್ ಕಂಪ್ಯೂಟರ್ ನೆಟ್‌ವರ್ಕಿಂಗ್, ಕಂಪ್ಯೂಟರ್ ಮೂಲ ತತ್ವಗಳು, ಬಹುಮಾಧ್ಯಮ, ವೆಬ್‌ಡಿಸೈನಿಂಗ್, ಡೆಸ್ಕ್ಟಾಪ್ ಪಬ್ಲಿಷಿಂಗ್, ಇಂಗ್ಲಿಷ್ ಫಾರ್ ಕಮ್ಯೂನಿಕೇಷನ್ ಆ್ಯಂಡ್ ಸಾಫ್ಟ್ ಸ್ಕಿಲ್ ಹಾಗೂ ಆಡಳಿತ ಕನ್ನಡ ಹೀಗೆ ಏಳು ಮಾದರಿಯ ಕೌಶಲಾಭಿವೃದ್ಧಿ ತರಬೇತಿ ಪ್ರಸಕ್ತ ಸಾಲಿನಲ್ಲಿ ರಾಜ್ಯ ಮುಕ್ತ ವಿವಿಯ ವಿವಿಧ ಕೋರ್ಸ್ ಸೇರಿದ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಕೂಡ ಒಪ್ಪಿಗೆ ನೀಡಿದೆ.
Related Articles
Advertisement
ಕೌಶಲ್ಯ ತರಬೇತಿ ಆಧಾರದಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ. ಇದು ಸ್ವ ಉದ್ಯೋಗ ಅಥವಾ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಅನುಕೂಲವಾಗುವಂತೆ ನೀಡುವ ತರಬೇತಿಯಾಗಿದೆ. ಪ್ರತಿ ಹಂತದ ಕೌಶಲಾಭಿವೃದ್ಧಿ ಶಿಕ್ಷಣವು 2 ಶ್ರೇಯಾಂಕ ಹೊಂದಿರುತ್ತದೆ. ಅಂತಿಮ ವರ್ಷದಲ್ಲಿ ಪದವಿಯ ಜತೆಗೆ ಕೌಶಲಾಭಿವೃದ್ಧಿ ತರಬೇತಿ ಪಡೆದಿರುವ ಪ್ರಮಾಣ ಪತ್ರ ಕೂಡ ವಿತರಿಸಲಾಗುತ್ತದೆ. ವಿಷಯವಾರು ತಜ್ಞರಿಂದಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ ಎಂದು ವಿವಿಯ ಮೂಲ ಖಚಿತಪಡಿಸಿದೆ.
ಅಭ್ಯರ್ಥಿಗಳ ಔದ್ಯೋಗಿಕ ಅನುಕೂಲಕ್ಕಾಗಿ ಕೌಶಲಾಭಿವೃದ್ಧಿ ತರಬೇತಿ ಪ್ರಸಕ್ತ ಸಾಲಿನಿಂದ ಆರಂಭಿಸಿದ್ದೇವೆ. ಇದು ಎಲ್ಲರಿಗೂ ಕಡ್ಡಾಯವಾಗಿದೆ. ಮುಂದಿನ ವರ್ಷದಿಂದ ಕೌಶಲತೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್‌ಗಳನ್ನು ತೆರೆಯುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ.– ಪ್ರೊ.ಡಿ.ಶಿವಲಿಂಗಯ್ಯ, ಕುಲಪತಿ, ರಾಜ್ಯ ಮುಕ್ತ ವಿವಿ, ಮೈಸೂರು – ರಾಜು ಖಾರ್ವಿ ಕೊಡೇರಿ