ಬೆಳಗಾವಿ: ಲೋಕಸಭೆಯಲ್ಲಿ ಗಡಿನಾಡು ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು ಯಾರು. ಬೆಳಗಾವಿ ಕ್ಷೇತ್ರದ ಹಾಲಿ ಸಂಸದ ಸುರೇಶ ಅಂಗಡಿ ದಾಖಲೆ ಸರಿಗಟ್ಟುವರೇ ಎಂಬ ಬಹುದಿನಗಳ ಕುತೂಹಲಕ್ಕೆ ನಾಳೆ ಮೇ 23 ರಂದು ತೆರೆ ಬೀಳಲಿದೆ. ಕಳೆದ ಒಂದು ತಿಂಗಳಿಂದ ನಡೆದಿರುವ ವಿಭಿನ್ನ ಚರ್ಚೆ ಮತ್ತು ಲೆಕ್ಕಾಚಾರಕ್ಕೆ ಉತ್ತರ ಸಿಗಲಿದೆ.
ಕಳೆದ ಏ.23 ರಂದು ನಡೆದ ಮತದಾನದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಶೇ. 66.59 ರಷ್ಟು ಹಾಗೂ ಚಿಕ್ಕೋಡಿ ಕ್ಷೇತ್ರದಲ್ಲಿ ಶೇ. 75.42 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಮತಯಂತ್ರಗಳಲ್ಲಿ ಭದ್ರವಾಗಿರುವ ಅಭ್ಯರ್ಥಿಗಳ ಭವಿಷ್ಯ ಗುರುವಾರ ಬೆಳಗ್ಗೆ ಬಹಿರಂಗವಾಗಲಿದೆ.
ರಾಜ್ಯದ ಜನರ ಗಮನ ಸೆಳೆದಿರುವ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಸುರೇಶ ಅಂಗಡಿ, ಕಾಂಗ್ರೆಸ್‌ದಿಂದ ಡಾ. ವಿ.ಎಸ್. ಸಾಧುನವರ ಹಾಗೂ 55 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ಹಾಲಿ ಸಂಸದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ, ಬಿಜೆಪಿಯ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ 11 ಜನ ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದಾರೆ.
ಚುನಾವಣೆ ಘೋಷಣೆಯಾದಾಗಿನಿಂದ ಮೊದಲು ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಅಭ್ಯರ್ಥಿಗಳು ನಂತರ ಮತದಾರರ ಮನವೊಲಿಕೆಗಾಗಿ ಸಾಕಷು ಕಸರತ್ತು ಮಾಡಿದ್ದರು. ಈ ಎಲ್ಲ ಪ್ರಯತ್ನಗಳಿಗೆ ನಾಳೆ ಪ್ರತಿಫಲ ಸಿಗಲಿದೆ.
ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳೆರಡೂ ಪ್ರಚಾರದಲ್ಲಿ ಸಾಕಷ್ಟು ಪೈಪೋಟಿ ನಡೆಸಿದರು. ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಂತೆ ಕಂಡುಬಂದಿದ್ದ ಬಿಜೆಪಿ ಚಿಕ್ಕೋಡಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಕರೆಸಿದರೆ ಕಾಂಗ್ರೆಸ್ ಸಹ ಇದರಲ್ಲಿ ಹಿಂದೆ ಬೀಳಿಲಿಲ್ಲ. ಪ್ರಧಾನಿ ಭಾಷಣ ಮಾಡಿದ ಮರುದಿನವೇ ಕ್ಷೇತ್ರದಲ್ಲೇ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕರೆಸಿ ಪ್ರಚಾರ ಮಾಡಿತ್ತು.
•ಕೇಶವ ಆದಿ