Advertisement

ನವಲೂರಿನ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ 

04:38 PM Apr 19, 2018 | |

ಹುಬ್ಬಳ್ಳಿ: ಬಿಆರ್‌ಟಿಎಸ್‌ ಯೋಜನೆಯ ಬೃಹತ್‌ ಕಾಮಗಾರಿಗಳ ಪೈಕಿ ಒಂದಾಗಿರುವ ನವಲೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ. ಐದು ವರ್ಷಗಳ ಕಾಮಗಾರಿ ಪ್ರತೀಕವಾಗಿ ಒಂದು ಸೇತುವೆ ಮಾತ್ರ ಪೂರ್ಣಗೊಂಡಿದೆ.

Advertisement

ಸೇತುವೆ ಕಾಮಗಾರಿ ವಿಳಂಬದಿಂದ ಈ ಭಾಗದ ಜನರು ರೋಸಿಹೋಗಿದ್ದರು. ನಿತ್ಯವೂ ಧೂಳಿನ ಸಮಸ್ಯೆ ಅನುಭವಿಸುವಂತಾಗಿತ್ತು. ವಾಹನ ದಟ್ಟಣೆ ತೊಂದರೆಯಂತೂ ಹೇಳುವುದೇ ಬೇಡ. ಅಂತೂ ಐದು ವರ್ಷಗಳ ಕಾಮಗಾರಿಯಿಂದ ಎರಡು ಸೇತುವೆಗಳ ಪೈಕಿ ಒಂದು ಪೂರ್ಣಗೊಂಡಿದೆ. ಇನ್ನೊಂದು ಸೇತುವೆ ಶೇ. 85ರಷ್ಟು ಪೂರ್ಣಗೊಂಡಿದೆ. ಹುಬ್ಬಳ್ಳಿಯಿಂದ ಧಾರವಾಡ ಹೋಗುವ ಮಾರ್ಗದ ಎಡಗಡೆ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ವಾಹನದ ದಟ್ಟಣೆಗೆ ಬ್ರೇಕ್‌ ಬಿದ್ದಂತಾಗಿದೆ.

ಸುಗಮ ಸಂಚಾರ: ಕಾಮಗಾರಿ ನಡೆಯುತ್ತಿರುವ ಕಾರಣ ವಾಹನಗಳ ಓಡಾಟಕ್ಕೆ ದೊಡ್ಡ ಸಮಸ್ಯೆಯಾಗಿತ್ತು. ಇದೀಗ ಒಂದು ಸೇತುವೆ ಪೂರ್ಣಗೊಂಡು ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಸದ್ಯಕ್ಕೆ ಹಳೆ ಹಾಗೂ ಹೊಸ ಸೇತುವೆ ಮೇಲೆ ವಾಹನಗಳ ಓಡಾಟ ನಡೆಯುತ್ತಿದ್ದು, ಹಳೇ ಸೇತುವೆ ಮೇಲಿನ ವಾಹನ ಸಂಚಾರವನ್ನು ಬಂದ್‌ ಮಾಡಿ ಹೊಸ ಸೇತುವೆ ಮೇಲೆಯೇ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಚಿಂತನೆ ನಡೆದಿದೆ.

ಬಿಆರ್‌ಟಿಎಸ್‌ಗೆ ಹಳೆ ಸೇತುವೆ: 43 ವರ್ಷ ಹಳೆಯ ಸೇತುವೆ ಬಳಕೆಗೆ ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಬಿಆರ್‌ಟಿಎಸ್‌ ಬಸ್‌ಗಳ ಸಂಚಾರಕ್ಕೆ ಬಳಕೆಯಾಗಲಿದ್ದು, ದ್ವಿಮುಖ ಬಸ್‌ ಸಂಚಾರಕ್ಕೆ ಅನುಕೂಲವಾಗಿರುವುದರಿಂದ ಶೀಘ್ರದಲ್ಲಿ ಈ ಸೇತುವೆಗೆ ಒಂದಿಷ್ಟು ಮಾರ್ಪಾಡು ಮಾಡುವ ಕೆಲಸ ಬಿಆರ್‌ಟಿಎಸ್‌ ಕಂಪನಿಯಿಂದ ನಡೆಯಲಿದೆ. ಈ ಕಾರ್ಯ ಮುಗಿಯುವಷ್ಟರೊಳಗೆ ಇನ್ನೊಂದು ಹೊಸ ಸೇತುವೆ ಕಾಮಗಾರಿಯೂ ಪೂರ್ಣಗೊಳ್ಳಲಿದ್ದು, ಎರಡನ್ನೂ ವಾಹನಗಳ ಸಂಚಾರಕ್ಕೆ ಒದಗಿಸುವ ಯೋಜನೆ ಬಿಆರ್‌ಟಿಎಸ್‌ ಅಧಿಕಾರಿಗಳಲ್ಲಿದೆ.

ವಿಳಂಬ ಯಾಕೆ?
ಸೇತುವೆ ನಿರ್ಮಾಣ ಕಾರ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬಕ್ಕೆ ಪ್ರಮುಖ ಕಾರಣ. ಅಗತ್ಯ ಭೂಮಿಗೆ ಪರಿಹಾರ ನೀಡಲು ಬಿಆರ್‌ಟಿಎಸ್‌ ತಯಾರಿದ್ದರು ಸ್ಥಳೀಯರು ಆರಂಭದಲ್ಲಿ ಸ್ಥಳೀಯರಿಂದ ವಿರೋಧ ನಿರ್ಮಾಣ ಕಾರ್ಯದ ಮೇಲೆ ಪರಿಣಾಮ ಬೀರಿತು. ಇನ್ನೂ ನಿತ್ಯವೂ ಸಂಚಾರ ದಟ್ಟಣೆಯಿಂದ ಕೂಡಿದ್ದ ರಸ್ತೆಯಾಗಿದ್ದರಿಂದ ನಿರ್ಮಾಣ ಕಾರ್ಯಕ್ಕೆ ಮತ್ತೂಂದು ತೊಂದರೆಯಾಗಿ ಪರಿಣಿಮಿಸಿದೆ. ಹೀಗಾಗಿ 2017 ಮಾರ್ಚ್‌ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾಗಿದ್ದ ಸೇತವೆ ಬರೋಬ್ಬರಿ ಒಂದು ವರ್ಷ ವಿಳಂಬವಾಗಿದ್ದು, ಇನ್ನೊಂದು ಸೇತುವೆ ಇನ್ನೂ ನಿರ್ಮಾಣದ ಹಂತದಲ್ಲಿದೆ.

Advertisement

ಹೀಗಿದೆ ಸೇತುವೆ 
ಸೇತುವೆ ನಿರ್ಮಾಣಕ್ಕಾಗಿ ಸುಮಾರು 8.13 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 53 ಮೀಟರ್‌ ಸೇತುವೆ ಸೇರಿದಂತೆ ಒಟ್ಟು 1.3 ಕಿಮೀ ಉದ್ದವಿದೆ. 7.5 ಮೀಟರ್‌ ಅಗಲವಿದ್ದು, ಬೃಹತ್‌ ವಾಹನಗಳ ಸಂಚಾರಕ್ಕೆ ಉತ್ತಮವಾಗಿದೆ. ಎರಡು ಸೇತುವೆಗಳ ನಿರ್ಮಾಣದ ಅಂದಾಜು ವೆಚ್ಚ 44 ಕೋಟಿ ರೂ. ಹೈದರಬಾದ್‌ ಮೂಲದ ಕೆಎಂಇ ಪ್ರೊಜೆಕ್ಟ್ಸ್ ಕಂಪನಿ ನಿರ್ಮಾಣ ಕಾರ್ಯ ಮಾಡುತ್ತಿದ್ದು, ಸರಕಾರಿ ಸ್ವಾಮ್ಯದ ಕೆಆರ್‌ಡಿಸಿಎಲ್‌ ಕಾಮಗಾರಿಗೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.

ರಸ್ತೆ ಅಗಲೀಕರಣದಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ರಸ್ತೆ ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ. ಹಳೆ ಸೇತುವೆ ಬಿಆರ್‌ಟಿಎಸ್‌ ಬಸ್‌ಗಳ ಓಡಾಟಕ್ಕೆ ಬಳಕೆಯಾಗಲಿದ್ದು, ಒಂದೆರಡು ದಿನಗಳಲ್ಲಿ ಹಳೆ ಸೇತುವೆ ಮೇಲಿನ ವಾಹನ ಸಂಚಾರ ತಡೆಯಲಾಗುವುದು. ದುರಸ್ತಿ ನಂತರ ಹಳೆ ಸೇತುವೆ ಹಾಗೂ ಇನ್ನೊಂದು ಹೊಸ ಸೇತುವೆ ಏಕಕಾಲಕ್ಕೆ ಸಂಚಾರಕ್ಕೆ ಮುಕ್ತವಾಗಲಿವೆ.  
ಬಸವರಾಜ ಕೇರಿ, ಉಪ ಪ್ರಧಾನ ವ್ಯವಸ್ಥಾಪಕ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next