Advertisement

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ತೆರೆ

06:45 AM Oct 01, 2017 | Harsha Rao |

ಬೆಂಗಳೂರು/ಮೈಸೂರು: ವೈಭವದ ಜಂಬೂಸವಾರಿ ಮೆರವಣಿಗೆಯೊಂದಿಗೆ 10 ದಿನಗಳ ಮೈಸೂರು ದಸರಾಕ್ಕೆ ಶನಿವಾರ ತೆರೆ ಬಿತ್ತು. ಇದೇ ವೇಳೆ, ಮಂಗಳೂರು, ಶೃಂಗೇರಿ, ಕೊಲ್ಲೂರು, ಬನಶಂಕರಿ ಸಹಿತ ರಾಜ್ಯದ ಇತರೆಡೆಯ “ಶಕ್ತಿ’ ಕೇಂದ್ರಗಳಲ್ಲೂ ಭಕ್ತಿ, ಸಡಗರದಿಂದ ವಿಜಯದಶಮಿ ಆಚರಿಸಲಾಯಿತು.

Advertisement

ಅಪರಾಹ್ನ 2.15ರ ಶುಭ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅರಮನೆಯ ಬಲರಾಮ ದ್ವಾರದ ಬಳಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದರು. ಈ ಬಾರಿಯ ಜಂಬೂಸವಾರಿ ಮೆರವಣಿಗೆಯಲ್ಲಿ 40 ಸ್ತಬ್ಧ ಚಿತ್ರಗಳು, ಹೊರರಾಜ್ಯದ 5 ಕಲಾತಂಡ ಸಹಿತ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ 60 ಕಲಾ ತಂಡಗಳು, 2 ಸಾವಿರ ಕಲಾವಿದರು  ಪಾಲ್ಗೊಂಡಿದ್ದರು.

ಸಂಜೆ 4.45ಕ್ಕೆ ಶುಭ ಕುಂಭ ಲಗ್ನದಲ್ಲಿ ಸಿದ್ದರಾಮಯ್ಯ ಅವರು ಅರಮನೆಯ ಮುಂಭಾಗದಲ್ಲಿ ಹಾಕಿದ್ದ ವಿಶೇಷ ವೇದಿಕೆಯ ಮೇಲೆ ಇತರ ಗಣ್ಯರೊಂದಿಗೆ ದಸರಾ ಗಜಪಡೆಯ ಸಾರಥಿ ಅರ್ಜುನ ಹೊತ್ತು ತಂದ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ, ಮೆಯರ್‌ ಎಂ.ಜೆ. ರವಿಕುಮಾರ್‌, ಜಿಲ್ಲಾಧಿಕಾರಿ ರಂದೀಪ್‌ ಡಿ., ನಗರ ಪೊಲೀಸ್‌ ಆಯುಕ್ತ ಡಾ.ಎಂ.ಸುಬ್ರಹ್ಮಣ್ಯೇಶ್ವರ ರಾವ್‌ ಉಪಸ್ಥಿತರಿದ್ದರು. ಇದೇ ಮೊದಲ ಬಾರಿಗೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಕೂಡ ಸಿಎಂ ಜತೆ ಭಾಗವಹಿಸಿದ್ದರು.

750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ಹೊತ್ತ ಅರ್ಜುನ ಮುಂದೆ ಸಾಗುತ್ತಿದ್ದಂತೆ, ಇತರ ಆನೆಗಳು ಅದಕ್ಕೆ ಸಾಥ್‌ ನೀಡಿದವು. ಸುಮಾರು 5 ಕಿ.ಮೀ.ದೂರ ಮೆರವಣಿಗೆಯಲ್ಲಿ ಸಾಗಿ ಬಂದ ಅರ್ಜುನ, ಸಂಜೆ 7ರ ಸುಮಾರಿಗೆ ಬನ್ನಿಮಂಟಪ ತಲುಪಿದೆ.

ಬನ್ನಿಮಂಟಪದಲ್ಲಿ ಆಕರ್ಷಕ ಕವಾಯತು: ಬಳಿಕ ಸಂಜೆ 8 ಗಂಟೆ ಸುಮಾರಿಗೆ ಬನ್ನಿಮಂಟಪದಲ್ಲಿ ಆಕರ್ಷಕ ಪಂಜಿನ ಕವಾಯತು ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಕುಟುಂಬ ಸದಸ್ಯರು, ಸಚಿವ ಡಾ.ಎಚ್‌.ಸಿ.ಮಹದೇವಪ್ಪಹಾಗೂ ಇತರ ಗಣ್ಯರು ಈ ವೇಳೆ ಉಪಸ್ಥಿತರಿದ್ದರು.

Advertisement

ಭಾರತೀಯ ವಾಯುಪಡೆಯ ಯೋಧರು ಪ್ರದರ್ಶಿಸಿದ ವೈಮಾನಿಕ ಕಸರತ್ತು ಜನತೆಗೆ ರೋಮಾಂಚಕಾರಿ ಅನುಭವ ನೀಡಿತ್ತು. ಆಗಸದಲ್ಲಿ ಭಾರೀ ಸದ್ದು ಮಾಡಿದ ವಿವಿಧ ಬಗೆಗಳ ಲೋಹದ ಹಕ್ಕಿಗಳ ಆಕರ್ಷಣೆಯ ಜತೆಗೆ ಯೋಧರು ಸಾಹಸಮಯ ಪ್ರದರ್ಶನ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next