Advertisement

ಮೂರು ದಿನಗಳ ರಾಯರ ಆರಾಧನಾ ಮಹೋತ್ಸವಕ್ಕೆ ತೆರೆ

11:48 AM Aug 11, 2017 | |

ಬೆಂಗಳೂರು: ಉತ್ತರಾರಾಧನೆಯೊಂದಿಗೆ ಗುರುಸಾರ್ವಭೌಮ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನ ಮಹೋತ್ಸವಕ್ಕೆ ಗುರುವಾರ ಅದ್ದೂರಿ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ನಡೆದ ಆರಾಧನೆಯಲ್ಲಿ ನಗರದ ವಿವಿಧೆಡೆ ಲಕ್ಷಾಂತರ ಭಕ್ತರು ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾಗಿದ್ದಾರೆ.

Advertisement

ಉತ್ತರಾರಾಧನೆ ಅಂಗವಾಗಿ ನಗರದ ಎಲ್ಲಾ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಅಭಿಷೇಕ, ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಂತಿಮ ದಿನವಾದ ಗುರುವಾರ ರಾಯರ ಮಠದ ಆವರಣ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಗುರುರಾಯರ ರಥೋತ್ಸವ ಅದ್ದೂರಿಯಾಗಿ ನಡೆಯಿತು. ಭಕ್ತರು ಭಜನೆ, ಕೀರ್ತನೆಗಳನ್ನು ಹಾಡುತ್ತಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

ಮಂಗಳವಾರ ಪೂರ್ವಾರಾಧನೆ ಮತ್ತು ಬುಧವಾರ ಮಧ್ಯಾರಾಧನೆ ನಡೆದರೆ ಗುರುವಾರ ಉತ್ತರಾರಾಧನೆಯೊಂದಿಗೆ ಆರಾಧನಾ ಕಾರ್ಯಕ್ರಮಗಳಿಗೆ ತೆರೆಬಿತ್ತು. ಅಂತಿಮ ದಿನ ವಿಶೇಷ ಪೂಜೆ, ರಥೋತ್ಸವಗಳೊಂದಿಗೆ ರಾಯರಿಗೆ ದೀಪೋತ್ಸವ, ಸತ್ಯನಾರಾಯಣ ಪೂಜೆಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ರಾಯರ ಕುರಿತಾದ ಪ್ರವಚನ, ದಾಸವಾಣಿ ಮತ್ತಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ರಾಜರಾಜೇಶ್ವರಿ ನಗರದ ಹರಿದಾಸನಗರ ರಾಘವೇಂದ್ರ ಸ್ವಾಮಿ ಮಠ, ಮಲ್ಲೇಶ್ವರದ ಸುಧೀಂದ್ರ ನಗರದ ರಾಯರ ಮಠ, ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಮಠ, ಶಾಖಾಂಬರಿನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶ್ರೀ ವ್ಯಾಸರಾಜ ಮಠ(ಸೋಸಲೆ), ಲಗ್ಗೆರೆ ಹಳೆ ಬಸ್‌ ನಿಲ್ದಾಣದ ಹಿಂಬಾಗದ ರಾಯರ ಮಠ, ಕೆಂಗೇರಿ ಉಪನಗರದ ರಾಘವೇಂದ್ರ ಸ್ವಾಮಿಗಳ ಮಠ, ಯಲಹಂಕ ಉಪನಗರದ ರಾಯರ ಮಠ, ಪ್ರಕಾಶನಗರ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಿ ಸೇರಿದಂತೆ ಹಲವೆಡೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next