Advertisement

ಕೃಷಿ ಮೇಳಕ್ಕೆ ತೆರೆ

11:12 AM Dec 12, 2017 | Team Udayavani |

ರಾಯಚೂರು: ಇಲ್ಲಿನ ಕೃಷಿ ವಿವಿಯಲ್ಲಿ ನಡೆದ ನಾಲ್ಕು ದಿನಗಳ ಕೃಷಿ ಮೇಳಕ್ಕೆ ಸೋಮವಾರ ತೆರೆ ಬಿತ್ತು. ಜಲ-ನೆಲ ಸಿರಿ, ಧಾನ್ಯ ಸಿರಿ, ಜೀವನ ಸಿರಿ ಎಂಬ ಧ್ಯೇಯವಾಕ್ಯದೊಂದಿಗೆ ಹಮ್ಮಿಕೊಂಡ ಕೃಷಿ ಮೇಳಕ್ಕೆ ನಿರೀಕ್ಷೆ ಮೀರಿ ಜನ ಸ್ಪಂದನೆ ದೊರಕಿತು.

Advertisement

ಈ ಬಾರಿ ಮೇಳದಲ್ಲಿ ಸಿರಿಧಾನ್ಯಗಳ ಉತ್ತೇಜನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ನಿರೀಕ್ಷಿತ ಗುರಿ ತಲುಪಲಾಗದಿದ್ದರೂ ಕೊಂಚ ಮಟ್ಟಿಗಾದರೂ ರೈತರನ್ನು ತಲುಪುವಲ್ಲಿ ಮೇಳ ಯಶಸ್ವಿಯಾಗಿದೆ. ನಾಲ್ಕು ದಿನಗಳ ಮೇಳದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ. ಅದರಲ್ಲಿ ಕೃಷಿಯೇತರರೇ ಹೆಚ್ಚಾಗಿದ್ದರು ಎನ್ನುವುದು ವಿಶೇಷ.

ಹೈದರಾಬಾದ್‌ ಕರ್ನಾಟಕ ಭಾಗದ ಆರು ಜಿಲ್ಲೆಗಳ ರೈತರಿಗಾಗಿ ಮೇಳ ನಡೆಸಲಾಯಿತು. ಕೃಷಿ ಕ್ಷೇತ್ರದ ಉತ್ತೇಜನಾರ್ಥವಾಗಿ ವಿವಿಯಿಂದ ಆಯೋಜಿಸಿದ್ದ ಮೇಳದಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ನೀಡುವ ಪ್ರಯತ್ನ ನಡೆಯಿತು. ಕೃಷಿ ವಿವಿ ಕಳೆದ ವರ್ಷದಲ್ಲಿ ಮಾಡಿದ ಸಂಶೋಧನೆ, ಪ್ರಯೋಗಗಳು, ಬೀಜೋತ್ಪಾದನೆ, ನವ ತಂತ್ರಜ್ಞಾನದಿಂದ ತಯಾರಿಸಿದ ಯಂತ್ರ ಪರಿಕರಗಳು, ಕೃಷಿ, ತೋಟಗಾರಿಕೆ ಸೇರಿ ವಿವಿಧ ಇಲಾಖೆಗಳಿಂದ ಮಾಹಿತಿ ಲೋಕವೇ ಅನಾವರಣಗೊಂಡಿತ್ತು.

ಸಮಗ್ರ ಕೃಷಿ ಪದ್ಧತಿಯಲ್ಲಿ ಸಾಧನೆ ಮಾಡಿದ ರೈತರು, ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ 18 ಕೃಷಿಕರಿಗೆ ಶ್ರೇಷ್ಠ ಕೃಷಿಕ, ಶ್ರೇಷ್ಠ ಕೃಷಿಕ ಮಹಿಳೆ, ಯುವ ಕೃಷಿಕ, ಯುವ ಕೃಷಿಕ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಿರಿಧಾನ್ಯಗಳಿಗೆ ಆದ್ಯತೆ: ಸಿರಿಧಾನ್ಯ ಬಳಸಿ ಅಪೌಷ್ಠಿಕತೆ ಅಳಿಸಿ ಎಂಬ ಅಡಿ ಬರಹದೊಂದಿಗೆ ವೇದಿಕೆ ನಿರ್ಮಿಸಲಾಗಿತ್ತು. ಅಲ್ಲದೇ, ಬಣ್ಣ ಬಣ್ಣದ ಮಡಕೆಗಳಲ್ಲಿ ನವಣೆ, ಸಾಮೆ, ಕೊರ್ಲೆ, ಮಿಲ್ಲೆಟ್‌ ಸೇರಿ ಏಕದಳ ಧಾನ್ಯಗಳನ್ನು ತುಂಬಿ ಪ್ರದರ್ಶನಕ್ಕಿಡಲಾಗಿತ್ತು. 20ಕ್ಕೂ ಅಧಿಕ ಮಳಿಗೆಗಳನ್ನು ಸಿರಿಧಾನ್ಯಗಳ ವರ್ತಕರಿಗೆ ನೀಡಲಾಗಿತ್ತು. ಇನ್ನು ಕೃಷಿ ವಿವಿಯಿಂದಲೇ ಕಡಿಮೆ ದರದಲ್ಲಿ ಸಿರಿಧಾನ್ಯಗಳ ಖಾದ್ಯ ಪದಾರ್ಥಗಳನ್ನು ಮಾಡಲಾಗಿತ್ತು.

Advertisement

ಮಳಿಗೆ ದರ ಹೆಚ್ಚಳಕ್ಕೆ ಆಕ್ಷೇಪ: ಈ ಬಾರಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಮಳಿಗೆಗಳ ದರ ಹೆಚ್ಚಳ. ಮೇಳದಲ್ಲಿ ಸುಮಾರು 290ಕ್ಕೂ ಹೆಚ್ಚು ಮಳಿಗೆಗಳನ್ನು ಅಳವಡಿಸಲಾಗಿತ್ತು. ಅದರಲ್ಲಿ 215 ಚಿಕ್ಕ ಮಳಿಗೆಗಳಿದ್ದವು. ಆದರೆ, ಒಂದು ಮಳಿಗೆಗೆ 9500 ಸಾವಿರ ರೂ. ದರ ನಿಗದಿ ಮಾಡಿದ್ದರೆ, ಎಕಾನಮಿ ಸ್ಟಾಲ್‌ಗ‌ಳಿಗೆ 18 ಸಾವಿರ ರೂ. ನಿಗದಿ ಮಾಡಲಾಗಿತ್ತು. ಅದರಲ್ಲಿ ಸಿರಿಧಾನ್ಯಗಳು, ಪುಸ್ತಕ ಮಳಿಗೆಗಳು ಸೇರಿ ಇನ್ನಿತರ ಮಳಿಗೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ವ್ಯಾಪಾರವಾಗದ ಕಾರಣ ವರ್ತಕರು ಬೇಸರ ವ್ಯಕ್ತಪಡಿಸಿದರು. ಮುಖ್ಯವಾಗಿ ಅನಧಿಕೃತ ಮಳಿಗೆಗಳನ್ನು ಹಾಕಲು ವಿವಿಯವರು ಅವಕಾಶ ನೀಡಬಾರದು. ಒಂದು ವೇಳೆ ಹಾಕುವುದಿದ್ದರೆ ಬೇರೆ ಕಡೆ ಸ್ಥಳ ನಿಗದಿ ಮಾಡಬೇಕಿತ್ತು. ನಾವು ನಿರೀಕ್ಷಿಸಿದಷ್ಟು ವ್ಯಾಪಾರವಾಗದೆ ನಷ್ಟ ಅನುಭವಿಸುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ನಾಲ್ಕು ಲಕ್ಷಕ್ಕೂ ಅಧಿಕ ಜನ: ಕಳೆದ ಬಾರಿ ಕೃಷಿ ಮೇಳಕ್ಕೆ ಮೂರು ಲಕ್ಷಕ್ಕೂ ಅಧಿಕ ಜನ ಆಗಮಿಸಿದ್ದರು. ಆದರೆ, ಈ ಬಾರಿ ನಾಲ್ಕು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡಿದರು. ಸಾಂಕೇತಿಕವಾಗಿ ಚಾಲನೆ ನೀಡಿದ ದಿನವೇ 40 ಸಾವಿರಕ್ಕೂ ಅಧಿಕ ಜನ ಕೃಷಿ ಮೇಳಕ್ಕೆ ಆಗಮಿಸಿದ್ದರು. ಶನಿವಾರ ಈ ಸಂಖ್ಯೆ ಒಂದು ಲಕ್ಷ ಸಮೀಪಿಸಿತ್ತು. ವಿವಿ ಮಾಹಿತಿ ಪ್ರಕಾರ ರವಿವಾರ ಎರಡು ಲಕ್ಷ ಜನ ಭೇಟಿ ನೀಡಿದ್ದಾರೆ. ಕೊನೆ ದಿನವಾದ ಸೋಮವಾರವೂ 50 ಸಾವಿರಕ್ಕೂ ಅಧಿ ಕ ಜನ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಟಾಚಾರದ ಕಾರ್ಯಕ್ರಮಗಳು: ವಿವಿ ಕುಲಪತಿ ಹೇಳಿದಂತೆ ಕೃಷಿ ಮೇಳಕ್ಕೆ 25 ಲಕ್ಷ ರೂ. ಖರ್ಚಾಗಲಿದೆ ಎಂದು ತಿಳಿಸಿದ್ದರು. ಸುಸಜ್ಜಿತ ವೇದಿಕೆ, ಮಳಿಗೆ, ಸ್ವಾಗತ ಕಮಾನು ಫಲಪುಷ್ಪ ಪ್ರದರ್ಶನ ಸೇರಿ ಇನ್ನಿತರ ವಿಚಾರಗಳಿಗೆ ಹಣ ವಿನಿಯೋಗಿಸಲಾಗಿದೆ. ಆದರೆ, ಸುಂದರ ವೇದಿಕೆ ಇದ್ದರೂ ಸಾಂಸ್ಕೃತಿಕ ಕಾರ್ಯಕ್ರಮಗಳ ಕೊರತೆ ಎದ್ದು ಕಂಡಿತು. ಕೆಲ ಕಲಾವಿದರು ವೇದಿಕೆಯಲ್ಲಿ ಪ್ರದರ್ಶನ ನೀಡಿದರಾದರೂ ಬಹಳಷ್ಟು ಕಾರ್ಯಕ್ರಮಗಳು ನೀರಸ ಎನಿಸಿದವು. 

ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೆ ಸಭಾಂಗಣ ಖಾಲಿ ಖಾಲಿಯಾಗಿತ್ತು. ಮುಂಗಾರು, ಹಿಂಗಾರು ಬೆಳೆ ಕೈಗೆ ಬರುವ ವೇಳೆ ಇದಾಗಿದ್ದು, ಬಹುತೇಕ ಕೃಷಿಕರು ಮೇಳದಿಂದ ದೂರವುಳಿದಿದ್ದರು. ಒಟ್ಟಾರೆ ನಾಲ್ಕು ದಿನಗಳ ಮೇಳ ಹಲವು ವಿಚಾರಗಳಿಂದ ಸುದ್ದಿ ಮಾಡಿದ್ದಂತೂ ಸುಳ್ಳಲ್ಲ

ಕೃಷಿ ಮೇಳಕ್ಕೆ ನಿರೀಕ್ಷೆ ಮೀರಿ ಜನ ಆಗಮಿಸಿದ್ದಾರೆ. ನಾವು ಡಿಸೆಂಬರ್‌ನಲ್ಲಿ ಆಯೋಜಿಸಿದರೆ ರೈತರಿಗೆ ಬಿಡುವು ಸಿಗಲಿದೆ ಎಂದು ಭಾವಿಸಿದ್ದೆವು. ಆದರೆ, ಹತ್ತಿ, ಭತ್ತ ಬೆಳೆಯುವ ಈ ಭಾಗದಲ್ಲಿ ರೈತರಿಗೆ ಪುರುಸೊತ್ತು ಸಿಕ್ಕಿಲ್ಲ. ಕೃಷಿ ಇಲಾಖೆ ಕೂಡ ಸಾರಿಗೆ ಬಸ್‌ಗಳಲ್ಲಿ ರೈತರನ್ನು ಕರೆ ತರುವುದಾಗಿ ತಿಳಿಸಿತ್ತು. ಅದು ಕೂಡ ಆಗಿಲ್ಲ. ಈ ಬಾರಿ ಉಂಟಾದ ಲೋಪದೋಷಗಳನ್ನು ಸರಿಪಡಿಸಿಕೊಂಡು ಮುಂದಿನ ವರ್ಷ ಇನ್ನೂ ಉತ್ತಮವಾಗಿ ಆಚರಿಸುವ ಉದ್ದೇಶ ಹೊಂದಿದ್ದೇವೆ.
 ಡಾ| ಪಿ.ಎಂ.ಸಾಲಿಮಠ, ಕೃಷಿ ವಿವಿ ಕುಲಪತಿ

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಲಕ್ಷಕ್ಕೂ ಅಧಿಕ ಜನ ಮೇಳಕ್ಕೆ ಆಗಮಿಸಿದ್ದಾರೆ. ಕೊನೆ ದಿನ ಒಂದು
ಲಕ್ಷ ಜನ ಆಗಮಿಸಿದ್ದು, ಒಟ್ಟಾರೆ ನಾಲ್ಕು ದಿನದಲ್ಲಿ 4.5 ಲಕ್ಷ ಜನ ಆಗಮಿಸಿದ್ದಾರೆ. ಸಾರ್ವಜನಿಕರಿಂದ ಮೇಳಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.
 ಎಂ.ಜಿ. ಪಾಟೀಲ್‌, ನೋಂದಣಿ ಸಮಿತಿ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next